ನವಲಗುಂದ: ಶತಮಾನಗಳಿಂದ ಭಕ್ತರ ಆರಾಧ್ಯ ದೈವವಾಗಿರುವ, ಬೇಡಿ ಬಂದವರ ಅಭಿಷ್ಟಗಳನ್ನು ಈಡೇರಿಸುತ್ತ ಸಂಕಷ್ಟ ಬರದಂತೆ ರಕ್ಷಿಸುತ್ತಿರುವ ಪಟ್ಟಣದ ಗ್ರಾಮದೇವಿಯರಾದ ದುರ್ಗವ್ವ ಹಾಗೂ ದ್ಯಾಮವ್ವ ದೇವಿಯರ ಜಾತ್ರಾ ಮಹೋತ್ಸವ 13
ವರ್ಷಗಳ ನಂತರ ನಡೆಯುತ್ತಿದೆ. ಮೇ 25ರಂದು ಗ್ರಾಮದಲ್ಲಿ ಮೆರವಣಿಗೆ ನಡೆದು ಚಾವಡಿಯಲ್ಲಿ ದೇವಿಯರ ಪ್ರತಿಷ್ಠಾಪನೆಯಾಗಲಿದ್ದು, 29ರ ವರೆಗೆ ವಿವಿಧ ವಿಧಿ-ವಿಧಾನಗಳು ಜರುಗಲಿವೆ.
1955-57ರ ಅವಧಿಯಲ್ಲಿ ಈಗಿರುವ ಗ್ರಾಮದೇವತೆಯರ ದೇವಸ್ಥಾನ ಕಟ್ಟಲಾಗಿದೆ. 1957ರಲ್ಲಿ ಗ್ರಾಮದೇವತೆಯ ಜಾತ್ರೆ ನಡೆದ
ಬಗ್ಗೆ, ವಿಧಿ-ವಿಧಾನ, ಪದ್ಧತಿಯ ಬಗ್ಗೆ ಸಮಗ್ರ ದಾಖಲಾತಿಗಳು ಲಭ್ಯವಿವೆ. ನಂತರ 1972ರಲ್ಲಿ ನಡೆಯಬೇಕಿದ್ದ ಜಾತ್ರೆ ಆಗಲಿಲ್ಲ. 1999ರಲ್ಲಿ ಜಾತ್ರೆಯನ್ನು ನಡೆಸಿದ್ದು, ಆ ವೇಳೆ ಲಿಖಿತವಾಗಿ ನಗರದ ಗ್ರಾಮದೇವತೆಯ ಜಾತ್ರೆಯನ್ನು 11 ವರ್ಷಕ್ಕೊಮ್ಮೆ ಮಾಡಬೇಕೆಂದು ದಾಖಲಿಸಿದ್ದಾರೆ. ಬಳಿಕ 2010ರಲ್ಲಿ ಜಾತ್ರೆ ನಡೆದಿದ್ದು, 2021ರಲ್ಲಿ ಮತ್ತೆ ಜಾತ್ರೆ ನಡೆಯಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಜಾತ್ರೆ ಮುಂದೂಡಲ್ಪಟ್ಟು ಇದೀಗ 13 ವರ್ಷಗಳ ನಂತರ ಮುಹೂರ್ತ ಕೂಡಿಬಂದಿದೆ.ಜಾತ್ರಾ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆದಿದೆ. ಇನ್ನೂ, 2034ರಲ್ಲಿ ಮುಂದಿನ ಜಾತ್ರೆ ನಡೆಸುವ ಬಗ್ಗೆ ಬರೆದಿಡಲಾಗಿದೆ.
ಇತಿಹಾಸದ ಪುಟಗಳಲ್ಲಿ: ಪಟ್ಟಣದ ಗ್ರಾಮದೇವತೆಯರ ಆರಾಧನೆ ಶತ ಶತಮಾನಗಳ ಇತಿಹಾಸ ಹೊಂದಿದೆ. ಕ್ರಿಶ 980ರ ವೇಳೆಗೆ ಇಲ್ಲಿ ಚಾಲುಕ್ಯರ ಆಳ್ವಿಕೆ ಇತ್ತು. ಅವರ ಆಳ್ವಿಕೆ ಕಾಲದಿಂದಲೇ ಗ್ರಾಮದೇವತೆಯರ ಪೂಜಾ ವಿಧಿ-ವಿಧಾನಗಳು ನಡೆದುಕೊಂಡು ಬಂದಿವೆ.
1302ರಿಂದ 1564ರವರೆಗೆ ಕೂಕಟನೂರ ಸಂಸ್ಥಾನದ ಆಳ್ವಿಕೆಗೆ ಒಳಪಟ್ಟಿತ್ತು. 1565ರಿಂದ ನವಲಗುಂದ ಶಿರಸಂಗಿ ಸಂಸ್ಥಾನಕ್ಕೆ ಸೇರಿದ್ದು, 1794ರಲ್ಲಿ ಗ್ರಾಮಕ್ಕೆ ಪ್ಲೇಗ್ ವಕ್ಕರಿಸಿತ್ತು. ಗ್ರಾಮದ ಒಳ್ಳೆಯದಕ್ಕಾಗಿ, ಮಾನವ ಹಿತಕ್ಕಾಗಿ 14ನೇ ಶಿರಸಂಗಿ ಚಾಯಗೊಂಡರು ಪಟ್ಟಣದ ವಿವಿಧೆಡೆ ಗ್ರಾಮದೇವತೆಯರನ್ನು ಪ್ರತಿಷ್ಠಾಪಿಸಿದರು.
