Advertisement

Navaratri: ಕರಾವಳಿಯಲ್ಲಿ ಇಂದಿನಿಂದ ನವರಾತ್ರಿ ಸಂಭ್ರಮ

12:34 AM Oct 03, 2024 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಅ.3ರಂದು ನವರಾತ್ರಿ, ದಸರಾ ಸಂಭ್ರಮ ಆರಂಭಗೊಳ್ಳಲಿದ್ದು, ವಿವಿಧ ದೇವಾಲಯಗಳನ್ನು ವಿದ್ಯುತ್‌ ದೀಪ, ಹೂವು, ತಳಿರು ತೋರಣಗಳಿಂದ ಅಲಂಕರಿಸಲಾಗಿದೆ.

Advertisement

ಕರಾವಳಿಯ ಪ್ರಮುಖ ದೇವಸ್ಥಾನಗಳಲ್ಲಿ 9 ದಿನಗಳ ಕಾಲ ನವರಾತ್ರಿ ಅಂಗವಾಗಿ ವಿಶೇಷ ಪೂಜೆ, ಹತ್ತನೇ ದಿನ ವಿಜಯದಶಮಿ ಕಾರ್ಯಕ್ರಮ ನೆರವೇರಲಿದೆ.

ದ.ಕ. ಜಿಲ್ಲೆಯ ಪುರಾಣ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸಹಿತ ವಿವಿಧ ದೇವಿ ಆಲಯಗಳಲ್ಲಿ ನವರಾತ್ರಿಯ ವಿಶೇಷ ಪೂಜೆ ನೆರವೇರಲಿದೆ.

“ಮಂಗಳೂರು ದಸರಾ’ ಖ್ಯಾತಿಯ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಹಾಗೂ ರಥಬೀದಿಯ ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವದ ವಿಜೃಂಭಣೆ ಯಿಂದ ನೆರವೇರಲಿದೆ. ಮಂಗಳೂರು ದಸರಾ ಹಿನ್ನೆಲೆಯಲ್ಲಿ ಮಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ, ಸರಕಾರಿ, ಖಾಸಗಿ ಕಟ್ಟಡಗಳನ್ನು ವಿದ್ಯುತ್‌ ದೀಪಾಲಂಕಾರಗೊಳಿಸಲಾಗಿದೆ.

ಉಡುಪಿ ಜಿಲ್ಲೆ: ನವರಾತ್ರಿ ಸಂಭ್ರಮ
ಉಡುಪಿ ಜಿಲ್ಲೆಯಲ್ಲಿ ಸಂಭ್ರಮದ ನವರಾತ್ರಿ ಉತ್ಸವ ಅ. 3ರಿಂದ ಒಂಭತ್ತು ದಿನಗಳ ಕಾಲ ನಡೆಯಲಿದೆ. ದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಉತ್ಸವಕ್ಕೆ ತಯಾರಿ ಕಾರ್ಯಗಳು ನಡೆದಿದೆ.

Advertisement

ನವರಾತ್ರಿಯ ಪರ್ವಕಾಲದಲ್ಲಿ ಕದಿರು ಕಟ್ಟುವ ಸಂಪ್ರದಾಯದೊಂದಿಗೆ ದುರ್ಗೆಯರ ಆರಾಧನೆ ಜರಗಲಿದೆ. ದೇವಸ್ಥಾನಗಳಲ್ಲಿ ಕದಿರು ಕಟ್ಟುವ ದಿನವೇ ಭಕ್ತರ ಮನೆಗಳಲ್ಲೂ ಕದಿರು ಕಟ್ಟುತ್ತಾರೆ. ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ, ನೀಲಾವರ ಶ್ರೀ ಮಹಿಷಮರ್ದಿನಿ, ಉಚ್ಚಿಲ ಮಹಾಲಕ್ಷ್ಮೀ, ಉಡುಪಿಯ ನಾಲ್ದಿಕ್ಕುಗಳಲ್ಲಿರುವ ದೇವಿ ದೇವಸ್ಥಾನಗಳಲ್ಲಿ ಸಡಗರದ ನವರಾತ್ರಿ ಉತ್ಸವಗಳು ಜರಗಲಿವೆ.

ಉಡುಪಿ ಶ್ರೀಕೃಷ್ಣಮಠದಲ್ಲೂ ನವರಾತ್ರಿ ಉತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಒಂಬತ್ತೂ ದಿನಗಳಲ್ಲಿ ಶ್ರೀಕೃಷ್ಣನಿಗೆ ದೇವಿಯ ವಿವಿಧ ಅಲಂಕಾರಗಳನ್ನು ನಡೆಸಲಾಗುತ್ತದೆ.ದೇವಿ ದೇವಸ್ಥಾನಗಳಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆ, ಹೋಮ, ಹವನ, ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಎಲ್ಲ ಪ್ರಮುಖ ದೇವಿ ದೇವಸ್ಥಾನಗಳಲ್ಲಿ ಅನ್ನ ಸಂತರ್ಪಣೆ ಜರಗಲಿದೆ. ದೇವಸ್ಥಾನಗಳಲ್ಲಿ ವಿದ್ಯುತ್‌ ದೀಪ ಸಹಿತ ಹೂವಿನ ಅಲಂಕಾರ ಕಣ್ಮನ ಸೆಳೆಯುತ್ತಿದೆ. ಮನೆಗಳಲ್ಲಿ ನವರಾತ್ರಿ ಗೊಂಬೆ ಕೂರಿಸಿ ದೇವಿಯರ ವ್ರತಾಚರಣೆ ನಡೆಯುತ್ತದೆ.

ಚಿತ್ರ:ಸತೀಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next