Advertisement
ಕುಂದಾಪುರ: ಹಿಂದೂ ಧರ್ಮದಲ್ಲಿ ಪ್ರತಿಯೊಂದು ಆಚರಣೆಗೂ ವಿಶೇಷ ಮಹತ್ವವಿದೆ. ಆಶ್ವಯುಜ ಮಾಸದ ಆರಂಭದಲ್ಲಿ 9 ದಿನಗಳ ಕಾಲ ಆಚರಿಸುವ ನವರಾತ್ರಿ ಮಹೋತ್ಸವವೂ ವಿಶೇಷ ಅರ್ಥವಿರುವಂಥದ್ದು. ಚಾಂದ್ರಮಾನ ಪಂಚಾಂಗ ರೀತ್ಯ ಶರದ್ ಋತುವಿನ ಮೊದಲ 9 ದಿನಗಳಲ್ಲಿ ಈ ಹಬ್ಬ ಆಚರಿಸುವುದರಿಂದ ಶರನ್ನವರಾತ್ರಿ ಎನ್ನುವುದಾಗಿ ಕೂಡ ಕರೆಯುತ್ತಾರೆ. ಈ ದಿನಗಳಲ್ಲಿ ದೇವಿಯ ಆರಾಧನೆಯಿಂದ ಲೋಕ ಕಲ್ಯಾಣವಾಗುತ್ತದೆ ಎನ್ನುವುದು ನಂಬಿಕೆ.
ನವರಾತ್ರಿಯಂದು ದೇವಸ್ಥಾನಗಳಲ್ಲಿ ದೇವಿಗೆ ದಿನಕ್ಕೊಂದು ಅಲಂಕಾರ ಮಾಡುತ್ತಾರೆ. ದುರ್ಗಾ ಮಾತೆಯ ಒಂಬತ್ತು ರೂಪಗಳನ್ನು ಒಂದೊಂದು ದಿನ ಪೂಜಿಸಲಾಗುತ್ತದೆ. ಆ ನವ ಅಲಂಕಾರಗಳಿಗೂ ಅದರದೇ ಆದ ಅರ್ಥವಿದೆ. ಮೊದಲ ದಿನ ಶೈಲಪುತ್ರಿ (ಕೆಂಪು ಬಣ್ಣ) ಅಲಂಕಾರ- ಅಂದರೆ ಉತ್ಸಾಹ – ಸಂಭ್ರಮದ ಸಂಕೇತ. ಎರಡನೇ ದಿನ ಬ್ರಹ್ಮಚಾರಿಣಿ (ಕಡು ನೀಲಿ ಬಣ್ಣ) ಅಲಂಕಾರ- ಅಂದರೆ ಸಂತೋಷ – ಸಮೃದ್ಧಿ. ಮೂರನೇ ದಿನ ಚಂದ್ರಘಂಟಾ (ಹಳದಿ ಬಣ್ಣ) ಅಲಂಕಾರ – ಸೌಂದರ್ಯ ಹಾಗೂ ಶೌರ್ಯ, ನಾಲ್ಕನೇ ದಿನ ಕೂಷ್ಮಾಂಡಿನಿ (ಹಸಿರು ಬಣ್ಣ) ಅಲಂಕಾರ –ಹಸಿರಿನಿಂದ ಕಂಗೊಳಿಸುತ್ತಾಳೆ. ಐದನೇ ದಿನ ಸ್ಕಂದಮಾತಾ (ಬೂದು ಬಣ್ಣ) ಅಲಂಕಾರ – ತಾಯಿಯಾಗಿ ಮಗುವನ್ನು ಎಲ್ಲ ಹಂತಗಳಲ್ಲಿಯೂ ರಕ್ಷಿಸುತ್ತಾಳೆ. ಆರನೇ ದಿನ ಕಾತ್ಯಾಯಿನಿ (ಕೇಸರಿ ಬಣ್ಣ) ಅಲಂಕಾರ – ಧೈರ್ಯವನ್ನು ಬಿಂಬಿಸುತ್ತದೆ. ಏಳನೇ ದಿನ ಕಾಳರಾತ್ರಿ (ಬಿಳಿ ಬಣ್ಣ) ಅಲಂಕಾರ -ಅಂದರೆ ಭಕ್ತಿ ಹಾಗೂ ಶಾಂತಿಯ ಸಂಕೇತವಾಗಿದೆ. ಎಂಟನೇ ದಿನ ಮಹಾಗೌರಿ (ಗುಲಾಬಿ ಬಣ್ಣ) ಅಲಂಕಾರ – ಭರವಸೆ ಮತ್ತು ಹೊಸತನವನ್ನು ಹಾಗೂ ಒಂಬತ್ತೇ ದಿನ ಸಿದ್ಧಿಧಾತ್ರಿ (ತಿಳಿ ನೀಲಿ) ಅಲಂಕಾರ -ಅಂದರೆ ನಿಸರ್ಗದ ಸೌಂದರ್ಯವನ್ನು ಪ್ರತಿಪಾದಿಸುತ್ತದೆ. ಈ ನವ ದಿನಗಳಲ್ಲಿ ಒಂಬತ್ತು ಬಣ್ಣಗಳಿಂದ ದೇವಿಯನ್ನು ಅಲಂಕರಿಸಿ ಪೂಜಿಸುವುದರಿಂದ ಒಳಿತಾಗುತ್ತದೆ.