Related Articles
ಅಂದಿನ ಕಾಲದಲ್ಲಿ ಸದರ (ಚಾವಡಿ) ನ್ಯಾಯದೇಗುಲಗಳಾಗಿದ್ದವು. ಶಿರಸಂಗಿ ಚಾಯಗೊಂಡರ ಅನುಪಸ್ಥಿತಿಯಲ್ಲಿ
ದೇಸಾಯಿಯರು, ಸುಬೇದಾರರು, ಗೌಡರು ಚಾವಡಿ ಹಿರಿಯರಾಗಿ ನ್ಯಾಯ ನೀಡುತ್ತಿದ್ದರು. ವಿಧಿ-ವಿಧಾನದಂತೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಧರ್ಮವನ್ನು ಕಾಪಾಡುವ ನಿಟ್ಟಿನಲ್ಲಿ ಚಾವಡಿ ನಾಯಕರಿಗೆ ಬಿಚುಗತ್ತಿ, ದಿವಟಗಿ, ಬಡಿಗ, ಕತ್ತಿ ವರಸೆ 27 ವಾಲೀಕಾರರನ್ನು ನೇಮಕ ಮಾಡಲಾಯಿತು. ಅವರಿಗೆ ವಿಧಿ-ವಿಧಾನಗಳನ್ನು ಪಾಲನೆ ಮಾಡುವ ಹೊಣೆ ನೀಡಲಾಯಿತು.
ಇಂದಿಗೂ ಅವರು ಜಾತ್ರಾ ಸಂದರ್ಭದಲ್ಲಿ ತಮಗೆ ನಿಗದಿಗೊಳಿಸಿದ ಸೇವೆ ಸಲ್ಲಿಸುತ್ತಿದ್ದಾರೆ.
ಶಿಲೆ ಬದಲು ಕಾಷ್ಠ ಮೂರ್ತಿಗಳು: ಎಲ್ಲ ಮೂರ್ತಿಗಳು ಶಿಲೆಗಳಿಂದ ನಿರ್ಮಾಣವಾದರೆ ಊರಿನ ಗ್ರಾಮದೇವತೆಯರ ಮೂರ್ತಿಗಳು ಕಟ್ಟಿಗೆ (ಕಾಷ್ಠ)ಯದ್ದಾಗಿವೆ. ದೇವತೆಗಳ ಬಣ್ಣ ಸವಕಳಿ ಸರಿಪಡಿಸಿ ಗ್ರಾಮದ ಒಳಿತಿಗೆ ಪುನಃ ಕಾಂತಿ ಬರಲು, ಪುನಶ್ಚೇತನವಾಗಲು 11 ವರ್ಷಕ್ಕೊಮ್ಮೆ ಗ್ರಾಮದೇವತೆಯರ ಜಾತ್ರೆ ಮಾಡಿಕೊಂಡು ಬರಲಾಗುತ್ತಿದೆ. ಗ್ರಾಮದೇವತೆಯರ ತವರು ಗ್ರಾಮ ತಾಲೂಕಿನ ಇಬ್ರಾಹಿಂಪುರವಾಗಿದೆ. ಮೇ 25ರಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳದೊಂದಿಗೆ ನೂತನ ಮೂರ್ತಿಗಳ ಮೆರವಣಿಗೆ ನಡೆದು ಸದರ (ಚಾವಡಿ)ದಲ್ಲಿ ಪ್ರತಿಷ್ಠಾಪನೆಯಾಗಲಿವೆ. ಮೇ 29ರ ವರೆಗೆ
ವಿವಿಧ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆಯಲಿವೆ.
ಇತಿಹಾಸದಿಂದ ನಡೆದುಬಂದಂತೆ ವಿಧಿ-ವಿಧಾನಗಳನ್ನು ಪಾಲಿಸುತ್ತ ಜಾತ್ರೆ ಮಾಡುತ್ತಿದ್ದೇವೆ. ಮುಂದಿನ ಪೀಳಿಗೆಯೂ ಇವುಗಳನ್ನು ಅರಿತು ಜಾತ್ರಾ ಪದ್ಧತಿಗಳನ್ನು ರೂಢಿಸಿಕೊಂಡು ಧರ್ಮದ ಒಳಿತಿಗಾಗಿ ಸಂಪ್ರದಾಯಗಳನ್ನು ಮುಂದುವರಿಸಬೇಕು. ಧಾರ್ಮಿಕ ವಿಧಾನಗಳ ಬಗ್ಗೆ ನಿರ್ಲಕ್ಷ್ಯ ತೋರಬಾರದು ಎಂಬುದು ಹಿರಿಯರ ಸದಾಶಯವಾಗಿದೆ.
*ಪುಂಡಲೀಕ ಮುಧೋಳ