ಕಿಟ್ಟಿ ಯಾವತ್ತೂ ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಈ ಕಾರಣಕ್ಕೇ ಅವನು ಒಂದಲ್ಲ ಒಂದು ಪಜೀತಿಗೆ ಸಿಕ್ಕಿ ಹಾಕಿಕೊಳ್ಳುತ್ತಲೇ ಇರುತ್ತಿದ್ದ.
“ಕಿಟ್ಟಿ… ಬೇಗ ಹಾಲನ್ನು ಕುಡಿದುಬಿಡು. ಅಲ್ಲಿ ಇಲ್ಲಿ ಲೋಟ ಇಡಬೇಡ. ಆಮೇಲೆ ಕೈ ತಾಗಿಸಿ ಬೀಳಿಸಿ ಬಿಡ್ತೀಯಾ… ಜೋಪಾನ’ ಎಂದು ಅಮ್ಮ ಕಿಟ್ಟಿಯನ್ನು ಎಚ್ಚರಿಸುತ್ತಿದ್ದರು. ಅಷ್ಟರಲ್ಲೇ ಕಿಟ್ಟಿ ಕೈ ತಾಗಿ ಹಾಲು ಸೋಫಾದ ಕುಷನ್ ಮೇಲೆ ಬಿದ್ದು ಬಿಟ್ಟಿತು. ಕಿಟ್ಟಿಯ ಅಮ್ಮ ಹಿಂದೆ ಒಂದು ಹತ್ತು ಸಾರಿಯಾದರೂ ಈ ಕುರಿತು ಎಚ್ಚರಿಸಿದ್ದರು. ಆದರೆ ಕಿಟ್ಟಿ ಮಾತ್ರ ಯಾವತ್ತೂ ಅಮ್ಮನ ಮಾತನ್ನು ಕಿವಿಗೆ ಹಾಕಿಕೊಳ್ಳುತ್ತಲೇ ಇರಲಿಲ್ಲ. ಅಮ್ಮನ ಮಾತು ಕೇಳದ ಕಿಟ್ಟಿ ಯಾವಾಗಲೂ ಒಂದಲ್ಲ ಒಂದು ಪಜೀತಿಗೆ ಸಿಕ್ಕಿ ಹಾಕಿಕೊಳ್ಳುತ್ತಲೇ ಇದ್ದ.
ಎರಡನೇ ತರಗತಿಯಲ್ಲಿ ಓದುತ್ತಿದ್ದ ಕಿಟ್ಟಿ, ಕೆಟ್ಟವನಲ್ಲ ಆದರೆ ತುಂಟ. ತುಂಬಾ ಕುತೂಹಲಿ. ಅವನಿಗೆ ಒಂದೇ ಕಡೆ ಕೂರಲಾಗುತ್ತಿರಲಿಲ್ಲ. ಶಾಲೆಯಲ್ಲಿ ಶಿಕ್ಷಕರ ಮಾತನ್ನೂ ಗಮನಿಸದೇ ಸಣ್ಣ ಪುಟ್ಟ ತಪ್ಪು ಮಾಡುತ್ತಲೇ ಇರುತ್ತಿದ್ದ. ಪೇರೆಂಟ್ಸ್ ಟೀಚರ್ ಮೀಟಿಂಗ್‌ಗಳಲ್ಲಿ ಶಿಕ್ಷಕರೆಲ್ಲರೂ ಒಂದೇ ಮಾತನ್ನು ಹೇಳುತ್ತಿದ್ದರು- “ಕಿಟ್ಟಿ ಸ್ವಲ್ಪ ತರಲೆ ಆದರೆ ಜಾಣ’ ಎಂದು.
