Advertisement
ದುರ್ಗೆಯ ಉಪಾಸನೆ ಎಂದರೆ ಶಕ್ತಿಯ ಉಪಾ ಸನೆ. ಶ್ರೀದೇವಿಯ ಚೈತನ್ಯವೇ ಶಕ್ತಿ. ದೇವತೆಗಳಿಗೆ ದೇವಶಕ್ತಿ, ಸ್ತ್ರೀಯರಿಗೆ ಸೌಭಾಗ್ಯ ಶಕ್ತಿ, ಪುರುಷರಿಗೆ ಮಾಯಾಶಕ್ತಿ, ವಿದ್ಯಾರ್ಥಿಗಳಿಗೆ ವಿದ್ಯಾಶಕ್ತಿ-ಹೀಗೆ ಆದಿಶಕ್ತಿಯ ಅನುಗ್ರಹ ಅನನ್ಯವಾದುದು. ವಾಸ್ತವ ವಾಗಿ ಈ ಆದಿಶಕ್ತಿ ಅಸುರರನ್ನು ಸಂಹಾರಗೈದು ಲೋಕಕಲ್ಯಾಣಗೈದಿದ್ದಾಳೆ. ಆದ್ದರಿಂದ ನಮ್ಮೊಳಗಿನ ಅಸುರೀ ಶಕ್ತಿಗಳನ್ನು ದೂರೀಕರಿಸಿ ಸತ್ವಪೂರ್ಣ ಶಕ್ತಿ ಸಂಪಾದನೆಯೇ ದುರ್ಗಾರಾಧನೆಯ ಮೂಲತಣ್ತೀ.
“ಶರತ್ಕಾಲೇ ಮಹಾಪೂಜಾ ಕ್ರಿಯತೇ ಯಾ ಚ ವಾರ್ಷಿಕೀ’ ಎಂದು ಮಾರ್ಕಂಡೇಯ ಪುರಾಣದ ದೇವಿ ಮಹಾತ್ಮೆಯಲ್ಲಿ ತಿಳಿಸಿದಂತೆ ಶರತ್ಕಾಲದಲ್ಲಿ ಆರಂಭದ ಒಂಬತ್ತು ದಿನಗಳಲ್ಲಿ ಎಲ್ಲೆಡೆ ಶ್ರದ್ಧಾ ಭಕ್ತಿ ಗಳಿಂದ ತಮ್ಮ ತಮ್ಮ ಗದ್ದೆಗಳಲ್ಲಿ, ಮನೆಗಳಲ್ಲಿ, ಮಠ ಮಂದಿರಗಳಲ್ಲಿ, ಉದ್ಯೋಗ ಕ್ಷೇತ್ರಗಳಲ್ಲಿ ದೇವಿಯ ಪೂಜೆಯೊಂದಿಗೆ ಸಂಭ್ರಮ ಸಡಗರಗಳಿಂದ ಉತ್ಸವ ದಂತೆ ಆಚರಿಸುವುದನ್ನು ನಾವು ಕಾಣಬಹುದು ಹಾಗೂ ಒಂಬತ್ತು ದಿನಗಳಲ್ಲಿ ದೇವಿಯ ಒಂಬತ್ತು ರೂಪಗಳನ್ನು ಚಿಂತಿಸಬೇಕೆಂದು ದೇವಿ ಕವಚ ಸ್ತೋತ್ರದಲ್ಲಿ ಉಲ್ಲೇಖಿಸಿದೆ. ಅದರಂತೆ ಒಂಬತ್ತನೇ ದಿನದಂದು ಮಹಾನವಮಿ ಎಂದು ಪ್ರಸಿದ್ಧ. ಅಂದು “ನವಮಂ ಸಿದ್ಧಿದಾತ್ರೀ’ ಎಂದು ಹೇಳಿದಂತೆ ಸಿದ್ಧಿದಾತ್ರೀ ಎಂಬ ರೂಪವನ್ನು ಆರಾಧಿಸಬೇಕು. ಸಿದ್ಧಗಂಧರ್ವಯಕ್ಷಾವೈರಸುರೈರಮರೈದಪಿ|ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿವಾ ಸಿದ್ಧಿದಾಯಿನೀ||ನವದುರ್ಗೆಯರಲ್ಲಿ ಕೊನೆಯದಾದ ಸಿದ್ಧಿ ದಾತ್ರೀಯು ಭಕ್ತರ, ಸಾಧಕರ ಎಲ್ಲ ವಿಧದ ಲೌಕಿಕ ಪಾರಮಾರ್ಥಿಕ ಕಾಮನೆಗಳನ್ನು ಪೂರ್ಣವಾಗುವಂತೆ ಅನುಗ್ರಹಿಸುತ್ತಾಳೆ.
