ಕಾರವಾರ: ದೇಶದ ಅತೀ ದೊಡ್ಡ ಸಮರ ನೌಕೆ ಐಎನ್ ಎಸ್ ವಿಕ್ರಮಾದಿತ್ಯ ಕಾರವಾರದ ನೌಕಾನೆಲೆಗೆ ಶುಕ್ರವಾರ ಬೆಳಗ್ಗೆ ಆಗಮಿಸಿದ್ದ ವೇಳೆ ಒಂದು ಭಾಗದಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದ್ದು, ಈ ಸಂದರ್ಭದಲ್ಲಿ ಬೆಂಕಿ ನಂದಿಸಲು ಯತ್ನಿಸಿದ್ದ ನೌಕಾಪಡೆ ಅಧಿಕಾರಿ ಲೆಫ್ಟಿನೆಂಟ್ ಕಮಾಂಡರ್ ಡಿಎಸ್ ಚೌಹಾಣ್ ಸಾವಿಗೀಡಾಗಿದ್ದಾರೆ ಎಂದು ನೌಕಾಪಡೆ ಪ್ರಕಟಣೆ ತಿಳಿಸಿದೆ.
ವಿಕ್ರಮಾದಿತ್ಯ ಯುದ್ಧ ನೌಕೆಯ ಕಂಪಾರ್ಟ್ ಮೆಂಟ್ ನೊಳಗೆ ಹೊತ್ತಿಕೊಂಡ ಬೆಂಕಿಯನ್ನು ನಂದಿಸುತ್ತಿದ್ದ ವೇಳೆ ಹೊಗೆ ತುಂಬಿಕೊಂಡ ಪರಿಣಾಮ ಕಮಾಂಡರ್ ಚೌಹಾಣ್ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕೂಡಲೇ ಅವರನ್ನು ಕಾರವಾರದ ವಾಯುನೆಲೆಯಲ್ಲಿರುವ ಪತಂಜಲಿ ಆಸ್ಪತ್ರೆಗೆ ದಾಖಲಿಸಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿರುವುದಾಗಿ ಪ್ರಕಟಣೆಯಲ್ಲಿ ಹೇಳಿದೆ.
ಐಎನ್ ಎಸ್ ಯುದ್ಧ ನೌಕೆಯ ಇತರ ಸಿಬ್ಬಂದಿಗಳು ಕಾರ್ಯಾಚರಿಸುವ ಮೂಲಕ ಬೆಂಕಿಯನ್ನು ನಂದಿಸಿದ್ದು, ಇದರಿಂದಾಗಿ ಹೆಚ್ಚಿನ ನಷ್ಟವಾಗದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದು ತಿಳಿಸಿದೆ. ಅಗ್ನಿ ಅವಘಡದ ಬಗ್ಗೆ ತನಿಖೆ ನಡೆಸಲು ಆದೇಶ ನೀಡಲಾಗಿದೆ ಎಂದು ನೌಕಾಪಡೆ ಪ್ರಕಟಣೆ ವಿವರಿಸಿದೆ.
ಐಎನ್ ಎಸ್ ವಿಕ್ರಮಾದಿತ್ಯ ದೇಶದ ಅತೀ ದೊಡ್ಡ ಯುದ್ಧ ನೌಕೆಯಾಗಿದೆ. ಇದು 284 ಮೀಟರ್ ಉದ್ದವಿದ್ದು, 60 ಮೀಟರ್ ಎತ್ತರವಿದೆ. ಈ ಎತ್ತರ ಸುಮಾರು 20 ಮಹಡಿ ಕಟ್ಟಡಕ್ಕೆ ಸಮಾನಾಂತರವಾಗಿದೆ. ನೌಕೆಯ ಒಟ್ಟು ತೂಕ 40 ಸಾವಿರ ಟನ್ ಗಳಷ್ಟು. ಇದು ಭಾರತದ ನೌಕಾಪಡೆಯ ಅತೀ ದೊಡ್ಡ ಹಾಗೂ ಅತೀ ಭಾರದ ಯುದ್ಧ ನೌಕೆಯಾಗಿದೆ.