Advertisement

ಮುಗ್ಗರಿಸಿದ “ನವ’ಮಾಜಿ ಮುಖ್ಯಮಂತ್ರಿಗಳು

01:14 AM May 25, 2019 | Sriram |

ಚುನಾವಣಾ ಫ‌ಲಿತಾಂಶದ ನಂತರ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಿರುವುದು ಒಂದೆಡೆಯಾದರೆ, ಪಕ್ಷದ ಘಟಾನುಘಟಿ ನಾಯಕರ ಸೋಲು ಪಕ್ಷವನ್ನು ಮತ್ತಷ್ಟು ಅವಮಾನಕ್ಕೆ ನೂಕಿದೆ. ಒಂದು ಕಾಲದಲ್ಲಿ ಮುಖ್ಯಮಂತ್ರಿಗಳಾಗಿ ಮೆರೆದಿದ್ದ ಕಾಂಗ್ರೆಸ್‌ನ ಒಂಭತ್ತು ಮಂದಿ ನಾಯಕರು ಈ ಬಾರಿಯ ಚುನಾವಣೆಯಲ್ಲಿ ಮುಗ್ಗರಿಸಿ ಬಿದ್ದಿದ್ದಾರೆ.

Advertisement

ಶೀಲಾ ದೀಕ್ಷಿತ್‌
ಹದಿನೈದು ವರ್ಷಗಳ ಕಾಲ ದೆಹಲಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್‌, ಈ ಬಾರಿ ಬಿಜೆಪಿಯ ಮನೋಜ್‌ ತಿವಾರಿ ಎದುರು ಸೋಲು ಕಂಡಿದ್ದಾರೆ.1984-1989ರವರೆಗೆ ಉತ್ತರಪ್ರದೇಶದ ಕನೌಜ್‌ನಿಂದ ಸಂಸದೆಯಾಗಿ ಆಯ್ಕೆಯಾಗಿದ್ದ ದೀಕ್ಷಿತ್‌, ಕೇಂದ್ರ ಸಚಿವೆಯೂ ಆಗಿದ್ದವರು. ಇಷ್ಟೆಲ್ಲಾ ವರ್ಷಗಳ ರಾಜಕೀಯ ಅನುಭವ ಹೊಂದಿರುವ ಹಿರಿಯ ನಾಯಕಿಯ ಸೋಲು ಕಾಂಗ್ರೆಸ್‌ಗೆ ಆಘಾತವಾಗಿದೆ.

ದಿಗ್ವಿಜಯ ಸಿಂಗ್‌
ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ಸೋಲು, ಕಾಂಗ್ರೆಸ್‌ಗಾದ ಭಾರೀ ಹಿನ್ನಡೆ ಎನ್ನಬಹುದು. ಬಿಜೆಪಿಯ ಪಜ್ಞಾ ಸಿಂಗ್‌ ಅವರು ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಭೋಪಾಲ್‌ನಲ್ಲಿ ಗೆಲುವು ಸಾಧಿಸಿದ್ದಾರೆ.

ವೀರಪ್ಪ ಮೊಯ್ಲಿ
ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ ವೀರಪ್ಪ ಮೊಯ್ಲಿಯವರನ್ನು ಬಿಜೆಪಿಯ ಬಚ್ಚೇಗೌಡ 5.63 ಲಕ್ಷ ಮತಗಳ ಭಾರೀ ಅಂತರದಿಂದ ಸೋಲಿಸಿದ್ದಾರೆ.1974-77ರವರೆಗೆ ಮೊಯ್ಲಿ, ಸಣ್ಣ ಕೈಗಾರಿಕಾ ಸಚಿವರಾಗಿದ್ದರು.