Related Articles
Advertisement
ಆಯುಧ ಪೂಜೆಸಾಮಾನ್ಯವಾಗಿ ಮಹಾನವಮಿಯಂದು ಆಯುಧ ಪೂಜೆ ಮಾಡುತ್ತಾರೆ. ನಾವು ನಿತ್ಯವೂ ಉಪಯೋಗಿಸುವ ವಾಹನಗಳು, ಯಂತ್ರಗಳು, ಆಯುಧಗಳು ಮುಂತಾದವುಗಳನ್ನು ತೊಳೆದು ಸ್ವತ್ಛ ಮಾಡಿ ಹೂವು, ಗಂಧಾದಿಗಳಿಂದ ಅಲಂಕರಿಸಿ ಯಂತ್ರದ ಅಭಿಮಾನಿ ದೇವತೆಯಾದ ದುರ್ಗಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹ ಪ್ರೀತ್ಯರ್ಥ ಪೂಜೆಯನ್ನು ಮಾಡಿ ಅನು ದಿನವೂ ಉಪಯೋಗ ಮಾಡುವಾಗ ಜಗನ್ಮಾತೆಯ ಅನುಗ್ರಹ ದೊರಕುವಂತೆ ಪ್ರಾರ್ಥಿಸಿ, ಯಾವುದೇ ದೋಷಾದಿಗಳಿದ್ದರೂ ಪರಿಹಾರವಾಗುವಂತೆ ಲಿಂಬೆ, ತೆಂಗಿನಕಾಯಿ, ಬೂದುಕುಂಬಳಕಾಯಿಗಳನ್ನು ಅವುಗಳಿಗೆ ಸ್ತುತಿಸಿ ಒಡೆಯುವ ಸಂಪ್ರದಾಯ ಇದೆ. ವಿಜಯದಶಮೀ
ದುಷ್ಟಮರ್ದಿನಿಯಾದ ದುರ್ಗಾದೇವಿಯು ಒಂಬತ್ತು ರಾತ್ರಿಗಳಲ್ಲಿ ಮಧುಕೈಟಭ ಶುಂಭನಿಶುಂಭ ಚಂಡ ಮುಂಡ, ಧೂಮ್ರಲೋಚನ ರಕ್ತಬೀಜ ಮುಂತಾದ ಲೋಕಕಂಟಕ ರಾಕ್ಷಸರನ್ನು ಸಂಹರಿಸಿ ಹತ್ತನೆಯ ದಿನ ಎಲ್ಲ ಆಯುಧವನ್ನು ತೊಳೆದಿಟ್ಟು ಎಲ್ಲ ದೇವತೆಗಳು ದುರ್ಗಾಯುಧವನ್ನು ಪೂಜಿಸಿದ ಕಾರಣ ಈ ದಿನದಂದೂ ಕೆಲವು ಕಡೆ ಆಯುಧಗಳನ್ನು ಪೂಜಿಸುತ್ತಾರೆ. ದುಷ್ಟರನ್ನು ಸಂಹರಿಸಿದ ಕಾರಣ ಈ ದಿನದಂದು ದೇವತೆಗಳು ವಿಜಯೋತ್ಸವವನ್ನು ಆಚರಿಸಿದ ಕಾರಣ ವಿಜಯದಶಮೀ ಎಂದು ಪ್ರಸಿದ್ಧವಾಯಿತು. ಹಾಗೂ ಪಾಂಡವರು ಅಜ್ಞಾತವಾಗಿ ಮುಗಿಸಿ ಶಮೀವೃಕ್ಷದಲ್ಲಿರಿಸಿದ್ದ ಆಯುಧಗಳನ್ನು ತೆಗೆದು ಪೂಜಿಸಿದ ದಿನವೂ ಇದೇ ಆಗಿದೆ. ಈ ದಿನದಂದು ಶಮೀಪೂಜೆಯ ವಿಹಿತ. ಶಮೀ ಕಮಲಪತ್ರಾಕ್ಷಿ ಶಮೀ ಕಂಟಕ ಧಾರಿಣಿ|
ಅಪನೋದಯ ಮೇ ಪಾಪಂ ಆಯುಃಪ್ರಾಣಾಂಶ್ಚ ರಕ್ಷಸು||