ಅಮ್ಮ, ಪ್ರತಿ ಮಂಗಳವಾರ ಮನೆಯ ಹಿಂದಿನ ಬೆಟ್ಟದಲ್ಲಿರುವ ಷಣ್ಮುಖ ದೇವಸ್ಥಾನಕ್ಕೆ ಹೋಗುತ್ತಿದ್ದರು. ಆಗ, ಕಿಟ್ಟಿ ಕೂಡ ತಪ್ಪದೇ ಅಮ್ಮನ ಜೊತೆಯಲ್ಲೇ ಹೋಗಿ ಬರುತ್ತಿದ್ದ. ಅಲ್ಲಿ ದೊನ್ನೆ ತುಂಬಾ ಕೊಡುತ್ತಿದ್ದ ಪ್ರಸಾದವನ್ನು ನೆನದೇ ಅವನ ನಾಲಗೆಯಲ್ಲಿ ನೀರೂರುತ್ತಿತ್ತು. ಒಂದು ಮಂಗಳವಾರ ದೇವರ ದರ್ಶನದ ನಂತರ ಕಿಟ್ಟಿ, ಅಮ್ಮನೊಂದಿಗೆ ಸಾಲಿನಲ್ಲಿ ನಿಂತು ಪ್ರಸಾದವನ್ನೂ ತೆಗೆದುಕೊಂಡ. ಇನ್ನೇನು ತಿನ್ನಬೇಕು ಎನ್ನುವಷ್ಟರಲ್ಲಿ ಅಮ್ಮ ತಡೆದರು. “ಮನೆಯಲ್ಲಿ ಅಪ್ಪನ ಜೊತೆ ಪ್ರಸಾದವನ್ನು ಹಂಚಿ ತಿನ್ನೋಣ’ ಎಂದರು ಅಮ್ಮ. ಕಿಟ್ಟಿ ಎಂದಾದರೂ ಅಮ್ಮನ ಮಾತು ಕೇಳಿಯಾನೆ? ಅಮ್ಮನ ಕೈ ಬಿಟ್ಟು ಪ್ರಸಾದ ತಿನ್ನುತ್ತಾ ಮುಂದಕ್ಕೆ ನಡೆಯತೊಡಗಿದ. ಅಷ್ಟರಲ್ಲಿ ಅಮ್ಮನಿಗೆ ಅವರ ಗೆಳತಿಯೊಬ್ಬರು ಸಿಕ್ಕರು. ಅವರು ಮಾತಾಡುತ್ತಾ ನಿಂತರೆ ಕಿಟ್ಟಿ ಮುಂದಕ್ಕೆ ಹೋಗಿಬಿಟ್ಟಿದ್ದ. ಅಮ್ಮ “ಒಬ್ಬನೇ ಹೋಗಬೇಡ. ಅಲ್ಲೇ ಇರು ಬರುತ್ತೇನೆ’ ಎಂದರೂ ಅವನು ಕೇಳಲಿಲ್ಲ. “ನಾನು ನಿಧಾನವಾಗಿ ಹೋಗುತ್ತಿರುತ್ತೇನೆ. ನೀನು ಮಾತಾಡಿ ಬಾ’ ಎಂದನು ಕಿಟ್ಟಿ.
ದಾರಿಯಲ್ಲಿ ನಾಯಿಯೊಂದು ಮಲಗಿತ್ತು. ಕಿಟ್ಟಿಯ ಕೈಲಿದ್ದ ಪ್ರಸಾದದ ಸುವಾಸನೆ ಅದರ ಮೂಗಿಗೂ ಬಡಿಯಿತು. ತುಂಬ ಹಸಿದಿದ್ದ ನಾಯಿ ಕಿಟ್ಟಿಯ ಹಿಂದೆಯೇ ಬಂದಿತು. ನಾಯಿಯನ್ನು ಕಂಡು ಕಿಟ್ಟಿಗೆ ಹೆದರಿಕೆಯೇನೂ ಆಗಲಿಲ್ಲ. ಅವನು ಛೂ ಛೂ ಎಂದು ಓಡಿಸಲು ಯತ್ನಿಸಿದ. ಆದರೆ ನಾಯಿ ಅವನನ್ನು ಹಿಂಬಾಲಿಸುವುದನ್ನು ಬಿಡಲಿಲ್ಲ. ಕಿಟ್ಟಿ ನಾಯಿಯನ್ನು ನಿರ್ಲಕ್ಷಿಸಿ ಮುಂದಕ್ಕೆ ನಡೆಯತೊಡಗಿದ. ಸ್ವಲ್ಪ ಹೊತ್ತಿನ ನಂತರ ಹಿಂದಕ್ಕೆ ತಿರುಗಿ ನೋಡಿದಾಗ ನಾಲ್ಕು ನಾಯಿಗಳು ಅವನ ಹಿಂದಿದ್ದವು. ಪ್ರಸಾದದ ವಾಸನೆಗೆ ಅದೆಲ್ಲೆಲ್ಲಿಂದಲೋ ನಾಯಿಗಳು ಬಂದುಬಿಟ್ಟಿದ್ದವು. ಕಿಟ್ಟಿಗೆ ಈಗ ಭಯವಾಗಿತ್ತು. ನಾಯಿಗಳು ವ್ಯಗ್ರವಾಗಿದ್ದವು.
