Advertisement

ನವರಾತ್ರಿಯ ವೈಭವೋತ್ಸವ…. ಮಾತೃ –ಪ್ರಕೃತಿ –ಶಕ್ತಿ ಉಪಾಸನೆ

01:13 PM Sep 26, 2022 | Team Udayavani |

ಶರದೃತು ಆರಂಭವು ಮಳೆಗಾಲದ ಅಂತ್ಯ. ಗದ್ದೆಗಳಲ್ಲಿ ಪೈರು ಬೆಳೆದು ತೆನೆಗಳು ತೊನೆದಾಡುವ ಪ್ರಕೃತಿಯ ಸಹಜ ಸಂಭ್ರಮ.ರೈತನ ದುಡಿಮೆಗೆ ಭೂಮಿತಾಯಿ ಅನುಗ್ರಹಿಸಿದ ಸತ್ಫಲ, ಜೀವನಾಧಾರವಾದ “ಅನ್ನಬ್ರಹ್ಮ’ ಮನೆಯಂಗಳಕ್ಕೆ ಬರುವ ಸಮೃದ್ಧಿಯ ಸಂದರ್ಭ. ನಿಸರ್ಗ ಹಸುರಾಗಿ ತನ್ನ ನೈಜ ಸೊಬಗಿನೊಂದಿಗೆ ನಯನ ಮನೋಹರವಾಗಿ, ಮನಸ್ಸಿಗೆ ಮುದನೀಡುವ ಕಾಲದಲ್ಲಿ ಶರನ್ನವರಾತ್ರಿ ಒದಗಿ ಬರುತ್ತದೆ.

Advertisement

ಶರದೃತು ಪ್ರಕೃತಿಯಲ್ಲಿ ಸ್ಥಿತ್ಯಂತರ ಸಂಭವಿಸುವ ವೇಳೆ. ಪ್ರಕೃತಿಮಾತೆಯ ಮೂಲಕ ಲೋಕಮಾತೆಯನ್ನು ಪೂಜಿಸುವ ಪುಣ್ಯಕಾಲ.

ನಿಸರ್ಗದ ಬದಲಾವಣೆಯನ್ನು ಗ್ರಹಿಸಿ ಬದುಕು ಕಟ್ಟಿಕೊಂಡ ಮಾನವ – ಪ್ರಕೃತಿ ಸಂಬಂಧವೇ ಅನಾದಿಯಿಂದ ಸಾಗಿಬಂದಿದೆ.ನಮ್ಮ ಆಚರಣೆಗಳೆಲ್ಲಈ ಮಾನವ ಕಲ್ಪಿತ ಸಂವಿಧಾನಕ್ಕೆ ಹೊಂದಿಕೊಂಡಿತು.

ನವರಾತ್ರಿಯು ರಮೋತ್ಸವವೂ ಹೌದು. “ರಮಾ’ ಅಂದರೆ ಲಕ್ಷ್ಮೀ, ಶೋಭೆ, ಸಮೃದ್ಧಿ ಎಂದು ಅರ್ಥ. ಭೂಮಿದೇವಿ ಫ‌ಲವಂತಿಕೆಯ ಅತಿಶಯತೆಯನ್ನು ಸಾಂಕೇತಿಸುವ ಪರ್ವಕಾಲ.ಇದು ಲಕ್ಷ್ಮೀ, ಸಂಪತ್ತಿಗೆ ಹೇತುವಾದ ಪರಿಸರವಲ್ಲವೇ ? ಹಾಗಾಗಿ ನವರಾತ್ರಿ ಸರ್ವಸಮೃದ್ಧಿ ಅನುಗ್ರಹವಾಗುವ ಕಾಲ, ಇದು ಉತ್ಸಾಹದ ಉತ್ಸವದ ಕಾಲ ಅದೇ ಲಕ್ಷ್ಮೀ ಒಲಿಯುವ ಆಮೂಲಕ ಶೋಭೆ ಮೆರೆಯುವ ಕಾಲ, ಇದುವೇ “ರಮೋತ್ಸವ’ ಕಾಲ.

ಒಂಬತ್ತು ದಿನಗಳ ಉತ್ಸವ, ಹತ್ತನೇ ದಿನದ ಸಮಾರೋಪ ಅವಭೃತ. ಇದರಿಂದ ಈ ಹತ್ತು ದಿನಗಳ ಉತ್ಸವ ಹತ್ತು ಹಗಲುಗಳು, ದಶಾರ್ಹ. ಹತ್ತುದಿನಗಳ ಅವಧಿ ದಶ + ಅಹರಾ = ದಸರಾ.”ಅಹರ’ ಎಂದರೆ ಹಗಲು ಎಂಬ ಅರ್ಥವಿದೆ.