ನಮ್ಮೆಲ್ಲರ ಕಂಟಕಗಳನ್ನು ಕೀಳುವ ಶಮೀವೃಕ್ಷವೇ, ನಮ್ಮೆಲ್ಲರ ಪಾಪಗಳನ್ನು ದೂರೀಕರಿಸಿ, ಆಯುಷ್ಯವನ್ನು ನೀಡಿ ಪ್ರಾಣವನ್ನು ರಕ್ಷಿಸು ಎಂದು ಪ್ರಾರ್ಥಿಸಬೇಕು. ಈ ದಿನವನ್ನೂ ಸೇರಿಸಿದಂತೆ ದಶರಾತ್ರಿಗಳಾಗುತ್ತದೆ. ಹಾಗಾಗಿ ದಸರಾ ಎಂದು ಪ್ರಸಿದ್ಧವಾಯಿತು. ಮೂಲಾ ನಕ್ಷತ್ರದಲ್ಲಿ ಶಾರದೆಯನ್ನು ಪ್ರತಿಷ್ಠಾಪಿಸಿ ಶ್ರವಣಾ ನಕ್ಷತ್ರದಂದು ವಿಸರ್ಜನೆ ಮಾಡಿ ಶರದಾ ಮಹೋತ್ಸವವನ್ನು ನಾಡಿನೆಲ್ಲೆಡೆ ಬಹು ವಿಜೃಂಭಣೆ ಯಿಂದ ಆಚರಿಸಲಾಗುತ್ತದೆ. ಶರನ್ನವರಾತ್ರಿಯ ಪರ್ವಕಾಲದಲ್ಲಿ ನವದುರ್ಗಾರಾಧನೆಯೊಂದಿಗೆ ಮನೆಮನೆಗಳಲ್ಲಿ ಸಂಗೀತೋಪಕರಣಗಳ ಪೂಜೆ, ಪವಿತ್ರವಾದ ಧಾರ್ಮಿಕ ಗ್ರಂಥಗಳ ಪೂಜೆ, ವಿದ್ಯಾಭ್ಯಾಸದ ಪುಸ್ತಕಗಳ ಪೂಜೆಗಳನ್ನು ನೆರವೇರಿಸ ಲಾಗುತ್ತದೆ. ಮಹಾನವಮಿಯಂದು ಆಯುಧಪೂಜೆ, ವಿಜಯದಶಮಿಯಂದು ದೇಗುಲಗಳು ಮತ್ತು ಪುಣ್ಯಕ್ಷೇತ್ರಗಳಲ್ಲಿ ವಿದ್ಯಾರಂಭ, ಅಕ್ಷರಾಭ್ಯಾಸ…ಹೀಗೆ ಅನೇಕ ಪೂಜಾಕ್ರಮಗಳನ್ನು ಭಕ್ತರು ಶ್ರದ್ಧೆಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಶ್ರೀಮಧ್ವಾಚಾರ್ಯರು ಕ್ರಿ. ಶ. 1238 ಆಶ್ವಯುಜ ಶುಕ್ಲ ವಿಜಯ ದಶಮಿಯಂದು ಅವತಾರವೆತ್ತಿದುದೂ ವಿಶೇಷ. ||ಪರಂ ಜಾನೇ ಮಾತಸ್ತದನುಸರಣಂ ಕ್ಲೇಶಹರಣಂ|| ಎಂಬುದಾಗಿ ದೇವ್ಯಪರಾಧ ಕ್ಷಮಾಪಣಾ ಸ್ತೋತ್ರದಲ್ಲಿ ನಿರೂಪಿಸಿದಂತೆ ಜಗನ್ಮಾತೆಯ ಅನುಸರಣೆ ಅರ್ಥಾತ್ ಆರಾಧನಾ ಮಾತ್ರಾದಿಂದಲೇ ಸರ್ವಜನರ ಕ್ಲೇಶವು ದೂರವಾಗುವುದು. ಹೀಗೆ ನಮ್ಮ ನಮ್ಮ ಕುಲಾಚಾರ ಪದ್ಧತಿಯಂತೆ, ಶ್ರೀದೇವಿಯ ಮಹಾತ್ಮೆಯನ್ನು ತಿಳಿದು ಜ್ಞಾನಪೂರ್ವಕವಾಗಿ ಜಗನ್ಮಾತೆಯನ್ನು ಆರಾಧಿಸಿ, ದುರ್ಗೆಯರ ಅನುಗ್ರಹಕ್ಕೆ ಪಾತ್ರರಾಗೋಣ. -ವಿದ್ವಾನ್ ಹರಿಪ್ರಸಾದ ಶರ್ಮ, ಉಡುಪಿ