ನವರಾತ್ರಿ ಶಕ್ತಿಯ ಪೂಜೆ ಮಾತ್ರ ಅಲ್ಲ ತಾಯ್ತನದ ಆರಾಧನೆ ಕೂಡ ಹೌದು.
ಅನ್ನದಾತೆ, ವಿದ್ಯಾದಾತೆ, ಶಕ್ತಿಯ ಸಂಕೇತವಾದ ದೇವಿಯ ಆರಾಧನೆ ಜೊತೆಗೆ “ಅಮ್ಮ ಎಲ್ಲರನ್ನೂ ಕಾಪಾಡು ತಾಯಿ” ಎಂದು ಬೇಡುವ ತಾಯ್ತನದ ಪೂಜೆ ಕೂಡ ಹೌದು.
ಹಾಗಾದರೆ ನವರಾತ್ರಿ ಎನ್ನುವುದು ಬಾರಿ ಹೆಣ್ತನದ ಪೂಜೆಯೇ? ಎಂಬ ಪ್ರಶ್ನೆ ನನ್ನಲ್ಲಿ ಹುಟ್ಟಿಕೊಂಡಿತ್ತು.
ಪುರಾಣದ ಕಡೆ ಸ್ವಲ್ಪ ಕಣ್ಣು ಹಾಯಿಸಿದಾಗ ತಾಯ್ತನಕ್ಕೆ ಪುರಾವೆಯಾಗಿ ಕಾಣುವ ಜಗವ ಹೊತ್ತ ಜಗನ್ನಾಥನಿಗೆ ಜನನಿಯಾದ ಯಶೋಧ, ಮಗನ ರಾಜ್ಯಭಿಷೇಕಕ್ಕಾಗಿ ಪಟ್ಟು ಹಿಡಿದ ಕೈಕೇಯಿ, ಮಹಿಷನ ರೂಪದ ಮಗ ಅಸುರನಾದರೂ ತೋಳಲಿ ಅಪ್ಪುಗೆ ನೀಡಿ ಬೆಚ್ಚಗೆ ಬೆಳೆಸಿದ ಮಾಲಿನಿ. ಎಲ್ಲರೂ ಮಹಾ ತಾಯಿಯೇ…
ಆದರೆ ತಾಯ್ತನ ಎನ್ನುವುದು ಗರ್ಭ ಹೊತ್ತಿರುವ ಹೆಣ್ಣಿಗೆ ಸೀಮಿತವೇ? ಈ ಪ್ರಶ್ನೆ ನನ್ನಲ್ಲಿ ಹಲವು ಕಾಲದಿಂದ ಹಾಗೆ ಉಳಿದಿದೆ. ನಮ್ಮನ್ನು ಹೊತ್ತ ಭೂಮಿ, ನಿಂತ ನೆಲವಾದ ಭಾರತಾಂಬೆ, ನುಡಿವ ಮಾತು ಕನ್ನಡಾಂಬೆ ಎಲ್ಲರಲೂ ಇರುವುದು ಹೆಣ್ತನವೇ ಅಗಾಧವಾದ ತಾಯಿ ಪ್ರೀತಿಯೇ. ಹಾಗಾದ್ರೆ ಮಣ್ಣು, ಭಾಷೆ, ಭೂಮಿ, ಕಾಡು ಎಲ್ಲವೂ ತಾಯಿ ಎಂಬರ್ಥ ಬಂದಂತೆ.
ಇನ್ನು ತನ್ನ ಸಂಸಾರಕ್ಕಾಗಿ ಬದುಕನ್ನೇ ಮುಡಿಪಾಗಿಟ್ಟ ಭೀಷ್ಮನ ಪ್ರೀತಿ, ಗೆಳೆಯನ ಹಸಿವು ನೀಗಿಸಲು ಹಿಡಿ ಅವಲಕ್ಕಿಯ ಕಟ್ಟಿತಂದ ಸುಧಾಮನ ಮಮತೆ, ದಾನ ಎಂದವನಿಗೆ ಸರ್ವಸ್ವವನ್ನೂ ಬಿಟ್ಟು ಕೊಟ್ಟ ಬಲಿ ಮಹಾರಾಜ, ಜೀವದ ರಕ್ಷಣೆಯನ್ನೇ ದಾನ ಮಾಡಿದ ಕರ್ಣನ ತ್ಯಾಗ, ಎಲ್ಲದರಲ್ಲೂ ಇರುವುದು ತಾಯ್ತನದ, ನಂಬಿಕೆ, ತ್ಯಾಗ ಮತ್ತು ನಿಷ್ಕಲ್ಮಶ ಪ್ರೀತಿ ಅಲ್ವಾ?
