Advertisement

ನವರಾತ್ರಿ ಹಬ್ಬಕ್ಕಾಗಿ ಸಿಹಿ

07:50 PM Oct 03, 2019 | mahesh |

ನವರಾತ್ರಿ ಹಬ್ಬದಲ್ಲಿ ಸಾಮಾನ್ಯವಾಗಿ ಪ್ರತೀದಿನವೂ ಸಂಭ್ರಮ. ಈ ದಿನಗಳಲ್ಲಿ ಏನಾದರೊಂದು ಸಿಹಿಯನ್ನು ತಯಾರಿಸಿ ದೇವಿಗೆ ಸಮರ್ಪಿಸುವವರಿಗಾಗಿ ಇಲ್ಲಿವೆ ಕೆಲವು ರಿಸಿಪಿಗಳು.

Advertisement

ಸಿಹಿ ಅಪ್ಪ
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ- ಎರಡು ಕಪ್‌, ಸೌತೆಕಾಯಿತುರಿ- ಒಂದೂವರೆ ಕಪ್‌, ತೆಂಗಿನ ತುರಿ- ಅರ್ಧ ಕಪ್‌, ಬೆಲ್ಲ- ಅರ್ಧ ಕಪ್‌, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ನೆನೆಸಿದ ಅಕ್ಕಿಗೆ ತೆಂಗಿನತುರಿ ಮತ್ತು ಉಪ್ಪು ಸೇರಿಸಿ, ನುಣ್ಣಗೆ ರುಬ್ಬಿ ಮಿಕ್ಸಿಂಗ್‌ ಬೌಲ್‌ಗೆ ಹಾಕಿ. ಸೌತೆಕಾಯಿತುರಿಗೆ ಬೆಲ್ಲ ಸೇರಿಸಿ ಬೇಯಿಸಿ. ಆರಿದ ಮೇಲೆ ಇದನ್ನು ರುಬ್ಬಿಟ್ಟ ಅಕ್ಕಿಹಿಟ್ಟಿಗೆ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ, ಕಾದ ಅಪ್ಪದ ಗುಳಿಗೆ ಒಂದು ಚಮಚ ತುಪ್ಪ ಹಾಕಿ ಹದಮಾಡಿಟ್ಟುಕೊಂಡ ಹಿಟ್ಟನ್ನು ಹಾಕಿ ಮುಚ್ಚಳ ಮುಚ್ಚಿ ಬೇಯಿಸಿ. ಬೆಂದ ಅಪ್ಪಗಳಿಗೆ ಒಂದು ಚಮಚ ತುಪ್ಪ ಹಾಕಿ, ಕವುಚಿ ಬೇಯಿಸಿದರೆ ರುಚಿಯಾದ ಅಪ್ಪ ರೆಡಿ.

ತುಪ್ಪದ ಉಂಡಲಕಾಳು
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ- ಒಂದು ಕಪ್‌, ಅಕ್ಕಿಹುಡಿ- ಎಂಟು ಚಮಚ, ತುಪ್ಪ- ಅರ್ಧ ಕಪ್‌, ತೆಂಗಿನತುರಿ- ಅರ್ಧ ಕಪ್‌, ಬೆಲ್ಲ- ಎಂಟು ಚಮಚ, ಏಲಕ್ಕಿಪುಡಿ- ಕಾಲು ಚಮಚ, ಹುರಿದ ಎಳ್ಳು- ಎರಡು ಚಮಚ.

ತಯಾರಿಸುವ ವಿಧಾನ: ನೆನೆಸಿಟ್ಟ ಬೆಳ್ತಿಗೆ ಅಕ್ಕಿಯನ್ನು ನುಣ್ಣಗೆ ರುಬ್ಬಿ ಮಿಕ್ಸಿಂಗ್‌ ಬೌಲ್‌ಗೆ ಹಾಕಿ. ನಂತರ ಇದಕ್ಕೆ, ಹಿಡಿಸುವಷ್ಟು ಅಕ್ಕಿಹುಡಿ ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ, ಚಿಕ್ಕಚಿಕ್ಕ ಉಂಡೆಗಳಾಗಿ ಮಾಡಿಟ್ಟುಕೊಂಡು ಕಾದ ತುಪ್ಪದಲ್ಲಿ ಹಸಿಮಾಸುವವರೆಗೆ ಹುರಿದು ಮಿಕ್ಸಿಂಗ್‌ಬೌಲ್‌ಗೆ ಹಾಕಿ. ಬೆಲ್ಲಕ್ಕೆ ತೆಂಗಿನತುರಿ ಏಲಕ್ಕಿ, ಎಳ್ಳು ಸೇರಿಸಿ, ಮಿಶ್ರಮಾಡಿ. ನಂತರ ಇದನ್ನು ಉಂಡಲಕಾಳಿನ ಜೊತೆ ಮಿಶ್ರಮಾಡಿ.

