ಕುಶಿನಗರ : ಮಾನವ ಕಾವಲು ಇಲ್ಲದ ರೈಲ್ವೇ ಕ್ರಾಸಿಂಗ್‌ನಲ್ಲಿ ಧಾವಿಸಿ ಬರುತ್ತಿದ್ದ ರೈಲಿಗೆ ಶಾಲಾ ವ್ಯಾನ್ ಢಿಕ್ಕಿ ಹೊಡೆದು 13 ಮಕ್ಕಳ ಸಾವಿಗೆ ಕಾರಣವಾದ ಭೀಕರ ದುರಂತದ ತಾಣಕ್ಕೆ ತೆರಳಿ ಸಂತ್ರಸ್ತರಿಗೆ ಸಾಂತ್ವನ ಹೇಳಲು ಹೋಗಿದ್ದಾಗ ಪ್ರತಿಭಟನಕಾರರಿಂದ ಮಾರ್ಗತಡೆ ಪ್ರತಿಭಟನೆಯನ್ನು ಎದುರಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಿಟ್ಟಿನ ಭರದಲ್ಲಿ ಮೆಗಾಫೋನ್ ಕೈಗೆತ್ತಿಕೊಂಡು “ನಾರೇ ಬಾಜೀ ಬಂದ್ ಕರೋ, ನೌಟಂಕಿ ಬಂದ್ ಕರೋ (ಘೋಷಣೆ ಕೂಗುವುದನ್ನು ನಿಲ್ಲಿಸಿ, ನಾಟಕ ಮಾಡುವುದನ್ನು ನಿಲ್ಲಿಸಿ)’ ಎಂದು ಗುಡುಗಿದುದು ಹಲವರ ಹುಬ್ಬೇರಿಸಿದೆ; ಅನೇಕರ ಸಿಟ್ಟಿಗೆ ಕಾರಣವಾಗಿದೆ.
“ನಾನಿಲ್ಲಿ ಬಂದಿರೋದು ಸಂತ್ರಸ್ತರಿಗೆ ಸಾಂತ್ವನ ಹೇಳಲು, ನೆರವಾಗಲು; ನೀವು ನನ್ನನ್ನು ಈ ರೀತಿ ತಡೆಯಲು ಸಾಧ್ಯವಿಲ್ಲ’ ಎಂದು ಸಿಎಂ ಯೋಗಿ ಹೇಳಿದ ಹೊರತಾಗಿಯೂ ಬಗ್ಗದ ಪ್ರತಿಭಟನಕಾರರು ರೈಲು ಹಳಿಯಲ್ಲಿ ಕುಳಿತು ಘೋಷಣೆ ಕೂಗಿ ಪ್ರತಿಭಟನೆ ಮುಂದುವರಿಸಿದರು.
ಈ ರೀತಿಯ ದುರ್ಘಟನೆ ಭವಿಷ್ಯದಲ್ಲಿ ಪುನರಪಿ ನಡೆಯದಂತೆ ಮಾಡಲು ರೈಲ್ವೇ ಸಿಬಂದಿಗಳನ್ನು ಈ ಮಾನವ ಕಾವಲು ಇಲ್ಲದ ಕ್ರಾಸಿಂಗ್‌ಗೆ ಕರ್ತವ್ಯಕ್ಕೆ ನಿಯೋಜಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಸಿಎಂ ಯೋಗಿ ಅವರಿಗೆ ಪ್ರತಿಭಟನೆ ತೋರಿದ ಎಸ್‌ಪಿ ಮತ್ತು ಬಿಎಸ್‌ಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ, “ಇಂತಹ ಕಾರುಣ್ಯಮಯ ವಿಷಯವನ್ನು ಅನಗತ್ಯವಾಗಿ ರಾಜಕೀಯ ಮಾಡಬೇಡಿ’ ಎಂದು ಸಿಎಂ ಆಕ್ರೋಶಭರಿತರಾಗಿಯೇ ಹೇಳಿದರು.
ಸಿಎಂ ಯೋಗಿ ಅವರು ತಮ್ಮ ಆಕ್ರೋಶದ ಮಾತಿಗೆ ಎಲ್ಲೆಡೆಯಿಂದ ಖಂಡನೆ, ಟೀಕೆ, ಪ್ರತಿಭಟನೆ ಎದುರಿಸುತ್ತಿರುವುದನ್ನು ಕಂಡು ಬಿಜೆಪಿ ನಾಯಕ ಹಾಗೂ ಯುಪಿ ಸಚಿವ ಶ್ರೀಕಾಂತ ಶರ್ಮಾ ಅವರು “ಬಿಎಸ್‌ಪಿ, ಎಸ್‌ಪಿ ಈ ರೀತಿಯ ಕುತ್ಸಿತ ರಾಜಕಾರಣ ಮಾಡುವುದು ಸರಿಯಲ್ಲ; ಸಿಎಂ ಇಲ್ಲಿಗೆ ಬಂದಿರೋದು ಸಂತ್ರಸ್ತರಿಗೆ ನೆರವಾಗಿ ಸಾಂತ್ವನ ಹೇಳಲು ಎಂಬುದನ್ನು ಅವರು ತಿಳಿದಿರಬೇಕು’ ಎಂದು ಹೇಳಿದರು.
ರೈಲಿಗೆ ಶಾಲಾ ವಾಹನ ಢಿಕ್ಕಿ ಹೊಡೆಯುವ ವೇಳೆ ಅದರ ಚಾಲಕನ ತನ್ನ ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡಿದ್ದ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಪೊಲೀಸರು ವ್ಯಾನ್ ಚಾಲಕ, ಶಾಲೆಯ ಪ್ರಾಂಶುಪಾಲ, ಆಡಳಿತ ವರ್ಗದ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.