ಚಂಡೀಗಢ: “ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ನನ್ನ ಅಣ್ಣನಿದ್ದಂತೆ’ ಹೀಗೆಂದು ಪಂಜಾಬ್‌ನ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ. ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.
ಗುರು ನಾನಕ್ ಜಯಂತಿ ಪ್ರಯುಕ್ತ ನ.17ರಿಂದ ಪಂಜಾಬ್ ಮತ್ತು ಪಾಕ್ ಗಡಿಯಾಗಿರುವ ಕರ್ತಾಪುರ ಕಾರಿಡಾರ್ ತೆರೆಯಲಾಗಿದ್ದು, ಭಕ್ತರಿಗೆ ಪಾಕ್‌ಗೆ ತೆರಳಲು ಅವಕಾಶ ಮಾಡಿಕೊಡಲಾಗಿದೆ. ಹಾಗೆಯೇ ಪಾಕ್‌ಗೆ ತೆರಳಿದ್ದ ನವಜೋತ್ ಸಿಧುರನ್ನು ಅಲ್ಲಿನ ಅಧಿಕಾರಿಗಳು ಬರಮಾಡಿಕೊಂಡಿದ್ದಾರೆ. ಆ ವೇಳೆ ಮಾತನಾಡಿದ ಸಿಧು, ಇಮ್ರಾನ್ ಅವರು ನನ್ನಣ್ಣನಂತೆ ಎಂದು ಹೇಳಿದ್ದಾರೆ.
ಬಿಜೆಪಿ ಆಕ್ರೋಶ: ಸಿಧು ಅವರ ಹೇಳಿಕೆ ಬಿಜೆಪಿ ನಾಯಕರನ್ನು ಕೆರಳಿಸಿದೆ. “ಇವರಿಗೆ ಹಿಂದೂಗಳು ಐಸಿಸ್ ಉಗ್ರರಂತೆ ಕಾಣುತ್ತಾರೆ, ಆದರೆ ಪಾಕ್ ಪಿಎಂ ಅಣ್ಣನಂತೆ ಕಾಣುತ್ತಾರೆ’ ಎಂದು ದೂರಿದೆ. “ಈ ಹೇಳಿಕೆಯ ಹಿಂದೆ ಸಾಕಷ್ಟು ಅರ್ಥವಿದೆ. ಇದು ರಾಹುಲ್ ಗಾಂಧಿ ಸಹಿತ ಅನೇಕ ಹಿರಿಯ ನಾಯಕರಿಗೆ ಸಂಬಂಧಪಟ್ಟಿದೆ. ಇದೊಂದು ಗಂಭೀರ ವಿಚಾರ’ ಎಂದು ಬಿಜೆಪಿ ವಕ್ತಾರರಾಗಿರುವ ಸಂಬಿತ್ ಪಾತ್ರಾ ನುಡಿದಿದ್ದಾರೆ.
ತಲೆ ಕೆಡಿಸಿಕೊಳ್ಳಲ್ಲ: ಸಿಧು:
ಹೇಳಿಕೆಯ ವಿಚಾರವಾಗಿ ಬಿಜೆಪಿ ಸಾಕಷ್ಟು ಆರೋಪಗಳನ್ನು ಮಾಡುತ್ತಿದ್ದರೂ ಸಿಧು ಮಾತ್ರ ಈ ವಿಚಾರವಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಶನಿವಾರದಂದು ಸುದ್ದಿಗೋಷ್ಠಿ ನಡೆಸಿ, ಕರ್ತಾಪುರ ಕಾರಿಡಾರ್ ತೆರೆಯಲು ಕಾರಣರಾದ ಪಿಎಂ ಮೋದಿ ಮತ್ತು ಇಮ್ರಾನ್ ಖಾನ್‌ಗೆ ಧನ್ಯವಾದವನ್ನೂ ತಿಳಿಸಿದ್ದಾರೆ. ಹಾಗೆಯೇ ಪಂಜಾಬ್‌ನ ಅಭಿವೃದ್ಧಿಗಾಗಿ ಕಾರಿಡಾರ್ ಅನ್ನು ಶಾಶ್ವತವಾಗಿ ತೆರೆದಿಡಿ ಎಂದು ಮನವಿಯನ್ನೂ ಮಾಡಿದ್ದಾರೆ.