Advertisement

Navarathri Holiday: ಸರಣಿ ರಜೆ: ಮಲ್ಪೆ ಬೀಚ್‌, ಸೈಂಟ್‌ಮೇರೀಸ್‌ನಲ್ಲಿ ಜನಸಾಗರ

02:08 AM Oct 13, 2024 | Team Udayavani |

ಮಲ್ಪೆ: ನವರಾತ್ರಿ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ, ಇನ್ನೊಂದಡೆ ಸರಕಾರಿ, ಖಾಸಗಿ ಸಂಸ್ಥೆಗೆ ನವಮಿ, ವಿಜಯದಶಮಿ, ಎರಡನೇ ಶನಿವಾರ, ರವಿವಾರ ಸರಣಿ ರಜೆ ಇರುವುದರಿಂದಾಗಿ ಜನರು ಕುಟುಂಬ ಸಮೇತರಾಗಿ ಪ್ರವಾಸ ಕೈಗೊಂಡಿದ್ದು, ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ ಕಂಡು ಬರುತ್ತಿದೆ.

Advertisement

3 ದಿನಗಳಿಂದ ಅಪಾರ ಸಂಖ್ಯೆಯಲ್ಲಿ ಮಲ್ಪೆ ಬೀಚ್‌ ಮತ್ತು ಸೈಂಟ್‌ಮೇರಿಸ್‌ ದ್ವೀಪಕ್ಕೆ ಭೇಟಿ ನೀಡಿದ್ದಾರೆ. ಶುಕ್ರವಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡು ಬಂದಿದ್ದಾರೆ. ಮುಂಜಾನೆ 6 ಗಂಟೆಯಿಂದ ನೂರಾರು ಪ್ರವಾಸಿ ವಾಹನಗಳು ಮಲ್ಪೆ ಕಡೆಗೆ ಆಗಮಿಸುತ್ತಿದ್ದು, ಜನದಟ್ಟಣೆ ಕಂಡು ಬರುತ್ತಿತ್ತು. ಇದರಿಂದಾಗಿ ಪಾರ್ಕಿಂಗ್‌ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಜಾಗದ ಸಮಸ್ಯೆ ಉಂಟಾಗಿತ್ತು. ಮುಖ್ಯ ಬೀಚ್‌ನ ರಸ್ತೆ ಬದಿಗಳಲ್ಲಿ ಅಲ್ಲದೆ, ದಕ್ಷಿಣ ದಿಕ್ಕಿನ ಶಿವಪಂಚಾಕ್ಷರಿ ಭಜನ ಮಂದಿರ ಕಡಲತೀರದ ಇಂಟರ್‌ಲಾಕ್‌ ರಸ್ತೆಯಿಂದ ಹನುಮಾನ್‌ ವಿಠೊಬ ಭಜನ ಮಂದಿರದ ರಸ್ತೆಯ ಎರಡೂ ಕಡೆ ಪಾರ್ಕ್‌ ಮಾಡಲಾಗಿತ್ತು.

ವಸತಿ ಗೃಹಗಳಿಗೆ ಭಾರೀ ಬೇಡಿಕೆ
ಸಾಲು ರಜೆಯ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ಧಾರ್ಮಿಕ ಕೇಂದ್ರ, ಪ್ರವಾಸಿತಾಣಗಳ ನಗರಗಳಲ್ಲಿ ವಸತಿ ಗೃಹಗಳ ಸಮಸ್ಯೆ ಎದುರಾಗಿತ್ತು. ಕೆಲವರು ತಿಂಗಳ ಮೊದಲೇ ಹೋಮ್‌ ಸ್ಟೇ ವಸತಿಗೃಹ, ರೆಸಾರ್ಟ್‌ಗಳಲ್ಲಿ ಕೊಠಡಿಯನ್ನು ಕಾದಿರಿಸಿಕೊಂಡಿದ್ದರೆ, ಕೆಲವರು ರೂಮಿಗಾಗಿ ಪರದಾಡುವ ಸ್ಥಿತಿ ಎದುರಾಗಿತ್ತು.

ಟ್ರಾಫಿಕ್‌ ಜಾಮ್‌
ನಿತ್ಯ ಟ್ರಾಫಿಕ್‌ ಜಾಮ್‌ ಸಮಸ್ಯೆಯನ್ನು ಎದುರಿಸುತ್ತಿರುವ ಮಲ್ಪೆ ರಸ್ತೆಯಲ್ಲಿ ಈಗ ಪ್ರವಾಸಿ ಸಂಚಾರದ ವಾಹನದಿಂದಾಗಿ ವಾಹನ ದಟ್ಟಣೆ ಇನ್ನೂ ಹೆಚ್ಚಾಗಿ ಸಮಸ್ಯೆ ಮತ್ತಷ್ಟು ಉಲ್ಬಣಿಸಿತ್ತು. 3 -4 ದಿನಗಳಿಂದ ಆಗಾಗ ಟ್ರಾಫಿಕ್‌ ಜಾಮ್‌ ಉಂಟಾಗಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.

ಜಿಟಿ ಜಿಟಿ ಮಳೆಗೂ ಪ್ರವಾಸಿಗರ ದಂಡು
ಶನಿವಾರ ಬೆಳಗ್ಗೆ ಇದ್ದ ಬಿಸಿಲಿನೊಂದಿಗಿನ ಶುಭ್ರ ವಾತವಾರಣ ಮಧ್ಯಾಹ್ನ 12ರ ಬಳಿಕ ಮಳೆಗೆ ಪರಿವರ್ತನೆಗೊಂಡಿದೆ. ಸಂಜೆಯ ವರೆಗೂ ನಿರಂತರವಾಗಿ ಜಿಟಿ ಜಿಟಿ ಮಳೆ ಬಂದರೂ ಮಲ್ಪೆ ಬೀಚ್‌ಗೆ ಒಂದೇ ಸವನೆ ಹರಿದು ಬರುತ್ತಿರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ. ಕೆಲವರು ಸುರಿಯುವ ಮಳೆಗೂ ಮರಳ ದಂಡೆಯಲ್ಲಿ ಕುಳಿತು ಸಮುದ್ರದ ಸೌಂದರ್ಯವನ್ನು ವೀಕ್ಷಿಸಿದರೆ, ಬಹುತೇಕ ಮಂದಿ ನೀರಿಗಿಳಿದು ಮೋಜು ಮಸ್ತಿಯಲ್ಲಿ ತೊಡಗಿರುವುದು ಕಂಡು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next