Advertisement

ಕಾಯಿ ಕಡುಬು
ಬೇಕಾಗುವ ಸಾಮಗ್ರಿ: ತೆಂಗಿನತುರಿ- ಒಂದೂವರೆ ಕಪ್‌, ಬೆಲ್ಲದಪುಡಿ- ಅರ್ಧ ಕಪ್‌, ಏಲಕ್ಕಿಪುಡಿ- ಕಾಲು ಚಮಚ, ಹುರಿದ ಎಳ್ಳು- ಮೂರು ಚಮಚ, ಹುರಿದ ಗೋಡಂಬಿ ಚೂರುಗಳು- ನಾಲ್ಕು ಚಮಚ, ಗೋಧಿಹುಡಿ- ಎರಡು ಕಪ್‌, ಚಿರೋಟಿರವೆ- ಒಂದು ಕಪ್‌, ತುಪ್ಪ- ನಾಲ್ಕು ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಮಿಕ್ಸಿಂಗ್‌ ಬೌಲ್‌ನಲ್ಲಿ ಗೋಧಿಹುಡಿಗೆ ಚಿರೋಟಿರವೆ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ, ತುಪ್ಪ, ಉಪ್ಪು ಮತ್ತು ಬೇಕಷ್ಟು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಅರ್ಧಗಂಟೆ ಮುಚ್ಚಿ ಇಡಿ. ಬೆಲ್ಲಕ್ಕೆ ಸ್ವಲ್ಪ ನೀರು ಸೇರಿಸಿ ಕುದಿಯಲು ಇಡಿ. ಬೆಲ್ಲ ಕರಗಿ ಸ್ವಲ್ಪ ದಪ್ಪವಾಗುತ್ತ ಬರುವಾಗ ತೆಂಗಿನತುರಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ, ಸ್ವಲ್ಪ ಸಮಯ ಒಲೆಯಲ್ಲಿ ಸಣ್ಣ ಉರಿಯಲ್ಲಿ ಇಟ್ಟು ಸೌಟಿನಿಂದ ಕಲಕುತ್ತ ನೀರು ಆರಿಸಿ ಒಲೆಯಿಂದ ಇಳಿಸಿ. ಇದಕ್ಕೆ ಹುರಿದಿಟ್ಟ ಗೋಡಂಬಿ, ಎಳ್ಳು ಮತ್ತು ಏಲಕ್ಕಿ ಪುಡಿ ಸೇರಿಸಿ ಮಿಶ್ರಮಾಡಿದರೆ ಹೂರಣ ರೆಡಿ. ನಂತರ ಕಲಸಿಟ್ಟ ಗೋಧಿಹಿಟ್ಟನ್ನು ಪುನಃ ನಾದಿ ಕೈಯಲ್ಲಿ ಗಿನ್ನಲಿಯಂತೆ ಮಾಡಿ ಒಳಗೆ ಹೂರಣವನ್ನು ತುಂಬಿ ಕಡುಬಿನಂತೆ ಮಾಡಿ ಬದಿಯನ್ನು ಅಂಟಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ.

ಹುರಿದ ಗೋಧಿಹಿಟ್ಟಿನ ತುಪ್ಪದ ಉಂಡೆ
ಬೇಕಾಗುವ ಸಾಮಗ್ರಿ: ಗೋಧಿಹಿಟ್ಟು- ಮೂರು ಕಪ್‌, ಸಕ್ಕರೆ- ಮೂರು ಕಪ್‌, ತುಪ್ಪ- ಒಂದೂವರೆ ಕಪ್‌, ತುಪ್ಪದಲ್ಲಿ ಹುರಿದ ಗೋಡಂಬಿ, ಬಾದಾಮಿತರಿ- ಆರು ಚಮಚ, ಏಲಕ್ಕಿಪುಡಿ- ಒಂದು ಚಮಚ.

ತಯಾರಿಸುವ ವಿಧಾನ: ದಪ್ಪತಳದ ಬಾಣಲೆಯಲ್ಲಿ ತುಪ್ಪ ಹಾಕಿ ಬಾದಾಮಿ, ಗೋಡಂಬಿಗಳನ್ನು ಹುರಿದಿಟ್ಟುಕೊಳ್ಳಿ. ನಂತರ ಗೋಧಿಹುಡಿಯನ್ನು ಕಂದು ಬಣ್ಣ ಬರುವವರೆಗೆ ಸಣ್ಣ ಉರಿಯಲ್ಲಿ ಹುರಿಯಬೇಕು. ನಂತರ ಅದೇ ಬಾಣಲೆಯಲ್ಲಿ ಸಕ್ಕರೆ ಮುಳುಗುವಷ್ಟು ನೀರು ಹಾಕಿ ಪಾಕಕ್ಕೆ ಇಡಬೇಕು. ಪಾಕ ನೂಲಿನ ಹದಕ್ಕೆ ಬರುವಾಗ ಹುರಿದಿಟ್ಟ ಗೋಧಿಹುಡಿ ಮತ್ತು ಗೋಡಂಬಿ, ದ್ರಾಕ್ಷಿ, ಏಲಕ್ಕಿಪುಡಿ ಇತ್ಯಾದಿಗಳನ್ನು ಹಾಕಿ ಚೆನ್ನಾಗಿ ಮಗುಚಿ ಒಲೆಯಿಂದ ಇಳಿಸಿ, ಆರುತ್ತಾ ಬರುವಾಗ ಉಂಡೆ ಕಟ್ಟಬೇಕು. ಸುವಾಸನಾಯುಕ್ತವಾದ ಉಂಡೆ ಸವಿಯಲು ಸಿದ್ಧ.

ಗೀತಸದಾ

Advertisement

Udayavani is now on Telegram. Click here to join our channel and stay updated with the latest news.

Next