Advertisement

ನವರಾತ್ರಿ ಉತ್ಸವ ತಂದಿದೆ ನವಚೈತನ್ಯ

12:24 PM Sep 25, 2022 | Team Udayavani |

ಬೆಳಗಾವಿ: ಬಹುಸಂಸ್ಕೃತಿಯ ನಗರಿ ಬೆಳಗಾವಿಯಲ್ಲಿ ನವರಾತ್ರಿಗೆ ನವಚೈತನ್ಯ ಮೂಡುತ್ತಿದೆ. 9 ದಿನಗಳ ಕಾಲ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಕ್ತಿ-ಭಾವದಿಂದ ಆಚರಿಸಲ್ಪಡುವ ನವರಾತ್ರಿಯ ಅದ್ಧೂರಿ ಉತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ.

Advertisement

ಎರಡು ವರ್ಷಗಳ ಕೊರೊನಾ ನಂತರದಲ್ಲಿ ಈ ಬಾರಿ ಹೊಸ ಮೆರಗು, ನವೋಲ್ಲಾಸದೊಂದಿಗೆ ಅದ್ಧೂರಿ ಹಾಗೂ ವಿಜೃಂಭಣೆಯ ನವರಾತ್ರಿ ಉತ್ಸವಕ್ಕೆ ಬೆಳಗಾವಿ ಸಾಕ್ಷಿಯಾಗಲಿದೆ. ಬೆಳಗಾವಿಯಲ್ಲಿ ಗಣೇಶೋತ್ಸವದಂತೆ ದಸರಾ ಹಬ್ಬವೂ ಅದ್ಧೂರಿಯಿಂದ ಆಚರಿಸಲ್ಪಡುತ್ತದೆ.

ನವರಾತ್ರಿ ಉತ್ಸವದಲ್ಲಿ ಶಕ್ತಿ ದೇವತೆಗಳನ್ನು ಪೂಜಿಸುವುದು, ಆರಾಧಿಸುವುದು ವಿಶೇಷ. ಅದರಲ್ಲೂ ಬೆಳಗಾವಿಯ ಶಕ್ತಿ ಪೀಠಗಳಲ್ಲಿ ಒಂದಾದ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನವಂತೂ ಭಕ್ತರ ಕಾಮಧೇನು-ಕಲ್ಪವೃಕ್ಷವಾಗಿದೆ. 9 ದಿನಗಳ ಕಾಲ ನವರಾತ್ರಿ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದು, ದೀಪದಂತೆ ನಮ್ಮ ಬಾಳು ಬೆಳಗಲಿ ಎಂದು ದೀಪಕ್ಕೆ ಎಣ್ಣೆ ಹಾಕುವ ಪ್ರತೀತಿ ನಡೆದುಕೊಂಡು ಬಂದಿದೆ.

ನವರಾತ್ರಿ ಎಂದರೆ ದೇವಿಗೆ ವಿಶೇಷ ಪೂಜೆಯೊಂದಿಗೆ ಘಟಸ್ಥಾಪನೆ ಮಾಡಿ ದೀಪ ಹಚ್ಚುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಸೋಮವಾರ ಸೆ. 26ರಂದು ಘಟಸ್ಥಾಪನೆ ಮಾಡಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಿ ದೀಪ ಹಾಕಲಾಗುತ್ತದೆ. 9 ದಿನಗಳ ಕಾಲ ಈ ದೀಪವನ್ನು ಅತಿ ಜೋಪಾನವಾಗಿ ಕಾಪಾಡಿಕೊಂಡು ಬರಲಾಗುತ್ತದೆ.

ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿಯೂ ನಿತ್ಯ 9 ದಿನಗಳ ಕಾಲ ದೇವಿಯನ್ನು ವಿಧವಿಧ ರೂಪಗಳಿಂದ ಅಲಂಕಾರ ಮಾಡಲಾಗುತ್ತದೆ. 9 ದಿನಗಳ ಕಾಲ ಜಾಗರಣೆ, ಪುರಾಣ ಪಠಣ, ಭಜನೆ-ಕೀರ್ತನೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರುತ್ತವೆ. ದೇವಸ್ಥಾನಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗುತ್ತದೆ. ನಿತ್ಯವೂ ಒಂದೊಂದು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

Advertisement

ರಾಯಬಾಗ ತಾಲೂಕಿನ ಚಿಂಚಲಿ ಶ್ರೀ ಮಾಯಕ್ಕಾ ದೇವಿ, ಹುಕ್ಕೇರಿ ತಾಲೂಕಿನ ಬಡಕುಂದ್ರಿ ಹೊಳೆಮ್ಮ ದೇವಿ, ಸವದತ್ತಿ ತಾಲೂಕಿನ ಶಿರಸಂಗಿ ಕಾಳಿಕಾ ದೇವಿ, ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿ, ನಿಪ್ಪಾಣಿ ಬಳಿಯ ಮಮದಾಪುರ ಶ್ರೀ ಅಂಬಿಕಾ ದೇವಿ, ನಗರದ ಕಿಲ್ಲಾ ಕೋಟೆ ಕೆರೆ ಆವರಣದಲ್ಲಿರುವ ಶ್ರೀ ದುರ್ಗಾದೇವಿ, ಬಸವಣ ಗಲ್ಲಿಯ ಶ್ರೀ ಮಹಾಲಕ್ಷ್ಮೀ ದೇವಿ, ಶಹಾಪುರದ ಶ್ರೀ ಅಂಬಾಬಾಯಿ ಮಂದಿರ, ಶಹಾಪುರದ ಶ್ರೀ ಮಹಾಲಕ್ಷ್ಮೀ ಮಂದಿರ, ಶಹಾಪುರದ ಶ್ರೀ ಕಾಳಿಕಾ ಮಂದಿರ, ಶಹಾಪುರ ಶ್ರೀ ಬನಶಂಕರಿ ಮಂದಿರ, ವಡಗಾಂವಿ ಶ್ರೀ ಬನಶಂಕರಿ ದೇವಿ, ಅನಗೋಳ ಶ್ರೀ ಮಹಾಲಕ್ಷ್ಮೀ ಮಂದಿರ, ಕಿಲ್ಲಾ ದುರ್ಗಾದೇವಿ ಮಂದಿರ, ಬಸವಣ ಗಲ್ಲಿ ಕಾಳಿಕಾದೇವಿ, ಸಮಾದೇವಿ ಮಂದಿರ ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಲಂಕಾರ ನೆರವೇರುತ್ತದೆ.

ದಾಂಡಿಯಾ ಝಲಕ್‌

ರಾಜಸ್ಥಾನ, ಗುಜರಾತ ಪ್ರಭಾವದಿಂದಾಗಿ ಬೆಳಗಾವಿಯಲ್ಲೂ ನವರಾತ್ರಿಗೆ ದಾಂಡಿಯಾ ಕಾಣಸಿಗುತ್ತದೆ. ಓಣಿ, ಗಲ್ಲಿ ಗಲ್ಲಿಗಳಲ್ಲಿ ದಾಂಡಿಯಾ ಕಾರ್ಯಕ್ರಮಗಳು ನೆರವೇರುತ್ತವೆ. ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ದಾಂಡಿಯಾ ಆಡುವುದೇ ಒಂದು ಸೊಬಗು. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ವಿವಿಧ ಮಹಿಳಾ ಮಂಡಳಗಳು, ಮಹಿಳಾ ಕ್ಲಬ್‌ಗಳಿಂದ ದಾಂಡಿಯಾ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಈ ದಾಂಡಿಯಾ ಹಳ್ಳಿಗಳಲ್ಲೂ ಕಾಲಿಟ್ಟಿದ್ದು, ಈಗಿನಿಂದಲೇ ತಯಾರಿ ಶುರುವಾಗಿದೆ.

ಓಣಿ ಓಣಿಗಳಲ್ಲಿ ದುರ್ಗೆಯ ಪ್ರತಿಷ್ಠಾಪನೆ

ನವರಾತ್ರಿಗೆ ದುರ್ಗೆಯನ್ನು ಆರಾಧಿಸುವುದು ವಿಶೇಷ. ಅದರಂತೆ ಓಣಿಗಳಲ್ಲಿ, ವಾರ್ಡ್‌ಗಳಲ್ಲಿ, ಹಳ್ಳಿಗಳಲ್ಲಿ ಶ್ರೀ ದುರ್ಗಾದೇವಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪೆಂಡಾಲ್‌ಗ‌ಳನ್ನು ನಿರ್ಮಿಸಿ ದೇವಿಯನ್ನು ಪ್ರತಿಷ್ಠಾಪಿಸಿ 9 ದಿನ ಪೂಜೆ ಸಲ್ಲಿಸಲಾಗುತ್ತದೆ. ನಂತರ ವಿಜಯದಶಮಿಯಂದು ಮೆರವಣಿಗೆ ಮೂಲಕ ಮೂರ್ತಿಯನ್ನು ವಿಸರ್ಜನೆ ಮಾಡಲಾಗುತ್ತದೆ.

ಮಾರುಕಟ್ಟೆಯಲ್ಲಿ ಜನಜಂಗುಳಿ

ದೇವಿಯನ್ನು ಆರಾಧಿ ಸಲು ಪೂಜಾ ಸಾಮಗ್ರಿಗಳ ಖರೀದಿಗೆ ಜನರು ಮಾರುಕಟ್ಟೆಗೆ ಮುಗಿಬೀಳುವುದು ಸಹಜ. ಸೋಮವಾರ ಸೆ. 26ರಿಂದ ನಗರದ ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಾಗುವ ಸಾಧ್ಯತೆಯೂ ಇದೆ. ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆಯುಧ ಪೂಜೆ ಮತ್ತು ವಿಜಯದಶಮಿಯಂದು ಹೆಚ್ಚಿನ ವ್ಯಾಪಾರ ಆಗುತ್ತದೆ.

-ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next