ಮುಕುಲ್‌ ಸಂಗ್ಮಾ
ಮೇಘಾಲಯದ ಮಾಜಿ ಮುಖ್ಯಮಂತ್ರಿ ಮುಕುಲ್‌ ಸಂಗ್ಮಾ, ಸುಮಾರು 64 ಸಾವಿರಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಅವರ ಎದುರಾಳಿಯಾಗಿ, ನ್ಯಾಷನಲ್‌ ಪೀಪಲ್ಸ್‌ ಪಾರ್ಟಿಯ ಅಗತ ಸಂಗ್ಮಾ ಸ್ಪರ್ಧಿಸಿದ್ದರು.

Advertisement

ಹರೀಶ್‌ ರಾವತ್‌
ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್‌ ರಾವತ್‌, ನೈನಿತಾಲ್‌ನ ಉಧಂಸಿಂಗ್‌ ನಗರ ಕ್ಷೇತ್ರದಲ್ಲಿ ಬಿಜೆಪಿಯ ಅಜಯ್‌ ಭಟ್‌ರಿಂದ ಪರಾಭವಗೊಂಡಿದ್ದಾರೆ. ಐದು ಅವಧಿಗಳಲ್ಲಿ ಎಂಪಿ ಆಗಿ ಆಯ್ಕೆಯಾಗಿದ್ದ ಕಾಂಗ್ರೆಸ್‌ ನಾಯಕನ ಸೋಲು, ಕಾಂಗ್ರೆಸ್‌ಗೆ ದೊಡ್ಡ ಶಾಕ್‌.

ಭೂಪೀಂದರ್‌ ಸಿಂಗ್‌ ಹೂಡಾ
ಸೋನಿಯಾಪಥ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪೀಂದರ್‌ ಸಿಂಗ್‌ ಹೂಡಾ, 15 ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. 2005-14ರವರೆಗೆ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಭೂಪೀಂದರ್‌, 14 ವರ್ಷಗಳ ನಂತರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.ಅವರ ಎದುರಾಳಿ ಬಿಜೆಪಿಯ ರಮೇಶ್‌ ಚಂದರ್‌ ಕೌಶಿಕ್‌ ಕಣದಲ್ಲಿದ್ದರು.

ಅಶೋಕ್‌ ಚವಾಣ್‌
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್‌ ಚವಾಣ್‌, ಬಿಜೆಪಿಯ ಪ್ರತಾಪ್‌ ಚಿಖೀಲ್ಕರ್‌ ಎದುರು 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲೊಪ್ಪಿಕೊಂಡಿದ್ದಾರೆ. ವಿಲಾಸ್‌ರಾವ್‌ ದೇಶಮುಖ್‌ ಮಂತ್ರಿ ಮಂಡಲದಲ್ಲಿ ಚವಾಣ್‌ ಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ನಬಮ್‌ ಟುಕಿ
ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ನಬಮ್‌ ಟುಕಿ ಅವರು,
ಕೇಂದ್ರ ಸಚಿವ ಕಿರಣ್‌ ರಿಜಿಜು ಅವರ ಮುಂದೆ ಸೋಲೊಪ್ಪಿಕೊಂಡಿದ್ದಾರೆ.

ಸುಶೀಲ್‌ ಕುಮಾರ್‌ ಶಿಂಧೆ
ಮನಮೋಹನ್‌ಸಿಂಗ್‌ ಸಂಪುಟದಲ್ಲಿ ಆಂತರಿಕ ವ್ಯವಹಾರಗಳ ಸಚಿವರಾಗಿದ್ದ, ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನವನ್ನೂ ಅಲಂಕರಿಸಿದ್ದ ಹಿರಿಯ ನಾಯಕ ಸುಶೀಲ್‌ ಕುಮಾರ್‌ ಶಿಂಧೆಯವರನ್ನು ಬಿಜೆಪಿಯ ಸಿದೆಟಛೀಶ್ವರಶಿವಾಚಾರ್ಯ ಮಹಾಸ್ವಾಮೀಜಿ ಮಣ್ಣು ಮುಕ್ಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next