ಹೊಸದಿಲ್ಲಿ : ಅಫೀಮು ಬೆಳೆಯುವುದನ್ನು ಕಾನೂನುಬದ್ಧಗೊಳಿಸಬೇಕು ಎಂಬ ಆಮ್ ಆದ್ಮಿ ಪಕ್ಷದ ನಾಯಕ ಧರಮ್‌ವೀರ್ ಗಾಂಧಿ ಅವರ ಆಗ್ರಹವನ್ನು ರಾಜಕಾರಣಿಯಾಗಿ ಪರಿವರ್ತಿತರಾಗಿರುವ ನವಜ್ಯೋತ್ ಸಿಂಗ್ ಸಿಧು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ.
ಎಎನ್‌ಐ ಜತೆಗೆ ಮಾತನಾಡುತ್ತಿದ್ದ ಕಾಂಗ್ರೆಸ್ ನಾಯಕ ಸಿಧು “ಔಷಧವಾಗಿ ಅಫೀಮು ಸೇವನೆಯಿಂದ ನನ್ನ ಚಿಕ್ಕಪ್ಪ ದೀರ್ಘಕಾಲ ಬಾಳಿದ್ದಾರೆ’ ಎಂದು ಹೇಳಿದ್ದಾರೆ.
“ಧರಮ್‌ವೀರ್ ಗಾಂಧಿ ಸರಿಯಾದುದನ್ನೇ ಹೇಳಿದ್ದಾರೆ. ನಾನು ಅವರನ್ನು ಬೆಂಬಲಿಸುತ್ತೇನೆ. ನನ್ನ ಚಿಕ್ಕಪ್ಪ ಅಫೀಮನ್ನು ಔಷಧವಾಗಿ ಬಳಸಿ ದೀರ್ಘ ಕಾಲ ಬಾಳಿದ್ದಾರೆ’ಎಂದು ಪಂಜಾಬ್ ಸಚಿವರಾಗಿರುವ ಸಿಧು, ಪಟಿಯಾಲಾದ ಆಪ್ ಸಂಸದ ಧರಮ್ ವೀರ್ ಗಾಂಧಿ ಅವರನ್ನು ಬೆಂಬಲಿಸಿದ್ದಾರೆ.
ಧರಮ್ ವೀರ್ ಗಾಂಧಿ ಅವರು ಕಳೆದ ಕೆಲವು ವರ್ಷಗಳಿಂದಲೂ ಅಫೀಮು ಬೆಳೆಯುವುದನ್ನು ಕಾನೂನು ಬದ್ಧಗೊಳಿಸಬೇಕೆಂದು ಅನೇಕ ಸಂದರ್ಭಗಳಲ್ಲಿ ಆಗ್ರಹಿಸುತ್ತಾ ಬಂದಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿ ಅವರು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರನ್ನು ಕಳೆದ ವರ್ಷ ಭೇಟಿಯಾಗಿದ್ದರು.
ಗಾಂಧಿ ಅವರು ಈ ಸಂಬಂಧ 2016ರಲ್ಲೇ ಲೋಕಸಭೆಯಲ್ಲಿ ಖಾಸಗಿ ಸದಸ್ಯ ಮಸೂದೆಯನ್ನು ಮಂಡಿಸಿದ್ದರು. ತಮ್ಮ ಪಕ್ಷದ ನಾಯಕತ್ವದೊಂದಿಗೆ ಜಟಾಪಟಿಯಲ್ಲಿ ತೊಡಗಿರುವ ಧರಮ್‌ವೀರ್ ಗಾಂಧಿ ಅವರು ಅಫೀಮು ಮತ್ತು ಮರಿವಾನಾ ವಿಷಯದಲ್ಲಿ ಸರಕಾರ ಉದಾರ ಮತ್ತು ವೈಜ್ಞಾನಿಕ ನಿಲುವು ತಳೆಯಬೇಕೆಂದು ಬಯಸಿದ್ದಾರೆ.