Advertisement

ಕೊಲ್ಲೂರು ಸಂಭ್ರಮದ ನವರಾತ್ರಿ ರಥೋತ್ಸವ

07:05 AM Oct 01, 2017 | Harsha Rao |

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನವರಾತ್ರಿ ಉತ್ಸವದ ರಥೋತ್ಸವ ಹಾಗೂ ವಿದ್ಯಾರಂಭವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ಸೆ. 29ರಂದು ದೇಗುಲದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್‌ ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ಜನಾರ್ದನ ಜೆ.ಸಿ. ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯರು ನವರಾತ್ರಿ ಉತ್ಸವದ ಚಂಡಿಕಾ ಯಾಗದ ಸಂಕಲ್ಪದಲ್ಲಿ ಪಾಲ್ಗೊಂಡರು. 

Advertisement

ರಾತ್ರಿ ನಡೆದ ನವರಾತ್ರಿ ರಥೋತ್ಸವಕ್ಕೆ ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿಗಳು ಚಾಲನೆ ನೀಡಿದರು. ದೇಗುಲದ ಹೊರಪೌಳಿಯಲ್ಲಿ ರಥೋತ್ಸವ ಆರಂಭಗೊಂಡಂತೆ ಭಕ್ತರು “ಅಮ್ಮ ನಾರಾಯಣೀ’ ಎಂಬ ಉದ್ಘೋಷದೊಂದಿಗೆ ದೇವಿ ಸ್ತೋತ್ರವನ್ನು ಪಠಿಸುತ್ತಾ ರಥೋತ್ಸವದಲ್ಲಿ ಪಾಲ್ಗೊಂಡರು.

ರಥದಲ್ಲಿ ಉತ್ಸವಮೂರ್ತಿಯನ್ನು ಇರಿಸಿ ಶ್ರೀ ದೇಗುಲಕ್ಕೆ ಪ್ರದಕ್ಷಿಣೆ ಬಂದು ಸಂಪ್ರದಾಯದಂತೆ ಭಕ್ತರಿಗೆ ನಾಣ್ಯ ಎಸೆಯುವ ಸಂದರ್ಭದಲ್ಲಿ ಭಕ್ತರು ನಾಣ್ಯಗಳನ್ನು ಹಿಡಿಯುವ ತವಕದಲ್ಲಿ ರಥದತ್ತ ಮುಗಿಬಿದ್ದರು. ಈ ನಾಣ್ಯಗಳನ್ನು  ಮನೆಗೆ ತಂದು ಪೂಜಿಸಿದಲ್ಲಿ ಶ್ರೇಯಸ್ಸಾಗುವುದು ಎಂಬ ನಂಬಿಕೆ ಇಲ್ಲಿನ ವಿಶೇಷತೆ.

ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಜಿಲ್ಲಾ ಪಂಚಾಯತ್‌ ಸದಸ್ಯ ಶಂಕರ ಪೂಜಾರಿ, ತಾಲೂಕು ಪಂಚಾಯತ್‌ ಸದಸ್ಯೆ ಗ್ರೀಷ್ಮಾ ಭಿಡೆ, ಕೊಲ್ಲೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಜಯಪ್ರಕಾಶ ಶೆಟ್ಟಿ, ದೇವಸ್ಥಾನದ ಉಪಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಅರ್ಚಕ ಮಂಜುನಾಥ ಅಡಿಗ, ರಮೇಶ ಗಾಣಿಗ, ವಂಡಬಳ್ಳಿ ಜಯರಾಮ ಶೆಟ್ಟಿ, ರಾಜೇಶ ಕಾರಂತ, ನರಸಿಂಹ ಹಳಗೇರಿ, ಅಭಿಲಾಷ್‌ ಪಿ.ವಿ., ಅಂಬಿಕಾ ದೇವಾಡಿಗ, ಜಯಂತಿ ಪಡುಕೋಣೆ ಮೊದಲಾದ ಗಣ್ಯರ ಸಹಿತ 30,000ಕ್ಕೂ ಅಧಿಕ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ವಿದ್ಯಾರಂಭಕ್ಕೆ ದಾಖಲೆಯ ಭಕ್ತ ಸಾಗರ
ವಿಜಯದಶಮಿ ಅಂಗವಾಗಿ ಶನಿವಾರ ಸರಸ್ವತಿ ಮಂಟಪದಲ್ಲಿ ಏರ್ಪಡಿಸಲಾದ ವಿದ್ಯಾರಂಭ (ಅಕ್ಷರಾಭ್ಯಾಸ) ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳಿಂದ ಪುಟ್ಟ ಮಕ್ಕಳೊಡನೆ ಆಗಮಿಸಿದ ಪೋಷಕರ ಸರದಿ ಸಾಲು ಅತಿ ದೂರದವರೆಗೆ ವ್ಯಾಪಿಸಿತ್ತು. ಅರ್ಚಕರು, ಕ್ಷೇತ್ರ ಪುರೋಹಿತರು ಸಹಿತ ಉಪಾಧಿವಂತರು ಮಕ್ಕಳ ಅಕ್ಷರಾಭ್ಯಾಸಕ್ಕೆ ಅನುವು ಮಾಡಿಕೊಟ್ಟರು. ನವಾನ್ನಪ್ರಾಶನ ಹಾಗೂ ವಿಜಯೋತ್ಸವದೊಂದಿಗೆ ನವರಾತ್ರಿ ಉತ್ಸವ ಸಮಾಪನಗೊಂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next