ಕಿಟ್ಟಿಗೆ ಅಳು ಬಂದಿತ್ತು. ಇನ್ನೇನು ನಾಯಿಗಳು ಅವನ ಮೇಲೆರೆಗಿ ಪ್ರಸಾದಕ್ಕೆ ಬಾಯಿ ಹಾಕುವಂತಿದ್ದವು. ಕಿಟ್ಟಿಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಅವನು “ಅಮ್ಮಾ ಎಂದು ಕೂಗಿದ’. ಹಿಂದುಗಡೆ ಮಾತಿನಲ್ಲಿ ಮುಳುಗಿದ್ದ ಅಮ್ಮನಿಗೆ ಕಿಟ್ಟಿಯ ದನಿ ಕೇಳಿಸಿತು. ಆದರೆ ಅಮ್ಮ ದೂರದಲ್ಲಿದ್ದರು. ಅವರು ಓಡಿ ಬರುವ ಮುನ್ನವೇ ನಾಯಿಗಳು ಕಿಟ್ಟಿಯ ಮೇಲೆ ದಾಳಿ ನಡೆಸುವಂತಿದ್ದವು. ಅಮ್ಮ, ತಾನಿದ್ದಲ್ಲಿಂದಲೇ “ಕಿಟ್ಟಿ ಪ್ರಸಾದವನ್ನು ಬೇಗನೆ ದೂರಕ್ಕೆ ಎಸೆದುಬಿಡು’ ಎಂದು ಕೂಗಿದರು. ಯಾವತ್ತೂ ಅಮ್ಮನ ಮಾತು ಕೇಳದ ಕಿಟ್ಟಿ ಆ ಸಂದರ್ಭದಲ್ಲಿ ಕೇಳಿದ. ಪ್ರಸಾದವನ್ನು ದೂರಕ್ಕೆ ಎಸೆದ ತಕ್ಷಣ ನೆಲದಲ್ಲಿ ಬಿದ್ದಿದ್ದ ಪ್ರಸಾದ ತಿನ್ನಲು ನಾಯಿಗಳು ಮುಗಿಬಿದ್ದವು. ನಾಯಿಗಳ ಗಮನ ಪ್ರಸಾದದ ಮೇಲೆ ಇರುವಂತೆಯೇ ಕಿಟ್ಟಿ ಅಮ್ಮನ ಬಳಿಗೆ ಓಡಿದ. ಅಮ್ಮನನ್ನು ಅಪ್ಪಿಕೊಂಡು “ಸಾರಿ ಅಮ್ಮ, ನಿನ್ನ ಮಾತು ಕೇಳಿ ನಿನ್ನೊಂದಿಗೇ ಬಂದಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ಇನ್ನೆಂದೂ ನಿನ್ನ ಮಾತನ್ನು ಮೀರಲ್ಲ.’ ಎಂದನು. ಅಮ್ಮನಿಗೆ ಕಿಟ್ಟಿಯ ಮೇಲೆ ಪ್ರೀತಿ ಮೂಡಿ, ಅವನ ಹಣೆ ನೇವರಿಸಿದಳು. ಇಬ್ಬರೂ ಅದೂ ಇದೂ ಮಾತಾಡುತ್ತಾ ಮನೆಯ ದಾರಿ ಹಿಡಿದರು.
-ಗಾಯತ್ರಿ ರಾಜ್