ಸಿಂಹಸನಗತಾ ನಿತ್ಯಂ ಪದ್ಮಾಶ್ರಿತ ಕರದ್ವಯಮ್ |
ಶುಭದಾಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನೀ ||
“ಈಕೆಯು ಸ್ಕಂದ ಅಥವಾ ಸುಬ್ರಹ್ಮಣ್ಯನ ತಾಯಿಯಾದ್ದರಿಂದ ದೇವಿಯನ್ನು ಸ್ಕಂದಮಾತಾ ಎಂದು ಕರೆಯುತ್ತಾರೆ. ಈ ದೇವಿಯ ವಾಹನವೂ ಕೂಡ ಸಿಂಹ. ಈ ದೇವಿಯು ಎರಡೂ ಕೈಗಳಲ್ಲೂ ಕಮಲದ ಹೂಗಳನ್ನು ಹಿಡಿದಿರುತ್ತಾಳೆ. ಸ್ಕಂದನು ಇವಳ ತೊಡೆಯ ಮೇಲೆ ಕುಳಿತಿದ್ದು, ಬಲಗೈಯಿಂದ ಅವನನ್ನು ಹಿಡಿದಿರುತ್ತಾಳೆ, ಎಡಗೈಯಿಂದ ಆಶೀರ್ವಾದ ರೂಪಕವಾದ ಅಭಯಮುದ್ರೆಯನ್ನು ಧರಿಸಿದ್ದಾಳೆ.
ಬಿಳಿಯ ವರ್ಣದಿಂದ ಕಂಗೊಳಿಸುತ್ತಿರುವ ಈಕೆಯು ಕಮಲದಲ್ಲಿ ಪದ್ಮಾಸೀನಳಾಗಿರುವುದರಿಂದ ಈಕೆಯನ್ನು ಪದ್ಮಾಸನಾ ದೇವಿ ಎಂದೂ ಕರೆಯಲಾಗಿದೆ.”
ಸ್ಕಂದಮಾತೆಯ ಆರಾಧನೆಯಿಂದ ಮೋಕ್ಷವು ಸುಗಮವಾಗಿ ದೊರೆಯುತ್ತದೆ. ಅಲ್ಲದೆ ಈ ತಾಯಿಯ ಪೂಜೆಯಿಂದ ಸುಖ-ಶಾಂತಿ, ಎಲ್ಲ ರೀತಿಯ ಕಾಮನೆಗಳು ಈಡೇರುತ್ತವೆ. ನವರಾತ್ರಿಯ ಪಂಚಮಿಯಂದು ಈಕೆಯ ಉಪಾಸನೆಯನ್ನು ಸಾಧಕರು, ಭಕ್ತರು ಮಾಡುತ್ತಾರೆ. ಭಕ್ತಿಯು ಪಕ್ವವಾದಲ್ಲಿ, ಭಕ್ತನ ಮನಸ್ಸು ವಿಶುದ್ಧ ಚಕ್ರದಲ್ಲಿ ನೆಲೆಸುತ್ತದೆ. ಆಗ ಸಮಸ್ತ ಬಾಹ್ಯ ಚಟುವಟಿಕೆಗಳು ಹಾಗೂ ಚಿತ್ತ ವೃತ್ತಿಗಳು ಲಯವಾಗುತ್ತವೆ.