Advertisement

ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ವೈಭವ

12:40 PM Sep 30, 2019 | Suhan S |

ನರಗುಂದ: ಇಲ್ಲಿನ ನೆಲದ ಇತಿಹಾಸಕ್ಕೆ ಕಳಶಪ್ರಾಯವಾಗಿ ಇಂದಿಗೂ ಗತವೈಭವಕ್ಕೆ ಸಾಕ್ಷಿಯಾಗಿರುವ ತಿರುಪತಿ ತಿರುಮಲ ಮಾದರಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಾರಂಭವಾಗಿದೆ.

Advertisement

ಪಟ್ಟಣದ ಸಿದ್ದೇಶ್ವರ ಬೆಟ್ಟದ ಬದಿಗಿರುವ ವೆಂಕಟೇಶ್ವರ ದೇವಸ್ಥಾನ 250 ವರ್ಷಗಳ ಐತಿಹ್ಯ ಹೊಂದಿದೆ.ನರಗುಂದ ಸಂಸ್ಥಾನದ ಅರಸ ಬಾಬಾಸಾಹೇಬ ಭಾವೆ ಪೂರ್ವಜ 1ನೇ ದಾದಾಜಿರಾವ್‌ ಭಾವೆ(ರಾಮರಾವ್‌ ಭಾವೆ) ಆಡಳಿತದಲ್ಲಿ ದೇಗುಲ ನಿರ್ಮಾಣಗೊಂಡಿದೆ.

ದೇವಸ್ಥಾನ ಹಿನ್ನೆಲೆ: ದಾದಾಜಿರಾವ್‌ ಭಾವೆ ಕುಲದೇವರಾದ ತಿರುಪತಿ ವೆಂಕಟೇಶ್ವರ ಕನಸಿನಲ್ಲಿ ಬಂದು “ನಿನ್ನ ಸಂಸ್ಥಾನದಲ್ಲೇ ನನ್ನ ಪ್ರತಿರೂಪದಂತಹ ದೇವಸ್ಥಾನ ಕಟ್ಟಿಸು. ನಿನ್ನ ಸಂಸ್ಥಾನದಲ್ಲೇ ನನ್ನ ಆರಾಧನೆ ನಡೆಯಲಿ’ ಎಂದು ವರವಿತ್ತ ಕುರುಹಾಗಿ ಕ್ರಿಶ 1716ರಲ್ಲಿ ತಿರುಪತಿ ಮಾದರಿಯಲ್ಲಿ ಅಂದು ಸುಮಾರು 1 ಲಕ್ಷ ವೆಚ್ಚದಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ ಎನ್ನಲಾಗಿದೆ.

ವಿಶಿಷ್ಟ ರೂಪ: ಬೃಹತ್‌ ಗೋಪುರದ ವೆಂಕಟೇಶ್ವರ ದೇವಸ್ಥಾನ ಹಿಂಭಾಗ ಪುಷ್ಕರಣಿ, ಪಕ್ಕದಲ್ಲಿ ವರಾಹ, ಗೋವಿಂದರಾಜ, ಗಣಪತಿ ದೇವಾಲಯಗಳಿವೆ. ಗೋವಿಂದರಾಜ ದೇವಾಲಯಕ್ಕೆ ಕನಕನ ಕಿಂಡಿಯಂಥ ಕೆತ್ತನೆ ಸುಂದರವಾಗಿ ಕೆತ್ತಲಾಗಿದೆ. ತಿರುಪತಿ ಹಾಗೆ ಪೂಜೆ, ಅರ್ಚನೆ, ಉಪಾಸನೆ, ಪಲ್ಲಕ್ಕಿ ಸೇವೆ, ರಥೋತ್ಸವ ಸಾಂಗವಾಗಿ ನೆರವೇರುತ್ತ ಬಂದಿದೆ. ಗತವೈಭವಕ್ಕೆ ಹೋಲಿಸಿದರೆ ನವರಾತ್ರಿ ಉತ್ಸವ ಇಂದು ಮಂಕಾಗಿದ್ದರೂ ದೇವಸ್ಥಾನ ವಿಶ್ವಸ್ಥ ಮಂಡಳಿ ನಿಯಮಾನುಸಾರ ನವರಾತ್ರಿ ಆಚರಿಸಿಕೊಂಡು ಬರುತ್ತಿದೆ. ದೇಗುಲವು ಪೂರ್ವದಲ್ಲಿ ಗೋಪುರ, ಮೂರು ದಿಕ್ಕುಗಳಲ್ಲಿ ಪ್ರವೇಶದ್ವಾರ ಹೊಂದಿದೆ. ಕರ್ನಾಟಕದ ಬೃಹತ್‌ ವೆಂಕಟೇಶ್ವರ ದೇವಸ್ಥಾನ ಎಂಬ ಪ್ರತೀತಿ ಪಡೆದಿದ್ದು, ದೇವಸ್ಥಾನ ಅಭಿವೃದ್ಧಿಗೊಳಿಸಿ ದಸರಾ ವೈಭವ ಮರುಕಳಿಸಬೇಕಾಗಿದೆ.

