Advertisement
ಲಾಕ್‌ಡೌನ್‌ನಿಂದಾಗಿ ಸಮಸ್ಯೆಗೆ ಸಿಲುಕಿದ ಕುಟುಂಬಗಳಿಗೆ ಅಗತ್ಯ ನೆರವು ನೀಡುತ್ತಿರುವುದಲ್ಲದೆ, ಆಹಾರ ಕಿಟ್‌ಗಳ ವಿತರಣೆ, ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಕೈಗೊಳ್ಳಬೇಕಾದ ವಿವಿಧ ಕ್ರಮಗಳ ಬಗ್ಗೆಯೂ ಸ್ವತಃ ಮುತುವರ್ಜಿ ವಹಿಸಿದ್ದಾರೆ.
ಲಾಕ್‌ಡೌನ್‌ನಿಂದಾಗಿ ಕ್ಷೇತ್ರದಲ್ಲಿ ವಿವಿಧ ಕ್ಷೇತ್ರಗಳು ಬಂದ್ ಆಗಿದ್ದರಿಂದ ದುಡಿಮೆ ಇಲ್ಲದೆ ದಿನಗೂಲಿ ಮೇಲೆ ಅವಲಂಬಿತರಾದವರು, ಬಡವರು, ನಿರ್ಗತಿಕರಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ಇನ್ಫೋಸಿಸ್ ಪ್ರತಿಷ್ಠಾನ, ಕ್ಷಮತಾ ಸಂಸ್ಥೆ, ಮಜೇಥಿಯಾ ಫೌಂಡೇಶನ್‌ಗಳಿಂದ ಬಂದ ಆಹಾರ ಧಾನ್ಯಗಳ ಕಿಟ್, ಇನ್ನಿತರ ಸಾಮಗ್ರಿಯನ್ನು ಜನರಿಗೆ ತಲುಪಿಸಿದ್ದು, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರ ಸ್ನೇಹಿತರ ಬಳಗದಿಂದಲೂ ಸಂಕಷ್ಟಕ್ಕೆ ಸಿಲುಕಿದವರಿಗೆ ಆಹಾರ ಧಾನ್ಯಗಳ ಕಿಟ್, ಇನ್ನಿತರ ಸಾಮಗ್ರಿಗಳನ್ನು ಇಂದಿಗೂ ನೀಡಲಾಗುತ್ತಿದೆ. ಜತೆಗೆ ನಗರ, ಗ್ರಾಮೀಣ ಜನರಿಗೆ ಮಾಸ್ಕ್ ಗಳನ್ನು ಸಾಮೂಹಿಕವಾಗಿ ಹಂಚಿಕೆ ಮಾಡಲಾಗಿದೆ.
Related Articles
Advertisement
ಕೋವಿಡ್-19 ಕಾರಣದಿಂದಾಗಿ ಲಾಕ್‌ಡೌನ್‌ನಿಂದ ಕೃಷಿ ಚಟುವಟಿಕೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರದ ರೀತಿಯಲ್ಲಿ ನವಲಗುಂದ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮೀಣ ಜನರ ಸಮಸ್ಯೆಗಳಿಗೆ ಪರಿಹಾರ, ನಿರಂತರ ಸಂಪರ್ಕ, ಗ್ರಾಮ ಪಂಚಾಯತ್‌ಗಳಿಗೆ ಭೇಟಿ, ಸಭೆ, ಜನರೊಂದಿಗೆ ಚರ್ಚೆ, ಕೃಷಿ ಚಟುವಟಿಕೆಗಳಿಗೆ ಪೂರಕ ಕ್ರಮಗಳನ್ನು ಕೈಗೊಂಡಿದ್ದಾರೆ. ರೈತರ ಕೃಷಿ ಉತ್ಪನ್ನಗಳ ಮಾರಾಟ ನಿಟ್ಟಿನಲ್ಲಿ ಕಡಲೆ ಖರೀದಿ ಕೇಂದ್ರಗಳ ಆರಂಭ, ಸುಗಮ ಖರೀದಿ ಪ್ರಕ್ರಿಯೆ ನಿಟ್ಟಿನಲ್ಲೂ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರ ಪರಿಶ್ರಮ ಅಪಾರ.64,149 ಕುಟುಂಬಗಳಿಗೆ ಪಡಿತರ ಹಂಚಿಕೆ
ನವಲಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 64,149 ಕುಟುಂಬಗಳಿಗೆ ಪಡಿತರ ಹಂಚುವ ಕಾರ್ಯ ಮಾಡಲಾಗಿದೆ. ಪಡಿತರದಾರರ ಮನೆ, ಮನೆಗಳಿಗೆ ಮಾಹಿತಿ ನೀಡುವ ಮೂಲಕ ಪಡಿತರ ನೀಡಲಾಗಿದೆ. ಜತೆಗೆ ಸುಮಾರು 26,392 ಮಕ್ಕಳಿಗೆ ಬಿಸಿಯೂಟ ಬದಲು ಆಹಾರ ಧಾನ್ಯ ಕಿಟ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಬಾಣಂತಿಯರು, ಅಂಗನವಾಡಿ ಮಕ್ಕಳಿಗೆ ಅಂದಾಜು 22,973 ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ. ನರೇಗಾದಡಿ ಕೆಲಸ
ನವಲಗುಂದ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದ ಮಂದಿಗೆ ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸ ಸಿಕ್ಕು ಆದಾಯಕ್ಕೆ ಪೂರಕವಾಗಬೇಕು ಎಂಬ ನಿಟ್ಟಿನಲ್ಲಿ ನರೇಗಾದಡಿ ಕೆಲಸ ನೀಡಲಾಗಿದೆ. ಒಬ್ಬರಿಗೆ ದಿನಕ್ಕೆ 275 ರೂ.ಗಳ ಕೂಲಿ ದೊರೆಯುತ್ತಿದ್ದು, ಜನರಿಗೆ ಕೆಲಸದ ಜತೆ ಆದಾಯದಿಂದ ಉತ್ತಮ ಸಹಕಾರಿಯಾಗಿದೆ. ಅಲ್ಲದೆ ಕ್ಷೇತ್ರದಲ್ಲಿ ವಿವಿಧ ಕಡೆ ಕಡಲೆ ಖರೀದಿ ಕೇಂದ್ರ ಆರಂಭಿಸುವ ಮೂಲಕ ಖರೀದಿ ಆರಂಭಿಸಲಾಗಿದ್ದು, ಸುಮಾರು 3,500ಕ್ಕೂ ಹೆಚ್ಚು ರೈತರು ನೋಂದಣಿ ಮಾಡಿಸಿದ್ದಾರೆ. ಈ ಮೊದಲು 10ಕ್ವಿಂಟಲ್ ಕಡಲೆ ಖರೀದಿ ಮಾಡಲಾಗುತ್ತಿತ್ತು. ಇದೀಗ 15 ಕ್ವಿಂಟಲ್‌ವರೆಗೆ ಖರೀದಿ ನಡೆದಿದೆ. ಇನ್ನು ಕಾಟನ್ ಕಾರ್ಪೋರೇಶನ್ 51ಕೋಟಿ ರೂ. ಹತ್ತಿ ಖರೀದಿ ಮಾಡಿದ್ದು, ಉತ್ತಮ ಹತ್ತಿ ನೀಡಿದರೆ ಅದನ್ನು ಖರೀದಿಗೆ ನೋಂದಣಿ ಸಹ ಆರಂಭಿಸಲಾಗಿದೆ.
ದೇಶ-ಜನರ ಹಿತ ಕಾಯುವ ನೆರವಿನ ಸ್ಪಂದನೆ
ಕೋವಿಡ್-19 ಹೊಡೆತಕ್ಕೆ ಸಿಲುಕಿ ದೇಶವೇ ಪರಿತಪಿಸುತ್ತಿದೆ. ಕೃಷಿ, ಉದ್ಯಮ ಸೇರಿದಂತೆ ಬಹುತೇಕ ಕ್ಷೇತ್ರಗಳು ತಲ್ಲಣಕ್ಕೊಳಗಾಗಿವೆ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 20ಲಕ್ಷ ಕೋಟಿ ರೂ.ಗಳ ವಿಶೇಷ ನೆರವು ಘೋಷಿಸಿದ್ದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸುಮಾರು 2,272 ಕೋಟಿ ರೂ.ಗಳ ನೆರವು ಮೂಲಕ ವಿವಿಧ ವಲಯಗಳ ಬಲವರ್ಧನೆಗೆ ಮಹತ್ವದ ನೆರವು ನೀಡಿರುವುದು ಶ್ಲಾಘನೀಯ. ಇಡೀ ವಿಶ್ವವೇ ಸಂಕಷ್ಟದ ಸ್ಥಿತಿ ಎದುರಿಸುತ್ತಿರುವಾಗ ಸ್ವಾವಲಂಬಿ ಭಾರತ ರೂಪನೆ ನಿಟ್ಟಿನಲ್ಲಿ ಮಹತ್ವದ ಚಿಂತನೆಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಜಗತ್ತಿಗೆ ಮಾದರಿಯಾಗುವ ಮಹತ್ವದ ಹೆಜ್ಜೆಗಳನ್ನಿರಿಸುವ ಮೂಲಕ ದೇಶದ ಜನರ ಹಿತ ಕಾಯಲು ಮುಂದಾಗಿದ್ದಾರೆ. ಅದೇ ರೀತಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ರಾಜ್ಯದಲ್ಲಿ ವಿವಿಧ ಸಮುದಾಯಗಳಿಗೆ ಆರ್ಥಿಕ ನೆರವು ಜತೆ, ಮೆಕ್ಕೆಜೋಳ ಬೆಳೆಯುವವರಿಗೆ ತಲಾ 5,000 ರೂ. ಸೇರಿದಂತೆ ಕೃಷಿಕರು, ಅಸಂಘಟಿತ ಕಾರ್ಮಿಕರು, ಕೂಲಿಕಾರರು, ವಿವಿಧ ವೃತ್ತಿಯಲ್ಲಿರುವವರಿಗೆ ನೆರವು ಘೋಷಣೆ, ನೊಂದವರ ಮನದಲ್ಲಿ ಹೊಸ ಆಶಾಭಾವ ಮೂಡಿಸತೊಡಗಿದೆ ಎಂಬುದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರ ಅನಿಸಿಕೆ.
ಪ್ರಧಾನಿ ನರೇಂದ್ರ ಮೋದಿಯವರ ಸಕಾಲಿಕ ಕ್ರಮ
ಪ್ರಧಾನಿ ನರೇಂದ್ರ ಮೋದಿಯವರು ಲಾಕ್‌ಡೌನ್ ಘೋಷಿಸದೇ ಹೋದಲ್ಲಿ ದೇಶದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಮಿತಿ ಮೀರುತ್ತಿತ್ತು. ಆರ್ಥಿಕತೆಯ ಮೇಲೆ ಲಾಕ್‌ಡೌನ್ ಪರಿಣಾಮ ಬೀರಬಹುದು ಎನ್ನುವ ಮಧ್ಯೆಯೂ ದೇಶದ ಜನತೆಯ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಮೊದಲ ಆದ್ಯತೆ ನೀಡಿದರು. ಪರಿಣಾಮ ಅನ್ಯ ದೇಶಗಳಿಗೆ ಹೋಲಿಸಿದಾಗ ಭಾರತದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ತೀರಾ ಕಡಿಮೆ. ಕರ್ನಾಟಕದಲ್ಲಿಯೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಇಚ್ಛಾಶಕ್ತಿ ಹಾಗೂ ಸ್ಪಷ್ಟ ನಿರ್ಧಾರದಿಂದ ಕೋವಿಡ್ ಸೋಂಕಿತರ ಪ್ರಮಾಣ ತೀರಾ ಕಡಿಮೆಯಾಗಿದೆ. ಸೋಂಕಿತರೂ ಬಹುಪಾಲು ಗುಣಮುಖರಾಗಿದ್ದಾರೆ. ನವಲಗುಂದ ಕ್ಷೇತ್ರಕ್ಕೆ ತಬ್ಲಿಘಿಗಳಿಂದ ಆಪತ್ತು ಎದುರಾಗಬಹುದು ಎಂದು ತತ್‌ಕ್ಷಣ ಕಾರ್ಯಪ್ರವೃತ್ತರಾದೆವು. ಹೀಗಾಗಿ ನವಲಗುಂದ ತಾಲೂಕಿನ ಜನತೆಯು ಸುರಕ್ಷಿತವಾಗಿದ್ದಾರೆ ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳುತ್ತಾರೆ. ಇದು ನನ್ನ ಕರ್ತವ್ಯ
ಈ ಹಿಂದೆ ಪ್ರವಾಹ ಸಂದರ್ಭದಲ್ಲಿ ಹಾಗೂ ಇದೀಗ ಕೋವಿಡ್ ಸಂಕಷ್ಟದಲ್ಲಿ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವ, ಸಂಕಷ್ಟದಲ್ಲಿದ್ದವರಿಗೆ ನೆರವು ನೀಡುವುದು ನನ್ನ ಕರ್ತವ್ಯವಾಗಿದೆ. ಆ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಿದ ಆತ್ಮತೃಪ್ತಿಯಂತೂ ಇದೆ. ಕೇವಲ ಮತಕ್ಕಾಗಿ ಕಾರ್ಯನಿರ್ವಹಿಸುವ ಜಾಯಮಾನ ನನ್ನದಲ್ಲ. ಸಂಕಷ್ಟ ಸಂದರ್ಭದಲ್ಲಿ ರಾಜಕಾರಣ ಮರೆತು ನೆರವಿನ ಮಾನವೀಯತೆ ತೋರಬೇಕಾಗಿದೆ ಅದನ್ನು ನಾನು ಪಾಲಿಸುತ್ತಿದ್ದೇನೆ.
– ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ನವಲಗುಂದ ವಿಧಾನಸಭಾ ಕ್ಷೇತ್ರ