Advertisement

ಶಕ್ತಿ ಆರಾಧನೆಗೆ ಪ್ರಶಸ್ತಕಾಲ.”ಆಹರ’ಎಂದರೆ ಸಮೀಪಕ್ಕೆತರುವ ಎಂಬ ಅರ್ಥ ಇದೆ,ಅಂದರೆ ಮಹಾಮಾತೆಗೆ ಹತ್ತಿರದಲ್ಲಿರುವುದು ಎಂದರ್ಥ , ಹೀಗೂ ಗ್ರಹಿಸ ಬಹುದು.

ಮಹಾಕಾಳಿ,ಮಹಾಲಕ್ಷ್ಮೀ, ಮಹಾಸರಸ್ವತಿ

ದುರ್ಗಾ ಆರಾಧನೆಗೆ, ಉಪಾಸನೆಗೆ, ಪಾರಾಯಣಕ್ಕೆ. ಯಾಗಗಳಿಗೆ ಉಪಯೋಗವಾಗುವ ಮಹಾಮಂತ್ರಗಳುಳ್ಳ ಮಾರ್ಕಂಡೇಯ ಮಹರ್ಷಿಯಿಂದ ದ್ರಷ್ಟವಾದ “ಸಪ್ತಶತೀ’ಯು ಮಹಾದೇವಿಯ ಆರಾಧನೆಗೆ ಕಲ್ಪಿಸಿಕೊಳ್ಳಬೇಕಾದ ಮೂರು ಸ್ವರೂಪಗಳನ್ನು ವಿವರಿಸಿವೆ. ಮಹಾಕಾಳೀ, ಮಹಾಲಕ್ಷ್ಮೀ, ಮಹಾಸರಸ್ವತೀಗಳೆ ಮೂರು ಸ್ವರೂಪಗಳು. ಅಂತೆಯೇ ಸಪ್ತಶತೀಯನ್ನು ಪ್ರಥಮ ಚರಿತೆ,ಮಧ್ಯಮ ಚರಿತೆ,ಉತ್ತಮ ಚರಿತೆಗಳೆಂದು ವಿಭಾಗಿಸಿವೆ. ಈ ಮೂರು ಚರಿತೆಗಳಿಗೆ ಅನುಕ್ರಮವಾಗಿ ಮಹಾಕಾಳೀ, ಮಹಾಲಕ್ಷ್ಮೀ, ಮಹಾಸರಸ್ವತೀ ಸ್ವರೂಪಗಳನ್ನು ಅಧಿದೇವತೆಗಳಾಗಿ ಒಪ್ಪಲಾಗಿದೆ, ಅದರಂತೆ ಪಾರಾಯಣ, ಅನುಷ್ಠಾನ, ಪುನಶ್ಚರಣೆಗಳು.

ಮಹಾಕಾಳೀ(ಮಹಾಕಾಲೀ), ಹೆಸರೇ ಧ್ವನಿಸುವಂತೆ ಒಂದು ಭೀಕರತೆಯನ್ನು ಸಾಂಕೇತಿಸುತ್ತದೆ. ಇದೇ ದುರ್ಗಾ ಪಾರ್ವತಿ ಎಂಬ ಅರ್ಥವನ್ನು ಹೇಳುತ್ತದೆ. ಮಹಾಲಕ್ಷ್ಮೀ ಎಂದರೆ ಸಂಪತ್ತಿನ ಅಧಿದೇವತೆ – ಶೋಭೆ, ಕಾಂತಿ,ಲಕ್ಷಣ ಸೌಂದರ್ಯ ಎಂದಾದರೆ ಮಹಾಸರಸ್ವತೀ ವಿದ್ಯಾಧಿ ದೇವತೆಯಾಗಿ, ಶಾರದೆಯಾಗಿ ಮಾತು( ವಾಕ್‌), ಜ್ಞಾನ ಎಂದು ಅರ್ಥೈಸಬಹುದು. ಈ ಮೂರು ಚರಿತೆಗಳನ್ನು ಕ್ರಮವಾಗಿ ತಾಮಸ, ರಾಜಸ, ಸಾತ್ವಿಕ ಗುಣಗಳ ವಿಕಾಸದ – ಪರಿವರ್ತನೆಯ ರೂಪಾಂತರಗಳೆಂದು ಸ್ವೀಕರಿಸಬಹುದು. ಸಪ್ತಶತೀಯು ದೇವಿಮಹಾತ್ಮ್ಯ ಎಂದೇ ಪ್ರಸಿದ್ಧ.

