Advertisement
ಕೋವಿಡ್ ಮಹಾಮಾರಿಯಿಂದಾಗಿ ಸರಕಾರದ ಆದೇಶ ಹಾಗೂ ಮಾರ್ಗದರ್ಶನದಂತೆ ಈ ವರ್ಷ ನವರಾತ್ರಿ ಉತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲು ಮಂದಿರದ ಆಡಳಿತ ಸಮಿತಿ ನಿರ್ಧರಿಸಿದೆ. ಧಾರ್ಮಿಕ ಕಾರ್ಯಕ್ರಮವಾಗಿ ಪ್ರತೀ ದಿನ ಬೆಳಗ್ಗೆ ನಿತ್ಯ ಪೂಜ ಸೇವೆ, ಮಧ್ಯಾಹ್ನ ಮಹಾಪೂಜೆ, ರಾತ್ರಿ 8ಕ್ಕೆ ಮಹಾಪೂಜೆ, ರಂಗಪೂಜೆ, ಸರ್ವ ಸೇವೆಯೊಂದಿಗೆ ಪ್ರಸಾದ ವಿತರಣೆ ಜರಗಲಿದೆ. ವೈದಿಕ ಕಾರ್ಯಕ್ರಮಗಳು ಶ್ರೀಕ್ಷೇತ್ರದ ತಂತ್ರಿ ವಿದ್ವಾನ್ ರಾಮಚಂದ್ರ ಬಾಯರಿ ಕಾರ್ಕಳ ಅವರ ನೇತೃತ್ವದಲ್ಲಿ, ದೇವಾಲಯದ ಪ್ರಧಾನ ಅರ್ಚಕ ಗುರುಪ್ರಸಾದ್ ವಿ. ಭಟ್ ಸಹಕಾರದೊಂದಿಗೆ ನಡೆಯಲಿದೆ.
Related Articles
Advertisement
ಕಳೆದ 47 ವರ್ಷಗಳಿಂದ ಶ್ರೀಕ್ಷೇತ್ರದಲ್ಲಿ ಅದ್ದೂರಿ ಯಾಗಿ ನಡೆಯುತ್ತಿದ್ದ ನವರಾತ್ರಿ ಉತ್ಸವದಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಿದ್ದಾರೆ. ಕೊರೊನಾ ಮಹಾಮಾರಿಯಿಂದ ಈ ಬಾರಿ ಅನ್ನಸಂತರ್ಪಣೆ ಯನ್ನು ರದ್ದುಗೊಳಿಸಲಾಗಿದೆ. ಚಂಡಿಕಾಯಾಗ ಸಹಿತ ಇನ್ನಿತರ ಪ್ರಮುಖ ಫೂಜೆಗಳನ್ನು ಕೈಬಿಡಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದು :
ಶ್ರೀ ದೇವಿಯ ಸನ್ನಿಧಿಯಲ್ಲಿ ದಿನಪೂರ್ತಿ ಭಜನೆ, ಭರತನಾಟ್ಯ, ಪ್ರವಚನ, ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು, ಗೀತ ಗಾಯನ, ಭಕ್ತಿರಸಮಂಜರಿ, ಯಕ್ಷಗಾನ, ನಾಟಕ ಪ್ರದರ್ಶನಗಳು ನಡೆಯುತ್ತಿದ್ದು, ಈ ಬಾರಿ ಕೊರೊನಾ ಲಾಕ್‌ಡೌನ್ ಮಾರ್ಗಸೂಚಿಗಳಿಂದ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.