ತಾಯ್ತನ ಎನ್ನುವುದು ಹಾಗಾದರೆ ಹೆಣ್ಣಿಗೆ ಮಾತ್ರ ಸೀಮಿತ ಅಲ್ಲ ಅಲ್ವಾ. ಒಂಬತ್ತು ತಿಂಗಳು ಹೊತ್ತು ಹೆತ್ತು ಜೀವ ಕೊಡುವ ತಾಯಿಯನ್ನು ಹಾಡಿ ಹೊಗಳುವ ನಾವು, ಹುಟ್ಟಿನ ನಂತರ ಜೀವ ಸವೆಯುವ ತನಕ ಹೊತ್ತು ಜೀವನ ಕೊಡುವ ತಂದೆಯನ್ನು ಯಾಕೆ ಕಡೆಗಣಿಸಿದ್ದೇವೆ? ಅದು ಒಂದು ರೀತಿಯ ತಾಯ್ತನ ಅಲ್ವಾ.
ಗಂಡಿನಲ್ಲಿ ಇರುವ ಹೆಣ್ತನವನ್ನು ಪರಶಿವನೇ ಅರ್ಧನಾರೀಶ್ವರನಾಗಿ, ವಿಷ್ಣುವೇ ಮೋಹಿನಿ ಆಗಿ ಮಣಿಕಂಠ ಅಯ್ಯಪ್ಪ ಸ್ವಾಮಿಗೆ ಜನ್ಮವಿತ್ತು, ಜಗತ್ತಿಗೆ ಮಾದರಿ ಆಗಿ ತೋರಿರುವಾಗ….
ತಾಯ್ತನ, ಹೆಣ್ತನ ಎನ್ನುವುದು….. ಗಂಡು ಹೆಣ್ಣು ಎಂಬ ಪರಿವೆಗೆ ಮೀರಿದ್ದು ಅನಿಸಿತು.
ಹಾಗಾದರೆ ಈ ಹಬ್ಬ ನಮ್ಮಲ್ಲಿರುವ ಹೆಣ್ತನದ ಆಚರಣೆ, ನಮ್ಮಲ್ಲಿರುವ ತಾಯ್ತನದ ಸಂಭ್ರಮ ಅಲ್ವಾ?
ತಾಯ್ತನದ ಹಕ್ಕು ಗಂಡು ಹೆಣ್ಣಿಗೆ ಸಮನಾಗಿದೆ ಎಂದಾದರೆ, ಹಾಗಿದ್ದಲ್ಲಿ ಎಲ್ಲಿಂದ ಬಂತು ಹೆಣ್ಣು, ಗಂಡು ಎಂಬ ಭೇದ? ಎಲ್ಲಿದೆ ಹೆಣ್ಣು ಗಂಡು ಎಂದು ನಾವು ಮಾಡಿಕೊಂಡ ಕೆಲ ಕಾನೂನುಗಳಿಗೆ ಅರ್ಥ? ಹೆಣ್ಣಿನಲ್ಲೂ ಅವಿತಿರುವ ಶಕ್ತಿ, ಗಂಡಿನಲ್ಲಿ ಅಡಗಿರುವ ಮಾತೃತ್ವ ಸತ್ಯ ಎಂದಾದರೆ ಎಲ್ಲಿದೆ ಭೇದಕ್ಕೆ ಅಡಿಪಾಯ?
ಎಲ್ಲಿದೆ ಅದೆಷ್ಟೋ ಪತ್ರಗಳಲ್ಲಿ ನಾವು ನಮೂದಿಸುವ ಗಂಡು ಹೆಣ್ಣು ತೃತೀಯ ಲಿಂಗ ಎಂಬ ಸಣ್ಣ ಚೌಕಕ್ಕೆ ಅರ್ಥ?
ತೇಜಸ್ವಿನಿ