ನವರಾತ್ರಿ ಪುಣ್ಯಕಾಲದಲ್ಲಿ ಶಕ್ತಿ ಉಪಾಸನಾ ಕೇಂದ್ರಗಳಲ್ಲಿ, ದೇವಾಲಯಗಳಲ್ಲಿ, ಮನೆಗಳಲ್ಲಿ ವ್ರತವಾಗಿ, ಸಂಭ್ರಮದ ಆಚರಣೆಯಾಗಿ, ರಮೋತ್ಸವವಾಗಿ ಆಚರಿಸಲ್ಪಡುತ್ತದೆ. ಈ ವೇಳೆ ವಿಶೇಷವಾಗಿ ಪೂಜೆ, ಯಾಗ, ಕನ್ನಿಕಾ ಪೂಜೆ, ಸುಮಂಗಲಿಯರಿಗೆ ವಾಯನದಾನಗಳು ಬಹುಸಂಖ್ಯೆಯಲ್ಲಿ ನೆರವೇರುತ್ತವೆ.ವಿವಿಧ ಆರಾಧನೆಗಳೊಂದಿಗೆ ಅನ್ನಸಂತರ್ಪಣೆ ಪ್ರಧಾನವಾಗಿರುತ್ತದೆ.ತಾಯಿ ಹೊಟ್ಟೆಯನ್ನು ತಣಿಸುವವಳಲ್ಲವೇ?

ನಾಲ್ಕು ನವರಾತ್ರಿಗಳು

ಒಂದು ವರ್ಷದಲ್ಲಿ ನಾಲ್ಕು ನವರಾತ್ರಿಗಳು ಸನ್ನಿಹಿತವಾಗುತ್ತವೆ.ಆದರೆ ಪ್ರಸ್ತುತ ಎರಡು ನವರಾತ್ರಿ ಉತ್ಸವ ನಡೆಯುತ್ತಿವೆ. ಇದರಲ್ಲಿ ಶರದೃತುವಿನ ಆರಂಭದೊಂದಿಗೆ ಒಂಬತ್ತು ದಿನ ನೆರವೇರುವ ಶರನ್ನವರಾತ್ರಿ ಜನಪ್ರಿಯವಾಗಿದೆ.

ವಸಂತ ಋತು, ಗ್ರೀಷ್ಮ ಋತು, ಶರದೃತು, ಹೇಮಂತ ಋತುಗಳಲ್ಲಿ ನವರಾತ್ರಿ ಆಚರಿಸಲಾಗುತ್ತಿತ್ತು ಎಂಬುದು ಒಂದು ಒಡಂಬಡಿಕೆ. ವಸಂತ ಋತು, ಗ್ರೀಷ್ಮ ಋತು, ಶರದೃತುಗಳು ಪ್ರಕೃತಿಯಲ್ಲಿ ಸಂಭವಿಸುವ ಹವಾಮಾನದ ಬದಲಾವಣೆಗಳನ್ನು ಸೂಚಿಸುತ್ತಾ ಅನುಕ್ರಮವಾಗಿ ಮರ ಗಿಡಗಳು ಹೂ ಬಿಡುವ – ಮಳೆಯ ಆರಂಭ – ಬೆಳೆ ಬೆಳೆದು ಸಮೃದ್ಧಿಯು ಪ್ರಕೃತಿಯಲ್ಲಿ ಕಾಣುವ ಕಾಲಗಳಾಗಿವೆ. ಇದವೇ ಮಾತೃ – ಪ್ರಕೃತಿ – ಶಕ್ತಿ ಸಂಬಂಧವು ಇದೇ ಸಿದ್ಧಾಂತದಿಂದ ಅಥವಾ ಅನುಭವದಿಂದ ರೂಢ ವಾಯಿತು ಎನ್ನಲಡ್ಡಿಯಿಲ್ಲ.

-ಕೆ.ಎಲ್.ಕೆ.

 

Advertisement

Udayavani is now on Telegram. Click here to join our channel and stay updated with the latest news.

Next