Advertisement
ದುರ್ಗತಿಯನ್ನು ಹರಣ ಮಾಡುವವಳೇ ದುರ್ಗಾ. ನಮ್ಮಲ್ಲಿ ಅಡಗಿರುವ ತಮೋ ಗುಣವನ್ನು ನಾಶಗೊಳಿಸುವವಳು ದುರ್ಗೆ. “ಮಹಿಷ’ ತಮೋಗುಣದ ಸಂಕೇತ. ಲಕ್ಷ್ಮೀ ಭೌತಿಕ ಸಂಪತ್ತಿನ ದೇವತೆಯಲ್ಲ. ಭೌದ್ಧಿಕ ಸಂಪತ್ತಿನ ಅಧಿದೇವತೆ.
Related Articles
Advertisement
ವರ್ಷದಲ್ಲಿ ನವರಾತ್ರಿಯನ್ನು ಐದು ಬಾರಿ ಆಚರಿಸುವ ಸಂಪ್ರದಾಯವಿದೆ. ವಸಂತ ನವರಾತ್ರಿ, ಆಷಾಢ ನವರಾತ್ರಿ, ಶಾರದಾ ನವರಾತ್ರಿ ಮತ್ತು ಪೌಷ/ ಮಾಘ ನವರಾತ್ರಿ. ಶಾರದಾ ಮತ್ತು ವಸಂತ ನವರಾತ್ರಿ ಅತಿ ಮಹತ್ವದ್ದು.
ವಸಂತ ನವರಾತ್ರಿ : ನವ ವಿಧ ಶಕ್ತಿ ದೇವತೆಗಳನ್ನು ಆರಾಧಿಸುವ ಪರ್ವವೇ (ಮಾರ್ಚ್, ಎಪ್ರಿಲ್) ಬಸಂತ ನವರಾತ್ರಿ ಅಥವಾ ಚೈತ್ರ ನವರಾತ್ರಿ. ಇದನ್ನು ರಾಮ ನವರಾತ್ರಿ ಎಂತಲೂ ಕರೆಯುತ್ತಾರೆ.
ಗುಪ್ತ ನವರಾತ್ರಿ : ಗುಪ್ತನವರಾತ್ರಿ ಅಥವಾ, ಆಷಾಡ ಅಥವಾ ಗಾಯತ್ರಿ ಅಥವಾ ಶಾಕಾಂಭರಿ ನವರಾತ್ರಿ ಆಷಾಢ ಶುಕ್ಲ (ಜೂನ್- ಜುಲೈ) ದಂದು ಆಚರಿಸಲ್ಪಡುವ ನವರಾತ್ರಿ.
ಶಾರದಾ ನವರಾತ್ರಿ: ಇದು ಮಹಾ ನವರಾತ್ರಿಯೂ ಹೌದು. ಆಶ್ವಯುಜ ಮಾಸದಲ್ಲಿ ನಡೆಯುವ ಶಾರದಾ ನವರಾತ್ರಿಯೂ ಹೌದು. ಸಪ್ಟೆಂಬರ್ -ನವೆಂಬರ್ ತಿಂಗಳಲ್ಲಿ ಬರುವ ಹಬ್ಬ.
ಪೌಷ ನವರಾತ್ರಿ : ದಶಂಬರ-ಜನವರಿಯಲ್ಲಿ ಬರುವ ನವರಾತ್ರಿ ಹಬ್ಬವಿದು. ಪುಷ್ಯ ಶುಕ್ಲಪಕ್ಷದಂದು ಆಚರಣೆ.
ಮಾಘ ನವರಾತ್ರಿ : ಗುಪ್ತನವರಾತ್ರಿ ಎಂತಲೂ ಹೆಸರಿದೆ. ಮಾಘ ಮಾಸ ಶುಕ್ಲಪಕ್ಷದಲ್ಲಿ ಬರುವ ನವರಾತ್ರಿ (ಜನವರಿ-ಫೆಬ್ರವರಿ) ಚೈತ್ರ ನವರಾತ್ರಿ ಮತ್ತು ಶಾರದಾ ನವರಾತ್ರಿ, ಎಂಬ ಎರಡು ನವರಾತ್ರಿ ಹಬ್ಬಗಳು ಅತಿ ವಿಶಿಷ್ಟವಾದುದು. ಅದರಲ್ಲೂ ಶಾರದಾ ನವರಾತ್ರಿ ಅತೀ ಸಂಭ್ರಮದಿಂದ ನಡೆಯುತ್ತದೆ. ಮೊದಲ ಮೂರು ದಿನಗಳಲ್ಲಿ ಮಹಾಕಾಳಿಯನ್ನೂ, ನಂತರದ ಮೂರು ದಿನಗಳು ಮಹಾಲಕ್ಷ್ಮೀ, ಮತ್ತು ಕೊನೆಯ ಮೂರು ದಿನಗಳಲ್ಲಿ ಮಹಾಸರಸ್ವತಿಯನ್ನು ಪೂಜಿಸುವುದು ಪದ್ಧತಿ.