ನವರಾತ್ರಿ ಉತ್ಸವ: ವೆಂಕಟೇಶ್ವರ ದೇವಸ್ಥಾನ ವಿಶ್ವಸ್ಥ ಮಂಡಳಿ ಆಶ್ರಯದಲ್ಲಿ ಸೆ. 29ರಿಂದ ನವರಾತ್ರಿ ಉತ್ಸವ ಪ್ರಾರಂಭಗೊಂಡಿದೆ. ಘಟಸ್ಥಾಪನೆ, ಶಾರದ ನವರಾತ್ರಿ ಪ್ರಾರಂಭ, ಪುಷ್ಪ ವಾಹನೋತ್ಸವ ನೆರವೇರಿದೆ. ಸೆ. 30ರಂದು ಗಜ ವಾಹನೋತ್ಸವ, ಅ. 1ರಂದು 7 ದಿನದ ನವರಾತ್ರಿ ಪ್ರಾರಂಭ, ಸಿಂಹ ವಾಹನೋತ್ಸವ, 2ರಂದು ಲಲಿತ ಪಂಚಮಿ, ಹಂಸ ವಾಹನೋತ್ಸವ, 3ರಂದು ದೇವರ ಕಲ್ಯಾಣೋತ್ಸವ, ಮಧ್ಯಾಹ್ನ 12ಕ್ಕೆ 5 ದಿನದ ನವರಾತ್ರಿ ಪ್ರಾರಂಭ, ಶೇಷ ವಾಹನೋತ್ಸವ, 4ರಂದು ಸರಸ್ವತಿ ಆವಾಹನ, ಚಂದ್ರ ವಾಹನೋತ್ಸವ, 5ರಂದು 3 ದಿನದ ನವರಾತ್ರಿ ಪ್ರಾರಂಭ, ಸರಸ್ವತಿ ಪೂಜನ, 6ರಂದು ದುರ್ಗಾಷ್ಟಮಿ, ಸರಸ್ವತಿ ಬಲಿದಾನ, 1 ದಿನದ ನವರಾತ್ರಿ ಪ್ರಾರಂಭ ಮತ್ತು ಮಾರುತಿ ವಾಹನೋತ್ಸವ, 7ರಂದು ಖಂಡೆ ಪೂಜಾ, ಗರುಡ ವಾಹನೋತ್ಸವ, 8ರಂದು ವಿಜಯದಶಮಿ, ಶಮೀಪೂಜಾ(ಬನ್ನಿ) ರಥೋತ್ಸವ ವನಯಾತ್ರಾ, 9ರಂದು ಲಲಿತ ಪೂಜಾ, ಅವಭೃತ ಸ್ನಾನ, ಓಕಳಿ, ಪೂರ್ಣಾಹುತಿ ಮತ್ತು ಸೂರ್ಯ ವಾಹನೋತ್ಸವ ಜರುಗಲಿದೆ.

Advertisement

 

-ಸಿದ್ಧಲಿಂಗಯ್ಯ ಮಣ್ಣೂರಮಠ

Advertisement

Udayavani is now on Telegram. Click here to join our channel and stay updated with the latest news.

Next