ಮಡಿಕೇರಿ: ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಸೇರ್ಪಡೆ ಆಗಿರುವ ಐಎನ್‌ಎಸ್ ಶಿವಾಲಿಕ್ ಮಾದರಿಯ ಯುದ್ಧ ನೌಕೆಯನ್ನು ಭಾರತೀಯ ನೌಕಾಪಡೆಯ ಪೂರ್ವ ವಿಭಾಗದ ವೈಸ್ ಅಡ್ಮಿರಲ್ ಭಿಸ್ವಜಿತ್ ದಾಸ್ ಗುಪ್ತ ಸೋಮವಾರ ಲೋಕಾರ್ಪಣೆ ಮಾಡಿದರು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಸೇನೆಯು ಅತ್ಯುತ್ತಮ ಮಾದರಿಯ ನೌಕಾ ಪಡೆಯನ್ನು ಹೊಂದಿದೆ. ಭಾರತೀಯ ನೌಕಾಪಡೆಗೆ ತನ್ನದೇ ಆದ ಸ್ಥಾನವಿದ್ದು, ನೌಕಾಪಡೆಗೆ ಹೆಚ್ಚಿನ ಯುವಜನರು ಸೇರ್ಪಡೆಯಾಗಬೇಕು ಎಂದರು. ಕೊಡಗಿನ ಜನರು ಸೇನಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶ್ಲಾ ಸಿದರು.
ಭಾರತೀಯ ನೌಕಾಪಡೆಯಿಂದ ಭವಿಷ್ಯದಲ್ಲಿ 41 ಯುದ್ಧ ಹಡಗು ನಿರ್ಮಾಣವಾಗಲಿದ್ದು, ಇದರಲ್ಲಿ 31 ಯುದ್ಧ ಹಡಗುಗಳನ್ನು ಭಾರತದಲ್ಲಿಯೇ ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಹಾಗೆಯೇ ಕೊಚ್ಚಿಯಲ್ಲಿ ಖಾಸಗಿಯಾಗಿ ಯುದ್ಧ ಹಡಗು ನಿರ್ಮಾಣವಾಗಲಿದೆ. ರಾಷ್ಟ್ರದ ಭದ್ರತೆಗೆ ನೌಕಾಪಡೆ ಹೆಚ್ಚಿನ ಒತ್ತು ನೀಡಿದೆ ಎಂದು ಭಿಸ್ವಜಿತ್ ದಾಸ್ ಗುಪ್ತ ಅವರು ತಿಳಿಸಿದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷರಾದ ಕರ್ನಲ್(ನಿವೃತ್ತ) ಕೆ.ಸಿ. ಸುಬ್ಬಯ್ಯ ಅವರು ಮಾತನಾಡಿ, ಜನರಲ್ ತಿಮ್ಮಯ್ಯ ಮ್ಯೂಸಿಯಂ ಅಭಿವೃದ್ಧಿಗೆ ಭಾರತೀಯ ಸೇನಾ ವಿಭಾಗದ ವಾಯುಪಡೆ, ನೌಕಾಪಡೆ, ಭೂಸೇನಾಪಡೆ ಹೀಗೆ ಎಲ್ಲರೂ ಕೈಜೋಡಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ:10 ದಿನ ಅಧಿವೇಶನ ನಡೆಸಲು ಕಲಾಪ ಸಲಹಾ ಸಮಿತಿ ನಿರ್ಧಾರ
ರಿಯರ್ ಅಡ್ಮಿರಲ್ ಉತ್ತಯ್ಯ ಅವರು ನೌಕಾಪಡೆಯ ಸಬ್‌ಮೆರೀನ್ ಉದ್ಘಾಟಿಸಿದರು. ಲೆ|ಜ| ಪಿ.ಸಿ. ತಿಮ್ಮಯ್ಯ (ನಿವೃತ್ತ) ಅವರು ರಿಯರ್ ಅಡ್ಮಿರಲ್ ಉತ್ತಯ್ಯ ಅವರಿಗೆ ಉಡಿಕತ್ತಿ ನೀಡಿ ಗೌರವಿಸಿದರು. ಲೆ|ಜ| (ನಿವೃತ್ತ) ಕೆ.ಪಿ. ನಂಜಪ್ಪ, ಜಿಲ್ಲಾಧಿಕಾರಿ ಡಾ| ಬಿ.ಸಿ. ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಉಪಸ್ಥಿತರಿದ್ದರು.