ಶೈಲಪುತ್ರಿ, ಬ್ರಹ್ಮಚಾರಿಣೀ, ಚಂದ್ರಘಂಟ, ಕೂಷ್ಮಾಂಡ, ಸ್ಕಂಧಮಾತಾ, ಕಾತ್ಯಾಯಿನೀ, ಕಾಳರಾತ್ರಿ, ಮಹಾಗೌರಿ, ಸಿದ್ಧಿಧಾತ್ರಿ ಇತ್ಯಾದಿ ಒಂಭತ್ತು ರೂಪಗಳಿಂದ ದೇವಿಯನ್ನು ಪೂಜಿಸುವುದು ನವರಾತ್ರಿಯ ವಿಶೇಷತೆ.
ದುರ್ಗಾ ಪೂಜೆ – ಚರಿತ್ರೆಯ ಪುಟಗಳಲ್ಲಿ:
ದುರ್ಗಾಪೂಜೆಯು ಕುಶಾನರ ಕಾಲದಿಂದ ಅಸ್ತಿತ್ವದಲ್ಲಿತ್ತು. ಪಲ್ಲವ ಮತ್ತು ಪಾಂಡ್ಯರ ಕಾಲದಲ್ಲಿ (7-9 ನೇ ಶತಮಾನದಲ್ಲಿ) ಮಹಿಷಮರ್ಧಿನಿ ಆರಾಧನೆಯು ಕಂಡುಬರುತ್ತಿತ್ತು. ಸುಮಾರು ಇದೇ ಕಾಲದಲ್ಲಿ ಅವಿಭಜಿತ ದ.ಕ ಜಿಲ್ಲೆಯಲ್ಲೂ ದೇವೀ ದೇವಾಲಯಗಳು ಅಸ್ತಿತ್ವಕ್ಕೆ ಬಂದವು.
ತುಳುನಾಡಿನಲ್ಲಿ ಬಹುತೇಕ ದುರ್ಗಾ, ದುರ್ಗಾ ಭಗವತೀ, ದುರ್ಗಾಪರಮೇಶ್ವರಿ, ಮಹಿಷಮರ್ಧಿನಿ, ಮಹಿಷಾಸುರಮರ್ಧಿನಿ ಮತ್ತು ಚಂಡಿಕಾದೇವಿ ಎಂಬ ಹೆಸರಿನಲ್ಲಿ ಆರಾಧನೆ ಮತ್ತು ದೇವಾಲಯಗಳಿವೆ. ಸಪ್ತಮಾತೃಕೆಯರ ಪೂಜೆಯನ್ನೂ ಕೆಲವು ದೇವಾಲಯಗಳಲ್ಲಿ ಕಾಣಬಹುದು. ಬ್ರಹ್ಮಣಿ (ಸರಸ್ವತಿ) ಮಾಹೇಶ್ವರೀ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಾ. ಯೋಗೇಶ್ವರೀಯನ್ನು ಆರಾಧಿಸುವ ಪದ್ಧತಿಯಿದೆ. (ಅಷ್ಟ ಮಾತೃಕೆಯರು) ಬ್ರಾಹ್ಮೀ, ಮಾಹೇಶ್ವರೀ, ವೈಷ್ಣವಿಯರನ್ನು ಗಾಯತ್ರಿ ಸಾವಿತ್ರಿ ಮತ್ತು ಸರಸ್ವತಿಯೆಂದು ಕೆಲವೆಡೆ ಪೂಜೆ.
ಅಷ್ಟ ಮಾತೃಕೆಯರು ಎಂಟು ಮನೋ ಗುಣಗಳನ್ನು ಪ್ರತಿನಿಧಿಸುವುದು ಎಂದು ನಂಬಿಕೆ. ಯೋಗೇಶ್ವರಿ – ಕಾಮ, ಮಹೇಶ್ವರಿ – ಕ್ರೋಧ, ವೈಷ್ಣವಿ – ಲೋಭ, ಬ್ರಹ್ಮಣಿ – ಮದ, ಕೌಮಾರಿ – ಮೋಹ, ಇಂದ್ರಾಣಿ – ಮಾತ್ಸರ್ಯ, ಚಾಮುಂಡಾ – ಪೈಶುನ್ಯ ಮತ್ತು ವಾರಾಹಿ – ಅಸೂಯ.
-ಜಲಂಚಾರು ರಘುಪತಿ ತಂತ್ರಿ – ಉಡುಪಿ