Advertisement

ನವರಾತ್ರಿ ಅಲಂಕಾರ್

09:10 PM Sep 29, 2019 | Lakshmi GovindaRaju |

ಒಂಭತ್ತು ದಿನಗಳ ನವರಾತ್ರಿ, ಅದು ಕಳೆಯುತ್ತಿದ್ದಂತೆ ದೀಪಾವಳಿ… ಬಳಿಕ ಕ್ರಿಸ್‌ಮಸ್‌… ನಂತರ ಹೊಸ ವರ್ಷದ ಕೊಡುಗೆ… ಹೀಗೆ ಸಾಲು ಸಾಲು ವಿಶೇಷ ದಿನಗಳು ಬರಲಿವೆ. ಇದರ ಲಾಭ ಪಡೆಯಲು ಆಟೋಮೊಬೈಲ್‌ ಉದ್ಯಮ ಸಜ್ಜಾಗಿದೆ. ನವರಾತ್ರಿ ಸಮಯದಲ್ಲಿ, ಆಟೋಮೊಬೈಲ್‌ ಸಂಸ್ಥೆಗಳು 5 ಕಾರುಗಳ ಬಿಡುಗಡೆಗೆ ಸಿದ್ಧವಾಗಿವೆ.

Advertisement

ಆಟೋ ಇಂಡಸ್ಟ್ರಿ ಪಾಲಿಗೆ ಮುಂದಿನ ಮೂರು ತಿಂಗಳು ಪೂರ್ತಿ ಹಬ್ಬದ ಸಡಗರ. ಹಣಕಾಸು ವರ್ಷವನ್ನು ಏಪ್ರಿಲ್‌ 1ರಿಂದ ಮಾರ್ಚ್‌ ಅಂತ್ಯದವರೆಗೆ ಅಳೆಯುತ್ತೇವಾದರೂ, ಆಟೋಮೊಬೈಲ್‌ ಉದ್ಯಮ, ಡಿಸೆಂಬರ್‌ ಅಂತ್ಯದ ವರ್ಷಾಂತ್ಯವನ್ನೇ ಸಡಗರವಾಗಿ ಆಚರಿಸುತ್ತದೆ. ಅದರಲ್ಲೂ ಈಗ ಒಂಭತ್ತು ದಿನಗಳ ನವರಾತ್ರಿ, ಅದು ಕಳೆಯುತ್ತಿದ್ದಂತೆ ದೀಪಾವಳಿ… ಬಳಿಕ ಕ್ರಿಸ್‌ಮಸ್‌…. ನಂತರ ಹೊಸ ವರ್ಷದ ಕೊಡುಗೆ…

ಹೀಗೆ ಸಾಲು ಸಾಲು ಕೊಡುಗೆಗಳ ಭರಪೂರವೇ ಹರಿದು ಬರುತ್ತದೆ. ದಸರಾ ಹೊತ್ತಿನಲ್ಲೇ ಹಲವಾರು ಕಂಪನಿಗಳು ಹೊಸ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿ ನಡೆಸಿವೆ. ಈಗಾಗಲೇ ಆಗಸ್ಟ್-ಸೆಪ್ಟೆಂಬರ್‌ನಲ್ಲೇ ಕೆಲವೊಂದು ಕಾರುಗಳು ಮಾರುಕಟ್ಟೆಗೆ ಪ್ರವೇಶ ಮಾಡಿದ್ದಾವಾದರೂ, ಅಕ್ಟೋಬರ್‌, ನವೆಂಬರ್‌, ಡಿಸೆಂಬರ್‌ಗೂ ಕೆಲವೊಂದು ಕಾರುಗಳು ಮಾರುಕಟ್ಟೆ ಪ್ರವೇಶಿಸಲಿವೆ.

ಸ್ಕೋಡಾ ಕೋಡಿಯಾಕ್‌ ಸ್ಕೌಟ್‌: ಎಸ್‌ಯುವಿಗಳ ಸಾಲಿನಲ್ಲಿ ನಿಲ್ಲುವ ಈ ಕಾರು ಐಷಾರಾಮಿ ಕಾರುಗಳ ಸಾಲಿಗೆ ಹೊಂದಿಕೊಳ್ಳುತ್ತದೆ. 2 ಲೀಟರ್‌ ಡೀಸೆಲ್‌ ಎಂಜಿನ್‌ ಹೊಂದಿರುವ ಇದು, 1968 ಸಿಸಿ ಸಾಮರ್ಥ್ಯದ ಕಾರು. ದೆಹಲಿಯಲ್ಲೇ ಎಕ್ಸ್ ಶೋ ರೂಂ ದರ 35 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ. ಪ್ರತಿ ಲೀ.ಗೆ 16.25 ಕಿ.ಮೀ. ನೀಡುತ್ತದೆ ಎಂಬುದು ಕಂಪನಿಯ ಹೇಳಿಕೆ.

ಹುಂಡೈ ಎಲಾಂಟ್ರಾ 2019: ಸೆಡಾನ್‌ ಸಾಲಿಗೆ ಸೇರುವ ಈ ಕಾರು, 2018ರಲ್ಲೇ ಬಿಡುಗಡೆಯಾಗಿತ್ತು. ಈಗ 2019ರಲ್ಲಿ ಮತ್ತೆ ಹೊಸ ವಿನ್ಯಾಸ, ಹೊಸ ಫೀಚರ್‌ಗಳ ಜೊತೆಗೆ ಮಾರುಕಟ್ಟೆಗೆ ಪ್ರವೇಶಿಸಲಿದೆ. ಇದರ ದರ 13.82 ಲಕ್ಷ ದಿಂದ 20 ಲಕ್ಷ ರೂ.ಗಳ ವರೆಗೆ ಇರಲಿದೆ. ಈಗಾಗಲೇ ಬುಕ್ಕಿಂಗ್‌ ಓಪನ್‌ ಆಗಿದೆ.

Advertisement

ರಿನಾಲ್ಟ್ ಕ್ವಿಡ್‌ 2019: ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಕಡಿಮೆ ದರದ ಹ್ಯಾಚ್‌ಬ್ಯಾಕ್‌ ಎನ್ನಿಸಿಕೊಂಡಿರುವ ಈ ರಿನಾಲ್ಟ್ ಕ್ವಿಡ್‌ ಕಾರು ಅಕ್ಟೋಬರ್‌ ಮೊದಲ ವಾರದಲ್ಲಿ ಒಂದಷ್ಟು ಪರಿಷ್ಕರಣೆಯೊಂದಿಗೆ ಮತ್ತೆ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ. ಕಾರಿನ ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸವನ್ನು ಇನ್ನಷ್ಟು ಸುಧಾರಿಸಲಾಗಿದೆ. 0.8 ಅಥವಾ 1 ಲೀ. ಪೆಟ್ರೋಲ್‌ ಎಂಜಿನ್‌ ಎಂದಿನಂತೆ ಇರಲಿದ್ದು, ಬಿಎಸ್‌6ಗೆ ಅಪ್‌ಗ್ರೇಡ್‌ ಆಗಿ ಬರುವ ಸಾಧ್ಯತೆ ಇದೆ. ಹಾಗೆಯೇ ರಿನಾಲ್ಟ್ ಕ್ವಿಡ್‌ನ‌ ಎಲೆಕ್ಟ್ರಿಕ್‌ ವರ್ಷನ್‌ ನವೆಂಬರ್‌ 1ರಂದು ಅನಾವರಣಗೊಳ್ಳುವ ಸಾಧ್ಯತೆ ಇದೆ. ಆದರೆ, ಮಾರುಕಟ್ಟೆಗೆ ಪ್ರವೇಶಿಸಲು 2022ರ ತನಕ ಕಾಯಬೇಕು.

ಒಟಿಒ- ಹೊಸ ಮಾದರಿ ಇಎಂಐ: “ಆಗಾಗ ಕಾರು ಬದಲಾವಣೆ ಮಾಡಲೇನೋ ಆಸೆ. ಆದರೆ, ಅಯ್ಯೋ ಇಎಂಐ ಹೆಚ್ಚಾಯ್ತು’ ಎಂದು ಕೊರಗುವವರಿಗೊಂದು ಖುಷಿಯ ವಿಚಾರ ಇದು. ಬೆಂಗಳೂರು ಮೂಲದ ಸ್ಟಾರ್ಟ್‌ ಅಪ್‌ ಕಂಪನಿ ಒಟಿಒ ಕ್ಯಾಪಿಟಲ್, ಕಾರು ಮತ್ತು ಬೈಕುಗಳನ್ನು ಲೀಸ್‌ ಮೇಲೆ ಖರೀದಿಸಲು ಇಎಂಇ ಸೌಲಭ್ಯ ನೀಡಲಿದೆ. ಬ್ಯಾಂಕುಗಳಲ್ಲಿ ಸಿಗುವ ಇಎಂಐಗಳಿಗಿಂತ ಶೇ.30ರಷ್ಟು ಕಡಿಮೆ ಎನ್ನುವುದು ಕಂಪನಿಯ ಭರವಸೆ.

ಈಗಾಗಲೇ ಕಾರುಗಳಿಗೆ ಈ ಸೌಲಭ್ಯ ನೀಡಲಾಗುತ್ತಿದ್ದು, ಇತ್ತೀಚೆಗಷ್ಟೇ ಬೈಕುಗಳಿಗೂ ಇಎಂಐ ಸೌಲಭ್ಯವನ್ನು ವಿಸ್ತರಿಸಿದೆ. ಕಾರುಗಳ ವಿಚಾರದಲ್ಲಿ ಹುಂಡೈ, ಜೀಪ್‌, ಸುಜುಕಿ, ಹೊಂಡಾ, ಟಾಟಾ ಮೋಟಾರ್, ಸ್ಕೋಡಾ ಕಂಪನಿಗಳ ಜತೆಗೆ ಪಾರ್ಟ್‌ನರ್‌ಶಿಪ್‌ ಮಾಡಿಕೊಂಡಿದೆ. 30 ನಿಮಿಷದಲ್ಲಿ ಸಾಲಕ್ಕೆ ಅನುಮೋದನೆ ಸಿಕ್ಕಿ, 24 ಗಂಟೆಗಳಲ್ಲಿ ವಾಹನವನ್ನು ಮನೆಗೆ ಕೊಂಡೊಯ್ಯಬಹುದು ಎಂದು ಕಂಪನಿ ಹೇಳುತ್ತಿದೆ. ಕಾರುಗಳಿಗೆ 5 ವರ್ಷದವರೆಗೆ ಸಾಲ ಸೌಲಭ್ಯ ಸಿಗುತ್ತದೆ. ಬೈಕುಗಳಿಗಾದರೆ 3 ವರ್ಷದವರೆಗೆ ಸಾಲ ಪಡೆಯಬಹುದು.

ಟಾಟಾ ಟಿಯಾಗೋ 2019: ಮಾರುಕಟ್ಟೆ ಪ್ರವೇಶಿಸಿ ಮೂರು ವರ್ಷ ಕಳೆದಿರುವ ಟಾಟಾ ಟಿಯಾಗೋ ಕಾರು, ಇದೇ ನವೆಂಬರ್‌ನಲ್ಲಿ ಮತ್ತಷ್ಟು ಅಪ್ಡೇಟ್‌ಗಳನ್ನು ಹೊತ್ತು ಮಾರುಕಟ್ಟೆಗೆ ಬರಲಿದೆ. ಎಂಜಿನ್‌ ಸಾಮರ್ಥ್ಯ ಹಳತರಷ್ಟೇ ಇದ್ದರೂ, ಕಾರಿನ ಹೊರಾಂಗಣ ಮತ್ತು ಒಳಾಂಗಣ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗುತ್ತಿದೆ. ಡಿಜಿಟಲ್‌ ಟಚ್‌ ಸ್ಕ್ರೀನ್‌, ರಿಮೋಟ್‌ ಕಂಟ್ರೋಲ್‌ ಮಿರರ್‌ ಅಡ್ಜಸ್ಟ್ಮೆಂಟ್‌ ಫೀಚರ್‌ ಬರಲಿದೆ. ಬೆಲೆ 4.5- 6.75 ಲಕ್ಷ ರೂ.ಗಳ ತನಕ ಇರಲಿದೆ.

ಮಾರುತಿ ಎಸ್‌-ಪ್ರಸ್ಸೋ: ಇತ್ತೀಚಿಗಷ್ಟೇ ಈ ಕಾರಿನ ಮಾಡೆಲ್‌ನ ಫೋಟೋ ಬಿಡುಗಡೆಯಾಗಿತ್ತು. ಈ ಕಾರು ಸದ್ಯ ಸೆ.30ಕ್ಕೆ ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ. ಮಾರುತಿ ಕಂಪನಿಯ ಈ ಕಾರು, ಆಲ್ಟೋ ಮತ್ತು ವ್ಯಾಗನಾರ್‌ನ ಸಮ್ಮಿಲನದಂತಿರುತ್ತದೆ ಎಂದು ಹೇಳಲಾಗುತ್ತಿದೆ. ಬೆಲೆ 4 ಲಕ್ಷ ರೂ.ಗಳಿಂದ ಆರಂಭ ವಾಗಲಿದೆ. ಕಾರನ್ನು, ಮಾರುತಿ ಸಂಸ್ಥೆ ತನ್ನ ಅರೆನಾ ಡೀಲರ್‌ ಶಿಪ್‌ ಮೂಲಕ ಮಾರಾಟ ಮಾಡಲಿದೆ.

* ಸೋಮಶೇಖರ ಸಿ. ಜೆ.

Advertisement

Udayavani is now on Telegram. Click here to join our channel and stay updated with the latest news.

Next