Advertisement

ನವಲಗುಂದ: ಗುಡಿಯೊಳಗಿನ ಕತ್ತಲ ಸಾಗರಕೆ ಬೇಕು ದೀವಿಗೆ

04:11 PM May 16, 2023 | Team Udayavani |

ನವಲಗುಂದ: ಕ್ಷೇತ್ರದಲ್ಲಿ ಚುನಾವಣೆ ಕಾವು ಮುಗಿದಿದ್ದು, ಹಸಿರಾಗುವ ಸಮಸ್ಯೆಗಳತ್ತ ಮುಖ ಮಾಡಬೇಕಿದೆ. ದಶಕಗಳಿಂದ ಜನರು ಅನುಭವಿಸುತ್ತಿರುವ ತೊಂದರೆಗಳಿಗೆ ಇತಿಶ್ರೀ ಹಾಡುವ ಜರೂರತ್ತು ಹೆಚ್ಚಿದೆ. ತಾಲೂಕಿನ ಗುಡಿಸಾಗರ ಗ್ರಾಮ ನೆರೆಹಾವಳಿಗೆ ಒಳಗಾಗಿತ್ತು. ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಲ್ಲಿನವರನ್ನೆಲ್ಲ ಬೇರೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರು.

Advertisement

ಸ್ಥಳಾಂತರಗೊಂಡ ನಿರಾಶ್ರಿತರ ಮನೆಗಳಿಗೆ ವಿದ್ಯುತ್‌ ದೊರೆತರೂ, ಪಕ್ಕಕ್ಕೆ ಹೊಂದಿಕೊಂಡು ಮನೆ ನಿರ್ಮಿಸಿಕೊಂಡ 10-15 ರೈತರ ಕುಟುಂಬಗಳ ಮನೆಗಳಿಗೆ ವಿದ್ಯುತ್‌ ಸಂಪರ್ಕ ದೊರೆತಿಲ್ಲ. ಸರಕಾರದ ನಿಯಮಾವಳಿಗಳಂತೆ ಪರವಾನಗಿ ಪಡೆದು ಮನೆ ಕಟ್ಟಿಕೊಂಡಿದ್ದಾರೆ. ಸರಕಾರದ ವಾಜಪೇಯ ಯೋಜನೆ ಅನುದಾನದಲ್ಲಿಯೂ ಮನೆ ಕಟ್ಟಿಸಿಕೊಂಡವರು ಇದ್ದಾರೆ. ಆದರೆ ಇಂದಿಗೂ ವಿದ್ಯುತ್‌ ಭಾಗ್ಯವಿಲ್ಲ.

ಅಲೆದಾಡಿ ಸುಸ್ತಾದ ಜನ: ನಮ್ಮ ಮನೆಗಳಿಗೆ ವಿದ್ಯುತ್‌ ಇಲ್ಲವೆಂದು ಹೆಸ್ಕಾಂ, ಗ್ರಾಪಂಗೆ ಮನವಿ ನೀಡಿ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದಾರೆ. ಆದರೂ ಹೆಸ್ಕಾಂ ಇಲಾಖೆ ವಿದ್ಯುತ್‌ ಸರಬರಾಜು ಮಾಡಬೇಕೆಂಬ ಅರಿವು ಹೊಂದಿರದೇ ಇರುವುದು
ದುರದುಷ್ಟಕರ ಸಂಗತಿ. ಗುಡಿಸಾಗರ ಗ್ರಾಮದಿಂದ ಸ್ಥಳಾಂತರಕೊಂಡ ಮನೆಗಳಿಗೆ ಹೋಗುವ ರಸ್ತೆಗೆ ಹೊಂದಿಕೊಂಡೇ ಇವರ ಮನೆಗಳಿದ್ದು, ಕತ್ತಲಿನಲ್ಲಿ ಜೀವನ ಮಾಡುತ್ತಿದ್ದಾರೆ. ಈ ಮನೆಗಳಿಗೆ ಗ್ರಾಪಂನಿಂದ ಎಲ್ಲ ಸವಲತ್ತು ನೀಡಿದ್ದಾರೆ ಇತ್ತೀಚೆಗೆ ಜಲಜೀವನ ಮಿಷನ್‌ನಡಿ ನೀರಿನ ಸೌಕರ್ಯವನ್ನು ನೀಡಿದ್ದಾರೆ.ಆದರೆ ಸಂಜೆಯಾದರೆ ಮಾತ್ರ ಮೇಣದ ಬತ್ತಿಯೇ ಆಸರೆಯಾಗಿದೆ.

ನಿರ್ಲಕ್ಷ್ಯಕ್ಕೆ ಆಕ್ರೋಶ: ಗ್ರಾಪಂ ಮುತುವರ್ಜಿ ವಹಿಸಿ ಅಗತ್ಯ ಅನುದಾನದಲ್ಲಿ ವಿದ್ಯುತ್‌ ನೀಡದೆ 7-8 ವರ್ಷಗಳಿಂದ ಅನ್ಯಾಯ ಮಾಡುತ್ತಿದೆ. ಹೆಸ್ಕಾಂ ಇಲಾಖೆಯಲ್ಲಿ ಅನೇಕ ಯೋಜನೆಗಳು ಇದ್ದು, ಅವುಗಳನ್ನು ಬಳಸಿಯೂ ಬೆಳಕು ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದು ಸ್ಥಳೀಯರ ದೂರಾಗಿದೆ.

ಸ್ಥಳೀಯ ಫಲಾನುಭವಿಗಳು ವಿದ್ಯುತ್‌ ಗಾಗಿ ಮನವಿ ನೀಡಿದಾಗ 1.50 ಲಕ್ಷ ರೂ. ಕಟ್ಟಬೇಕೆಂದು ಹೆಸ್ಕಾಂ ಇಲಾಖೆಯವರು ಆದೇಶ
ನೀಡಿದ್ದರು. ಇದರ ಹೊಣೆ ಹೊರಬೇಕಿದ್ದ ಗ್ರಾಮ ಪಂಚಾಯತಿ ಕಣ್ಮುಚ್ಚಿ ಕುಳಿತಿದೆ. ಅವಶ್ಯಕತೆ ನಮಗೆ ಇದೆ ಎಂದು ಸ್ಥಳೀಯ ನಿವಾಸಿಗಳೇ ಸೇರಿ 50 ಸಾವಿರ ರೂ. ಸಂಗ್ರಹಿಸಿ ನೀಡಿ ವರ್ಷ ಕಳೆದರೂ ಇನ್ನೂ ವಿದ್ಯುತ್‌ ಕಂಡಿಲ್ಲ. ಒಂದೆಡೆ ರಾಜ್ಯದಲ್ಲಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆಯೇರಲು ಸಿದ್ಧವಾಗಿರುವ ಕಾಂಗ್ರೆಸ್‌ ಉಚಿತ 200 ಯುನಿಟ್‌ ವಿದ್ಯುತ್‌
ನೀಡುತ್ತೇವೆಂದು ಭರವಸೆ ನೀಡಿದ್ದರೆ, ಇಲ್ಲಿ ಹಣ ಕಟ್ಟಲು ತಯಾರಿದ್ದರೂ ವಿದ್ಯುತ್‌ ನೀಡದಿರುವುದು ವಿಪರ್ಯಾಸವಾಗಿದೆ.

Advertisement

ಅತೀ ಬಡವರು ಇದ್ದೇವ್ರಿ. ವಿದ್ಯುತ್‌ ಇಲ್ಲದ ತಗಡಿನ ಮನೆಯೊಳಗ ವಾಸವಾಗಿದ್ದೇವ್ರಿ. ದಿನನಿತ್ಯ ಕರೆಂಟ್‌ದ ಏನ್‌ ಮಾಡುದು ಅಂತಾ ಚರ್ಚಿಯಾಗೈತ್ರಿ. ನಮ್ಮ ಮನೆಗಳ ಕಡೆಗೆ ವಿದ್ಯುತ್‌ ಕಂಬ ಹಾಕಲಿಕ್ಕಂತ 1.50 ಲಕ್ಷ ಹೆಸ್ಕಾಂ ಇಲಾಖೆಯವರು ಕೇಳಿದಾರ. ಇಲ್ಲಿ ವಾಸ ಇರೋವ್ರು ಸಾಲ ಮಾಡಿ 50 ಸಾವಿರ ಕೊಟ್ಟಿವ್ರಿ. ಆದರೂ ವಿದ್ಯುತ್‌ ಮಾತ್ರ ಬಂದಿಲ್ಲ.
ಶಂಕ್ರಪ್ಪ ಅಂದಾನೆಪ್ಪ ದೊಡಮನಿ,
ಗುಡಿಸಾಗರ ಹೊರವಲಯದ ನಿವಾಸಿ

7-8 ವರ್ಷಗಳಿಂದ ವಾಸ ಇದ್ದೇವೆ. ಗ್ರಾಪಂ, ಹೆಸ್ಕಾಂನವರು ನಮ್ಮ ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ. ರೈತರಾದ ನಾವು ಮಕ್ಕಳನ್ನು ಕಟ್ಟಿಕೊಂಡು ಕತ್ತಲಿನಲ್ಲಿ ಜೀವನ ನಡೆಸುತ್ತಿದೇವೆ. ದಿನನಿತ್ಯ ತುಂಬಾ ಸಮಸ್ಯೆ ಎದುರಿಸುತ್ತಿದ್ದೇವೆ.
ಗುರುನಾಥ ಬಾಗೂರ,
ಗುಡಿಸಾಗರ ಹೊರವಲಯದ ನಿವಾಸಿ

ಪುಂಡಲೀಕ ಮುಧೋಳೆ

Advertisement

Udayavani is now on Telegram. Click here to join our channel and stay updated with the latest news.

Next