ವಿಶೇಷ ಆಕರ್ಷಣೆಯ ದೇವಾಲಯ :
ನವಿಮುಂಬಯಿಯ ಥಾಣೆ ಬೇಲಾಪುರ ಹೆದ್ದಾರಿಯಲ್ಲಿರುವ ಸ್ಟಾಂಡರ್ಡ್ ಅಲ್ಕಾಲಿ ಎಂಬ ಕಂಪೆನಿಯ ಕ್ಯಾಂಟೀನ್ ನೌಕರರಿಂದ ಆರಂಭಗೊಂಡು ಈಗ ಘನ್ಸೋಲಿಯಲ್ಲಿ ತುಳು-ಕನ್ನಡಿಗರ ಆಡಳಿತಕ್ಕೊಳಪಟ್ಟ ಪ್ರಸಿದ್ಧ ಕ್ಷೇತ್ರ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯ. ಇದು 1991ರಲ್ಲಿ ಶ್ರೀ ಸಂತೋಷಿ ಮಾತಾ ದೇವಾಲಯ ಟ್ರಸ್ಟ್ ಎಂಬ ಹೆಸರಿನಲ್ಲಿ ನೋಂದಣಿಯಾಯಿತು. 1985ರಲ್ಲಿ ನವಿಮುಂಬಯಿಯ ಖ್ಯಾತ ಉದ್ಯಮಿ, ಕೊಡುಗೈ ದಾನಿ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ದೇವಾಲಯದ ಅಧ್ಯಕ್ಷತೆ ವಹಿಸಿಕೊಂಡ ಬಳಿಕ ದೇವಾಲಯ ಆಡಳಿತ ಸಮಿತಿಯ ಸಹಕಾರದೊಂದಿಗೆ ಪ್ರಸ್ತುತ ನವಿಮುಂಬಯಿಯಲ್ಲಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿ ಅನ್ಯಭಾಷಿಗ ಭಕ್ತರನ್ನೂ ಕೈಬೀಸಿ ಕರೆಯುತ್ತಿದೆ.
ಊರಿನ ದೇವಾಲಯದ ಮೆರುಗು :
ಸಿಡ್ಕೊàದಿಂದ ದೊರೆತ ಜಾಗದಲ್ಲಿ ಸುಂದರವಾದ ದೇವಸ್ಥಾನ ನಿರ್ಮಿಸಲಾಗಿದ್ದು, ವಾರ್ಷಿಕ ಮಹೋತ್ಸವ ಸಹಿತ ಇನ್ನಿತರ ಉತ್ಸವಗಳು ಊರಿನ ದೇವಾಲಯಗಳ ಶೈಲಿಯಲ್ಲಿ ನಡೆಯುತ್ತವೆ. ಪ್ರವೇಶಿಸಿದಾಗ ಊರಿನ ಪ್ರಸಿದ್ಧ ದೇವಾಲಯಗಳಿಗೆ ಪ್ರವೇಶಿಸಿದ ಅನುಭವವಾಗುವ ಈ ಕ್ಷೇತ್ರದಲ್ಲಿ ನಾಗರ ಪಂಚಮಿ, ಶ್ರೀಕೃಷ್ಣ ಜನ್ಮಾಷ್ಟಮಿ, ನವರಾತ್ರಿ, ಗಣೇಶ ಚತುರ್ಥಿ ಇನ್ನಿತರ ಹಬ್ಬಗಳನ್ನು ವಿಶೇಷವಾಗಿ ಆಚರಿಸಲಾಗುತ್ತದೆ.
ಶೈಕ್ಷಣಿಕ ಸೇವೆ :
ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರವು ಕಾರಣಿಕ ಕ್ಷೇತ್ರವಾಗಿ ಪ್ರಸಿದ್ಧವಾಗಿದ್ದು, ಮುಂಬಯಿ ಸಹಿತ ಇತರ ಉಪನಗರಗಳಿಂದ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಾರೆ. ಕಳೆದ ಹಲವು ವರ್ಷಗಳಿಂದ ಪರಿಸರದ ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ನುರಿತ ಶಿಕ್ಷಕರಿಂದ ಉಚಿತ ಶಿಕ್ಷಣ ನೀಡಲಾಗುತ್ತಿದೆ. ದೇವಾಲಯದ ವತಿಯಿಂದ ಉಚಿತ ಪುಸ್ತಕ, ಶೈಕ್ಷಣಿಕ ನೆರವು, ಪ್ರತಿಭಾ ಪುರಸ್ಕಾರ ಇನ್ನಿತರ ಸಾಮಾಜಿಕ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಪ್ರಸ್ತುತ ಮಂದಿರದಲ್ಲಿ ನೂತನ ಸಭಾಗೃಹದ ನಿರ್ಮಾಣಗೊಳ್ಳುತ್ತಿದೆ. ವರ್ಷಕ್ಕೆ 50ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನಗಳು ಇಲ್ಲಿ ನಡೆಯುತ್ತಿದ್ದು, ಅನ್ನದಾನಕ್ಕೆ ಈ ಕ್ಷೇತ್ರವು ಹೆಸರುವಾಸಿಯಾಗಿದೆ.
ಮಂಡಳಿಯ ಕಾರ್ಯಕಾರಿ ಸಮಿತಿ :
ದೇವಾಲಯದ ಅಧ್ಯಕ್ಷರಾದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರ ಮುಂದಾಳತ್ವದಲ್ಲಿ ಜರಗಲಿರುವ ಈ ಕಾರ್ಯಕ್ರಮಕ್ಕೆ ಉಪಾಧ್ಯಕ್ಷರಾದ ನಂದಿಕೂರು ಜಗದೀಶ್ ಶೆಟ್ಟಿ, ಕೆ. ಎಂ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಎಸ್. ಕೋಟ್ಯಾನ್, ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ ಎಂ. ಶೆಟ್ಟಿ, ಕೋಶಾಧಿಕಾರಿ ಶೇಖರ್ ವಿ. ದೇವಾಡಿಗ, ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ ಪಿ. ಶೆಟ್ಟಿ, ಸದಸ್ಯರಾದ ರಾಘು ಆರ್. ಕೋಟ್ಯಾನ್, ಕುಟ್ಟಿ ಎ. ಕುಂದರ್, ಶಂಕರ್ ಮೊಲಿ, ಸುಧಾಕರ ಸಿ. ಪೂಜಾರಿ, ವಿಶ್ವನಾಥ ಎಸ್. ಶೆಟ್ಟಿ, ಅಣ್ಣು ಎಂ. ಶೆಟ್ಟಿ, ಶ್ರೀಧರ ಬಿ. ಪೂಜಾರಿ, ಮಹಾಬಲ ಟಿ. ಶೆಟ್ಟಿ, ಹರೀಶ್ ಕುರ್ಕಾಲ್, ಹರೀಶ್ ಪಡುಬಿದ್ರೆ, ಶಕುಂತಳಾ ಎಸ್. ಶೆಟ್ಟಿ ಮತ್ತು ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆ, ಉಪಸಮಿತಿಯ ಸದಸ್ಯರು ಹಾಗೂ ಮಹಿಳಾ ಮಂಡಳಿಯ ಸದಸ್ಯೆಯರು ಸಹಕರಿಸಲಿದ್ದಾರೆ.
ಪ್ರಸ್ತುತ ವರ್ಷ ಕೋವಿಡ್ ಸೋಂಕಿನಿಂದಾಗಿ ಸರಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ನವರಾತ್ರಿ ಉತ್ಸವವನ್ನು ಸರಳ ರೀತಿಯಲ್ಲಿ ಆಯೋಜಿಸಲು ನಿರ್ಧರಿಸಿದ್ದೇವೆ. ಭಕ್ತರ ಸಂಖ್ಯೆ ನವರಾತ್ರಿ ಸಂದರ್ಭ ಹೆಚ್ಚಾಗುವುದರಿಂದ ಅನ್ನಸಂತರ್ಪಣೆಯನ್ನು ಕೈಬಿಡಲಾಗಿದೆ. ಸಾಮಾಜಿಕ ಅಂತರದೊಂದಿಗೆ ಇತರ ಮಾರ್ಗಸೂಚಿಗಳನ್ನು ಕಾಯ್ದುಕೊಂಡು ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬಹುದು. ಸೇವಾ ಪೂಜೆಗಳನ್ನು ನೀಡುವ ಭಕ್ತರಿಗೆ ವಿಶೇಷ ಅವಕಾಶ ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೆ, ವಾರ್ಷಿಕ ಯಕ್ಷಗಾನ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ. ದೇವಿಯ ಅನುಗ್ರಹದಿಂದ ಕೋವಿಡ್ಮಹಾಮಾರಿ ಶೀಘ್ರ ತೊಲಗಿ ದೇವಾಲಯವು ಭಕ್ತರಿಗೆ ಮತ್ತೆ ತೆರೆದುಕೊಳ್ಳಲಿದೆ ಎಂಬ ಭರವಸೆ ನಮಗಿದೆ. -ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಅಧ್ಯಕ್ಷರು, ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರ