Advertisement

ನಾವುಂದ ಗ್ರಾಮದಲ್ಲಿಲ್ಲ ರುದ್ರಭೂಮಿ: ಹೆಣ ಸುಡಲು 20 ಕಿ.ಮೀ. ಅಲೆದಾಟ!

10:23 PM Jan 09, 2023 | Team Udayavani |

ಕುಂದಾಪುರ: ನಾವುಂದ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಶವಸಂಸ್ಕಾರಕ್ಕೆ ಶ್ಮಶಾನವಿಲ್ಲ. ಅಂತ್ಯ ಸಂಸ್ಕಾರ ಮಾಡಬೇಕಾದರೆ 20 ಕಿ.ಮೀ. ದೂರದ ಕುಂದಾಪುರದ ರುದ್ರಭೂಮಿಗೆ ಹೆಣವನ್ನು ಹೊತ್ತೂಯ್ಯಬೇಕಾದ ಅನಿವಾರ್ಯತೆ ಜನರದ್ದು. ಅಂಗೈಯಗಲ ಜಾಗವಿರುವ ಗ್ರಾಮಸ್ಥರ ಹೆಣಗಾಟ ಯಾರೂ ಕೇಳುವವರೇ ಇಲ್ಲದಂತಾಗಿದೆ.

Advertisement

ಬೈಂದೂರು ತಾಲೂಕಿನ ನಾವುಂದ ಗ್ರಾಮದಲ್ಲಿ ರುದ್ರಭೂಮಿಯಿಲ್ಲದೆ ಜನ ಹೆಣ ಸುಡಲು ಪರದಾಡುವಂತಾಗಿದೆ. ಅಲ್ಲಿಂದ ಸುಮಾರು 20 ಕಿ.ಮೀ. ದೂರದ ಕುಂದಾಪುರ ಪುರಸಭೆ ವ್ಯಾಪ್ತಿಯ ಸಂಗಮ್‌ ಬಳಿಯ ಹಿಂದೂ ರುದ್ರಭೂಮಿಗೆ ಹೆಣವನ್ನು ತಂದು ಸುಡುವಂತ ಪರಿಸ್ಥಿತಿಯಿದೆ.

ಹಿಂದೆ ಇತ್ತು, ಈಗಿಲ್ಲ
ನಾವುಂದ ಗ್ರಾಮದಲ್ಲಿ ಬಹಳ ವರ್ಷಗಳ ಹಿಂದೆ ಪಂಚಾಯತ್‌ ಕಚೇರಿಯ ಸಮೀಪದ ಸುಮಾರು ಜಾಗವೊಂದರಲ್ಲಿ ಶ್ಮಶಾನವಿತ್ತು. ಅಲ್ಲಿಯೇ ಎಲ್ಲ ಸಮುದಾಯದ ಜನರು ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದರು. ಆದರೆ ಕಳೆದ 10 ವರ್ಷಗಳಿಂದ ಇಲ್ಲಿ ಶವಸಂಸ್ಕಾರ ನಡೆಯುತ್ತಿಲ್ಲ. ಈಗಲೂ ಆ ಜಾಗವು ರುದ್ರಭೂಮಿಗೆ ಕಾದಿರಿಸಲಾಗಿದೆ ಎನ್ನು ದಾಖಲೆಯಿದೆ. ಆದರೆ ಇದಕ್ಕೆ ಕೆಲವರ ತಕರಾರು ಇದ್ದು, ಅದಿನ್ನೂ ಇತ್ಯರ್ಥಗೊಂಡಿಲ್ಲ.

ಪ್ರತೀ ಸಭೆಯಲ್ಲೂ ಚರ್ಚೆ
ನಾವುಂದ ಗ್ರಾಮಕ್ಕೆ ಹಿಂದೂ ರುದ್ರಭೂಮಿ ಬೇಕು ಎನ್ನುವ ಬಗ್ಗೆ ಪ್ರತೀ ಗ್ರಾಮಸಭೆಗಳಲ್ಲೂ ಚರ್ಚೆಯಾಗುತ್ತಿದೆ. ಜಾಗದ ಗೊಂದಲ ಇರುವುದನ್ನು ಜಂಟಿ ಸರ್ವೇ ನಡೆಸಿ, ಸರಿಪಡಿಸಬೇಕು ಎನ್ನುವುದಾಗಿ ಸದಸ್ಯರು ಒತ್ತಾಯಿಸುತ್ತಿದ್ದರೂ, ಗ್ರಾ.ಪಂ. ಇನ್ನೂ ಜಂಟಿ ಸರ್ವೇ ನಡೆಸಲು ಮುಂದಾಗಿಲ್ಲ.

ದುಬಾರಿ ವೆಚ್ಚ
ನಾವುಂದ ಗ್ರಾಮದಲ್ಲಿ ಬಹುತೇಕ ಬಡ ವರ್ಗದವರೇ ಹೆಚ್ಚಿದ್ದು, ಮನೆ ಕಟ್ಟಿಕೊಳ್ಳುವಷ್ಟೇ ಜಾಗ ಇರುವುದು. ಅವರೆಲ್ಲ ತಮ್ಮ ಮನೆಯವರು ಸಾವನ್ನಪ್ಪಿದರೆ, 20 ಕಿ.ಮೀ. ದೂರದ ಕುಂದಾಪುರಕ್ಕೆ ಹೆಣವನ್ನು ಹೊತ್ತುಕೊಂಡು ಬರಬೇಕು. ವಾಹನ ವೆಚ್ಚ, ಕಟ್ಟಿಗೆ, ರುದ್ರಭೂಮಿ ಶುಲ್ಕವೆಲ್ಲ ಸೇರಿ, 5ರಿಂದ 6 ಸಾವಿರ ರೂ. ಬೇಕಾಗುತ್ತದೆ. ಇದನ್ನು ಭರಿಸಲು ಕಷ್ಟ ಪಡುವವರು ಬಹಳಷ್ಟು ಮಂದಿಯಿದ್ದಾರೆ. ಕೊರೊನಾ ಸಮಯದಲ್ಲೂ ಅನೇಕ ಮನೆಯವರು ಅಂತ್ಯಸಂಸ್ಕಾರಕ್ಕಾಗಿ ಪರದಾಡಿದ್ದಾರೆ.

Advertisement

ಆದಷ್ಟು ಬೇಗ ಆಗಲಿ
ನಾವುಂದ ಗ್ರಾಮದಲ್ಲಿ ಆದಷ್ಟು ಬೇಗ ಹಿಂದೂ ರುದ್ರಭೂಮಿ ಆಗಲಿ. ದೂರದ ಕುಂದಾಪುರಕ್ಕೆ ಹೋಗುವ ಸಂಕಟ ಬೇಗ ಮುಗಿಯಲಿ. ಬಡವರ ಪಾಲಿನ ಬೇಡಿಕೆ ಶೀಘ್ರ ಈಡೇರಲಿ.
-ಸತೀಶ್‌ ನಾವುಂದ, ಗ್ರಾಮಸ್ಥರು

ಶೀಘ್ರ ಜಂಟಿ ಸರ್ವೇ
ನಾವುಂದ ಗ್ರಾ.ಪಂ.ನಲ್ಲಿ ಜಾಗದ ಗೊಂದಲ ಇರುವುದರಿಂದ ಹಿಂದೂ ರುದ್ರಭೂಮಿ ಮಾಡಲು ಸಾಧ್ಯವಾಗಿಲ್ಲ. ಈಗಾಗಲೇ ಗೊತ್ತು ಮಾಡಿರುವ ಜಾಗವನ್ನು ಪರಿಶೀಲನೆ ನಡೆಸಲಾಗಿದೆ. ಆದಷ್ಟು ಬೇಗ ಜಂಟಿ ಸರ್ವೇ ನಡೆಸಿ, ಶ್ಮಶಾನಕ್ಕಾಗಿ ಅಗತ್ಯ ಕ್ರಮಕೈಗೊಳ್ಳಲಾಗುವುದು.
– ಭಾರತಿ, ಬೈಂದೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next