Related Articles
Advertisement
ಸುವಾಸಿನಿ ಪೂಜೆನವರಾತ್ರಿಯ 9 ದಿನ ಸುವಾಸಿನಿ ಪೂಜೆಯನ್ನು ನೆರವೇರಿಸಲಾಗುತ್ತಿದ್ದು, ಮೊದಲ ದಿನ ಒಬ್ಬ ಮುತ್ತೈದೆ, ಎರಡನೇ ದಿನ ಇಬ್ಬರು, ಮೂರನೇ ದಿನ ಮೂವರು ಮುತ್ತೈದೆಯರು -ಹೀಗೆ 9ನೇ ದಿನದವರೆಗೆ ದಿನಕ್ಕೊಬ್ಬರು ಹೆಚ್ಚಿನ ಮುತ್ತೈದೆಯರು ದೇವಿಗೆ ಪ್ರಿಯವಾದ ಈ ಸುವಾಸಿನಿ ಪೂಜೆಯನ್ನು ಮಾಡುತ್ತಾರೆ. ದುಷ್ಟರನ್ನು ಸಂಹರಿಸಲು ದೇವಿಯು ಒಂಬತ್ತು ರೂಪಗಳಲ್ಲಿ ನವದುರ್ಗೆಯರಾಗಿ ಅವತರಿಸಿದ್ದು, ಅಲ್ಲಿಂದ ಈವರೆಗೂ ನವರಾತ್ರಿ ಉತ್ಸವವನ್ನು ಪರಂಪರಾಗತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ನವರಾತ್ರಿಯ ದಿನಗಳಲ್ಲಿ ದೇವಿಯರನ್ನು ಪೂಜಿಸುವುದರಿಂದ ಸಂತುಷ್ಟಗೊಂಡು ಎಲ್ಲರಿಗೂ ಸನ್ಮಂಗಳವನ್ನು ಉಂಟು ಮಾಡುತ್ತಾಳೆ. ನಂಬಿದವರಿಗೆ ಒಳ್ಳೆಯ ಫಲ ಸಿಗುತ್ತದೆ. ಈ ಸಮಯದಲ್ಲಿ ಚಂಡಿಕಾ ಹೋಮವನ್ನು ಮಾಡುವುದರಿಂದ ಲೋಕ ಕಲ್ಯಾಣವಾಗಿ, ಮನುಷ್ಯ, ಪ್ರಾಣಿ, ಪಕ್ಷಿಗಳ ಸಕಲ ಜೀವರಾಶಿಗಳಿಗೂ ಒಳಿತಾಗುತ್ತದೆ. ಭಕ್ತರಿಗೆ ಸುಖ, ಶಾಂತಿ, ನೆಮ್ಮದಿ, ಧನ – ಕನಕಾದಿಗಳು ಲಭಿಸುತ್ತವೆ.
– ಕೆ. ಮಂಜುನಾಥ ಅಡಿಗರು
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ತಂತ್ರಿಗಳು