ಕಾರವಾರ: ದೇಶದ 75ನೇ ವರ್ಷದ ಸ್ವಾತಂತ್ರ್ಯೋತ್ಸದ ನಿಮಿತ್ತ “ಆಜಾದಿ ಕಾ ಅಮೃತ್ ಮಹೋತ್ಸವ’ದ ಭಾಗವಾಗಿ ಭಾರತೀಯ ನೌಕಾಪಡೆ ದೇಶದ 75 ದ್ವೀಪಗಳಲ್ಲಿ ಧ್ವಜಾರೋಹಣ ನೆರವೇರಿಸುತ್ತಿದೆ. ಶುಕ್ರವಾರ ಅಂಜುದೀವ್‌ನಲ್ಲಿ ಸಹ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು.
ಕಾರವಾರ ಸನಿಹದ ನೌಕಾನೆಲೆಯ ಪ್ರಮುಖ ದ್ವೀಪ ಅಂಜುದೀವ್‌ನಲ್ಲಿ ರಾಜ್ಯ ನೌಕಾ ವಲಯದ ಫ್ಲಾÂಗ್ ಆಫೀಸರ್ ಮಹೇಶ್ ಸಿಂಗ್ ಉಪಸ್ಥಿತಿಯಲ್ಲಿ ಧ್ವಜಾರೋಹಣ ಮಾಡಿ ಆಜಾದಿ ಕಾ ಅಮೃತ್ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ರಕ್ಷಣ ಸಚಿವ ರಾಜನಾಥ ಸಿಂಗ್ ನೌಕಾಸೇನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಳಿಕ ಕರ್ನಾಟಕ ನೌಕಾ ವಲಯದ ಫ್ಲ್ಯಾಗ್ ಆಫೀಸರ್ ಮಹೇಶ್ ಸಿಂಗ್ ಕಾರವಾರ ಬಳಿಯ ಅಂಜುದೀವ್ ದ್ವೀಪದಲ್ಲಿ ಧ್ವಜಾರೋಹಣ ನೆರವೇರಿಸಿ, ಅಂಜುದೀವ್ ದ್ವೀಪವು ಭಾರತೀಯ ನೌಕಾಪಡೆಗೆ ರಕ್ಷಣೆ ದೃಷ್ಟಿಯಲ್ಲಿ ಪ್ರಮುಖವಾಗಿದೆ ಎಂದರು. ಇದೇ ವೇಳೆ ನೌಕಾಪಡೆಯ ಬ್ಯಾಂಡ್‌ನಿಂದ ರಾಷ್ಟ್ರಗೀತೆ ನುಡಿಸಲಾಯಿತು.
ಭಾರತ ವಶಪಡಿಸಿಕೊಂಡ ಕೊನೆಯ ದ್ವೀಪ :
1498ರಲ್ಲಿ ವಾಸ್ಕೋಡಗಾಮ ಕೊಚ್ಚಿನ್‌ನಿಂದ ಪೋರ್ಚುಗೀಸ್‌ಗೆ ಹಿಂತಿರುಗುವಾಗ ಅಂಜುದೀವ್‌ಗೆ ಭೇಟಿ ನೀಡಿದ. ಮೂರು ಸಲ ವಾಸ್ಕೋಡಗಾಮ ಅಂಜುದೀವ್‌ಗೆ ಬಂದು ಉಳಿದ ಇತಿಹಾಸವಿದೆ. 1505ರಲ್ಲಿ ಗೋವಾ ಪೋರ್ಚುಗೀಸ್ ವಸಾಹತುವಿನ ಮೊದಲ ಪ್ರತಿನಿಧಿಯಾಗಿ ಪೋರ್ಚುಗಲ್‌ನಿಂದ ಬಂದ ಫ್ರಾನ್ಸ್‌ನ ಡಿ ಅಲ್ಲೇಡ್ ಲೇಡಿ ಆಫ್ ಬೋತ್ರೋಸ್ ಚರ್ಚ್ ನಿರ್ಮಿಸಿದ. ಅಂಜುದೀವ್‌ನಲ್ಲಿ ಕೋಟೆ ಸಹ ಕಟ್ಟಲಾಯಿತು. ಲೇಡಿ ಆಫ್ ಸ್ಪ್ರಿಂಗ್ ಎಂದು ಕರೆಯಲ್ಪಡುವ ಪೋರ್ಚುಗೀಸರ ದೇವತೆಗಾಗಿ ಚರ್ಚ್ ನಿರ್ಮಿಸಲಾಗಿತ್ತು.
1.5 ಚದರ ಕಿ.ಮೀ. ವಿಸ್ತಾರದ ಈ ದ್ವೀಪವನ್ನು 1961ರಲ್ಲಿ ಭಾರತ ವಶಪಡಿಸಿ ಕೊಂಡಿತ್ತು. 1998ರ ಬಳಿಕ ಇದು ಭಾರತೀಯ ನೌಕಾಪಡೆಯ ಸೊತ್ತಾಗಿದ್ದು, ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧವಿದೆ.