Advertisement

ವರ್ಷಗಳೆರಡು ಕಳೆದರೂ ಉದ್ಘಾಟನೆ ಭಾಗ್ಯವಿಲ್ಲ!

03:38 PM Dec 08, 2019 | Naveen |

„ಪುಂಡಲೀಕ ಮುಧೋಳೆ
ನವಲಗುಂದ:
ಹಳೆಯ ಕಟ್ಟಡ ಸದೃಢವಾಗಿದ್ದರೂ ಅದನ್ನು ನೆಲಸಮ ಮಾಡಿ ಪಟ್ಟಣದಲ್ಲಿ 4 ಕೋಟಿ ವೆಚ್ಚದಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಕಾಮಗಾರಿ ಮುಗಿದು ಎರಡು ವರ್ಷ ಮುಗಿದರೂ ಇನ್ನೂ ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ.

Advertisement

ಹೀಗಾಗಿ ವಾಣಿಜ್ಯ ಮಳಿಗೆಗಳಿಂದ ಬರುವ ಆದಾಯವೂ ಖೋತಾ ಆಗಿದೆ. ಬಸ್‌ ನಿಲ್ದಾಣ ಆಗುವವರಿಗೂ ಪ್ರಯಾಣಿಕರ ಪರದಾಟ ಒಂದು ಕಡೆಯಾದರೆ, ಈಗ ಸರಿಯಾದ ಸಮಯಕ್ಕೆ ಬಸ್ಸುಗಳು ಇಲ್ಲದೇ ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆಗೆ ಮುಂದಾಗುತ್ತಿದ್ದಾರೆ. ನಿಲ್ದಾಣದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಕ್ಯಾಮರಾ ಕಣ್ಗಾವಲು ಇಲ್ಲದಂತಾಗಿದೆ. ಇತ್ತೀಚೆಗೆ ವಿದ್ಯುತ್‌ ಬಿಲ್‌ ಬಾಕಿಯಿಂದ ಎರಡು ದಿನ ನಿಲ್ದಾಣಕ್ಕೆ ವಿದ್ಯುತ್‌ ಇಲ್ಲದೇ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ.

ಆದಾಯ ಖೋತಾ: ನಿಲ್ದಾಣದಲ್ಲಿ ನಾಲ್ಕು ವಾಣಿಜ್ಯ ಮಳಿಗೆಗಳು ಇದ್ದು, ತಿಂಗಳಿಗೆ ಅಂದಾಜು 2 ಲಕ್ಷ ರೂ. ಲಾಭ ನೀಡುತ್ತವೆ. ಅಂದರೆ ವರ್ಷಕ್ಕೆ 24 ಲಕ್ಷ. ನಿಲ್ದಾಣ ಎರಡು ವರ್ಷಗಳಿಂದ ಉದ್ಘಾಟನೆಯಾಗದೆ ಇರುವುದರಿಂದ 48 ಲಕ್ಷ ರೂ. ನಷ್ಟವನ್ನು ಸಂಸ್ಥೆ ಹೊರಬೇಕಾಗಿದೆ. ಇನ್ನು ಪಟ್ಟಣದಲ್ಲಿ ಡಿಪೋ ಇರುವುದರಿಂದ ನೂರಾರು ಬಸ್‌ಗಳು ಸಂಚರಿಸುತ್ತವೆ. ಸಾವಿರಾರು ಪ್ರಯಾಣಿಕರು ಹೈಟೆಕ್‌ ಬಸ್‌ ನಿಲ್ದಾಣದ ಮೂಲಕ ಪ್ರಯಾಣಿಸುತ್ತಾರೆ. ಆದರೆ ಇಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯವೇ ಇಲ್ಲದೆ ಜನರು ಪರದಾಡುವಂತಾಗಿದೆ. ಇದ್ದ ಅರವಟಿಗೆಯಲ್ಲಿ ನೀರೇ ಇಲ್ಲ. ಸ್ಥಳಾವಕಾಶ ಇಲ್ಲದ್ದರಿಂದ ಎಲ್ಲೆಂದರಲ್ಲಿ ದ್ವಿಚಕ್ರವಾಹನ, ಆಟೋಗಳ ನಿಲ್ದಾಣವಾಗಿದೆ.

ಸ್ವಚ್ಛತೆ ಮೂರಾಬಟ್ಟೆ: ನೆರೆಹಾವಳಿ ಸಂದರ್ಭದಲ್ಲಿ ಕೆಲವೊಂದು ಗ್ರಾಮಗಳಿಗೆ ಬಸ್‌ ಸಂಚಾರ ಇಲ್ಲದೇ ತೊಂದರೆ ಅನುಭವಿಸಿದ ಕಹಿ ಘಟನೆಗಳು ಇವೆ. ಸಮಯಕ್ಕೆ ಸರಿಯಾಗಿ ಗ್ರಾಮೀಣ ಭಾಗಕ್ಕೆ ಬಸ್‌ ಸಂಚಾರ ಇಲ್ಲದೇ ವಿದ್ಯಾರ್ಥಿಗಳು, ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಸ್ವಚ್ಛ ಭಾರತ್‌ ಎಂಬುದು ನಿಲ್ದಾಣಕ್ಕೆ ಅನ್ವಯಿಸುತ್ತಿಲ್ಲ. ಸ್ವಚ್ಛತೆ ಮೂರಾಬಟ್ಟೆಯಾಗಿದೆ. ಎಲ್ಲೆಂದರಲ್ಲಿ ಉಗುಳುತ್ತಿದ್ದು, ಚರಂಡಿಗಳನ್ನಂತೂ ನೋಡಲಾಗದು. ಶೌಚಾಲಯ ಇದ್ದರೂ, ಟೆಂಡರ್‌ ಇಲ್ಲದೆ ಹೆಚ್ಚಿನ ದರ ಆಕರಿಸುವ ದೂರು ಕೇಳಿಬಂದಿದೆ.

ದೊರೆಯದ ಸ್ಪಂದನೆ: ಸಮಸ್ಯೆಗಳ ಬಗ್ಗೆ ಮಾತನಾಡಲು ಘಟಕ ವ್ಯವಸ್ಥಾಪಕರಾದ ಮಹೇಶ್ವರಿ ಬಿ. ಇದ್ದರೂ ಇಲ್ಲದಂತಾಗಿದ್ದಾರೆ. ಅವರಿಗೆ ಘಟಕದಿಂದ ತಾಲೂಕಿನ ಗ್ರಾಮಗಳಿಗೆ ಬಸ್‌ ಎಲ್ಲೆಲ್ಲಿ ಹೋಗುತ್ತವೆ ಎಂಬುದು ಗೊತ್ತಿಲ್ಲ ಎಂಬುದು ಜನರ ಆರೋಪವಾಗಿದೆ.

Advertisement

ಗ್ರಾಮೀಣ ಬಸ್‌ ಸಂಚಾರದ ಮಾಹಿತಿ, ಹೈಟೆಕ್‌ ಬಸ್‌ ನಿಲ್ದಾಣ ಉದ್ಘಾಟನೆ, ಮೂಲ ಸೌಕರ್ಯಗಳ ಕುರಿತು ಮಾಹಿತಿ ಕೇಳಬೇಕೆಂದು ದೂರವಾಣಿ ಮೂಲಕ ಸಂಪರ್ಕಿಸಿದರೂ ಸಿಗುವುದಿಲ್ಲ. ಇನ್ನು ಡಿಪೋಕ್ಕೆ ಬಂದು ವಿಚಾರಿಸಿದರೆ ಘಟಕ ವ್ಯವಸ್ಥಾಪಕರೂ ಇರುವುದಿಲ್ಲ. ಭದ್ರತಾ ಸಿಬ್ಬಂದಿಗೆ ನಮ್ಮ ಸಮಸ್ಯೆ ಹೇಳಿ ಬರಬಹುದು. ಅವರು ಸಾರ್ವಜನಿಕರ ಸಮಸ್ಯೆಯನ್ನು ಘಟಕ ವ್ಯವಸ್ಥಾಪಕರಿಗೆ ತಿಳಿಸುವಂತಹ ನಿಯಮಾವಳಿ ಪಟ್ಟಣದ ಬಸ್‌ ಡಿಪೋದಲ್ಲಿದೆ!

ಕೊನೆ ಹನಿ: ಸ್ಥಳೀಯ ಶಾಸಕರು ನೂತನ ಬಸ್‌ ನಿಲ್ದಾಣದ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ. ನಿಲ್ದಾಣದ ಉದ್ಘಾಟನೆ ಮಾಡಿ ವಾಣಿಜ್ಯ ಮಳಿಗೆಗಳನ್ನು ಪ್ರಾರಂಭಿಸಿದರೆ ನಿಲ್ದಾಣಕ್ಕೆ ಶೋಭೆ ಬಂದಂತಾಗುತ್ತದೆ.

ಹೈಟೆಕ್‌ ಬಸ್‌ ನಿಲ್ದಾಣ ಕಟ್ಟಡಕ್ಕೇ ಜಾಗೆ ಹೆಚ್ಚಿಗೆ ಹೋಗಿದ್ದರಿಂದ ಬಸ್ಸುಗಳು ನಿಲ್ಲಲು ಜಾಗೆ ಇಲ್ಲದೇ ತೊಂದರೆಯಾಗಿದೆ. ಸ್ವಚ್ಛತೆಯಂತೂ ಇಲ್ಲವೇ ಇಲ್ಲ. ನೀರು ಕುಡಿಯಬೇಕೆಂದರೆ ಬಸ್‌ ನಿಲ್ದಾಣ ಕ್ಯಾಂಟೀನ್‌ ಇಲ್ಲವೇ ಹೊರಗಡೆ ಹೋಟೆಲ್‌ ಆಶ್ರಯ ಪಡೆಯಬೇಕು. ಉದ್ಘಾಟನೆಯಾಗಿದ್ದು ನಾನು ನೋಡಿಯೇ ಇಲ್ಲ.
.ಶಂಕರಗೌಡ ಗೌಡರ,
 ಇಬ್ರಾಹಿಂಪುರ ರೈತ

ಎರಡು ವರ್ಷದಿಂದ ಹೊಸ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಮೂಲ ಸೌಕರ್ಯಕ್ಕೆ ಪರದಾಡುತ್ತಿದ್ದಾರೆ. ಹೋಟೆಲ್‌, ಬುಕ್‌ಸ್ಟಾಲ್‌, ಇತರೆ ಮಳಿಗೆಗಳು ಇಲ್ಲದೇ ಒಂದಿಲ್ಲೊಂದು ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ವಾಕರಸಾ ಸಂಸ್ಥೆಗೂ ನಷ್ಟವಾಗುತ್ತದೆ. ವಿಳಂಬಕ್ಕೆ ಕಾರಣ ಏನೆಂಬುದು ತಿಳಿಯುತ್ತಿಲ್ಲ.
. ಶ್ರೀಶೈಲ ಮುಲಿಮನಿ,
 ಎಪಿಎಂಸಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next