ನವರಾತ್ರಿಯ ಮೂರನೇ ದಿನ ಪೂಜಿಸಲ್ಪಡುವ ದೇವಿಯ ಅವತಾರ “ಚಂದ್ರಘಂಟಾ’ ಇದಕ್ಕೆ ಚಂದ್ರಖಂಡಾ ಎನ್ನುವ ಇನ್ನೊಂದು ಹೆಸರಿದೆ.
ಪಾರ್ವತೀ ದೇವಿಯು ಕಠಿನವಾದಂತಹ ತಪ್ಪನ್ನು ಮಾಡಿ ಶಿವನನ್ನು ಮದುವೆಯಾಗುವಲ್ಲಿ ಸಫಲಳಾಗುತ್ತಾಳೆ. ಶಿವನು ಸುಂದರ ರೂಪವನ್ನು ತಾಳಿದ ಅನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ. ಈ ರೂಪವೇ ಚಂದ್ರಘಂಟಾ. ಅರ್ಧ ಚಂದ್ರನನ್ನು ಹಣೆಯಲ್ಲಿ ಧರಿಸಿದವಳಾಕೆ.
ಅಸುರ ವಿನಾಶ ರೂಪವೇ ಚಂದ್ರಘಂಟಾ. ಗರ್ಜಿಸುವ ಭಂಗಿಯವಳಾದ ಈಕೆ ಶತ್ರು ಭಯ ನಿವಾರಣೆ ಮಾಡುವವಳು. ಚಂದ್ರಘಂಟಾ ಗರುಡವಾಹಿನಿಯಾಗಿದ್ದು ಈಕೆಗೆ ಹತ್ತು ಕೈಗಳಿವೆ. ಜಲ ಕುಂಭ, ಬಿಲ್ಲು, ಬಾಣ, ಕಮಲ, ಚಕ್ರ, ಜಪಮಾಲೆ, ತ್ರಿಶೂಲ, ಗದೆ, ಖಡ್ಗ, ಘಂಟೆ ಹಿಡಿದವಳು. ನೀಲಿ ಬಣ್ಣ ಅಥವಾ ಚಿನ್ನದ ಬಣ್ಣದ ಸೀರೆ ಉಟ್ಟವಳು.
ಪೂಜಾ ಫಲ: ಧರ್ಮ, ಅರ್ಥ, ಕಾಮ, ಮೋಕ್ಷ ಚತುರ್ವಿಧ ಫಲಗಳು, ಮಹಾವಿಘ್ನ, ಶತ್ರುಭಯ, ದುಃಖ ಶೋಕಗಳ ನಿವಾರಣೆ. ಪ್ರಭಾತ ಕಾಲದಲ್ಲಿ ಸ್ಮರಿಸಿದವರಿಗೆ ಬಂಧನ, ಮೋಹ, ಪುತ್ರ ನಾಶ, ಧನ ಕ್ಷಯ ಇತ್ಯಾದಿ ಕ್ಲೇಶಗಳು ನಿವಾರಣೆ ಯಾಗುತ್ತವೆ. ಈ ದಿನ ನೀಲಿ ಬಣ್ಣದ ಬಟ್ಟೆ ಧರಿಸುವುದರಿಂದ ವಿಶಾಲವಾದ ಅಗಾಧ ಸಂಪತ್ತನ್ನು ಹಂಚುವಳು.
ದೇವತೆ: ಚಂದ್ರಘಂಟಾ
ಬಣ್ಣ: ನೀಲಿ
ದಿನಾಂಕ: 28.09.2022 ಬುಧವಾರ
ಶರದೃತು ಆಶ್ವಯುಜ ಶುದ್ಧ ತೃತೀಯ
– ಕುತ್ಯಾರು ಕೇಂಜ ಶ್ರೀಧರ ತಂತ್ರಿ, ಆಗಮ ಪಂಡಿತರು, ಕಟಪಾಡಿ