ಚಂಡೀಗಢ್: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಭಾರೀ ಸೋಲನ್ನು ಅನುಭವಿಸಿ ಆಮ್ ಆದ್ಮಿ ಪಕ್ಷ ಅಧಿಕಾರದ ಗದ್ದುಗೆ ಏರುತ್ತಿರುವ ನಡುವೆಯೇ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜ್ಯೋತ್ ಸಿಂಗ್ ಸಿಧು ಮಾಧ್ಯಮ ಸಂವಾದದಲ್ಲಿ, ಪಂಜಾಬ್ ಜನರು ಅತ್ಯುತ್ತಮ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಐಪಿಎಲ್ 2022: ರಾಜಸ್ಥಾನ ರಾಯಲ್ಸ್ ಪಾಳಯ ಸೇರಿದ ಲಸಿತ್ ಮಾಲಿಂಗ
ಹೊಸ ವ್ಯವಸ್ಥೆಗಾಗಿ ಪಂಜಾಬ್ ಜನರು ತೆಗೆದುಕೊಂಡ ಅತ್ಯುತ್ತಮ ನಿರ್ಧಾರಕ್ಕಾಗಿ ಅವರನ್ನು ಅಭಿನಂದಿಸುವುದಾಗಿ ಹೇಳಿದರು. ನೀವು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಈ ಮಾತನ್ನು ಹೇಗೆ ಹೇಳುತ್ತೀರಿ ಎಂಬ ಪ್ರಶ್ನೆಗೆ, ಜನರು ಬದಲಾವಣೆಯನ್ನು ಆಯ್ಕೆ ಮಾಡಿಕೊಂಡಿದ್ದು, ಅವರ ನಿರ್ಧಾರ ಎಂದೂ ತಪ್ಪಾಗುವುದಿಲ್ಲ. ಜನರ ಧ್ವನಿ ದೇವರ ಧ್ವನಿಯಾಗಿದೆ. ನಾವು ಇದನ್ನು ನಮ್ರತೆಯಿಂದ ಅರ್ಥ ಮಾಡಿಕೊಂಡು ಜನಾದೇಶಕ್ಕೆ ತಲೆಬಾಗಲೇಬೇಕಾಗಿದೆ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಪತ್ರಕರ್ತರ ಜತೆಗಿನ ಸಂವಾದದ ವೇಳೆ ಯಾವುದೇ ಒತ್ತಡ ತೋರ್ಪಡಿಸದ ಸಿಧು, ಪಂಜಾಬ್ ನ ಅಭಿವೃದ್ಧಿಯೇ ನನ್ನ ಧ್ಯೇಯವಾಗಿದೆ. ಇದರಿಂದ ಯಾವತ್ತೂ ದೂರ ಸರಿಯುವುದಿಲ್ಲ. ಯೋಗಿಯಾದವ ಧರ್ಮಯುದ್ಧದಲ್ಲಿದ್ದಾಗ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುತ್ತಾನೆ. ಆತ ಸಾವಿಗೂ ಕೂಡಾ ಹೆದರುವುದಿಲ್ಲ. ನಾನೀಗ ಪಂಜಾಬ್ ನಲ್ಲಿದ್ದೇನೆ. ಮುಂದೆಯೂ ಇರುತ್ತೇನೆ. ಯಾರಾದರೊಬ್ಬರು ಉನ್ನತ ಉದ್ದೇಶ ಹೊಂದಿದ್ದು, ಪಂಜಾಬ್ ಅನ್ನು ಪ್ರೀತಿಸುತ್ತಿರುವಾಗ ಸೋಲು, ಗೆಲುವಿನ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದರು.
ನವಜ್ಯೋತ್ ಸಿಂಗ್ ಸಿಧು ಪೂರ್ವ ಅಮೃತ್ ಸರ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಸಿಧು ತಮ್ಮ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಜೀವನ್ ಜ್ಯೋತ್ ಕೌರ್ ಎದುರು 6000 ಮತಗಳ ಅಂತರದಿಂದ ಸೋಲನ್ನನುಭವಿಸಿದ್ದರು.