ಬಾಲಿವುಡ್‌ನಲ್ಲಿ ಅಮಿತಾಭ್ ಬಚ್ಚನ್ ಅಭಿನಯದ “ಮಿಸ್ಟರ್ ನಟ್ವರ್‌ಲಾಲ್’ ಚಿತ್ರ 1979 ರಲ್ಲಿ ಬಿಡುಗಡೆಯಾಗಿತ್ತು. ಆ ಚಿತ್ರದಲ್ಲಿ ಅಮಿತಾಭ್ ಬಚ್ಚನ್‌ಗೆ ರೇಖಾ ಜೋಡಿಯಾಗಿ ನಟಿಸಿದ್ದರು. ನಾಲ್ಕು ದಶಕದ ಹಿಂದೆ ಬಿಡುಗಡೆಯಾಗಿದ್ದ ಹಿಂದಿಯ “ಮಿಸ್ಟರ್ ನಟ್ವರ್‌ಲಾಲ್’ ಚಿತ್ರದ ಬಗ್ಗೆ ಈಗ ಯಾಕೆ ವಿಷಯ ಎಂಬ ಪ್ರಶ್ನೆ ಎದುರಾಗಬಹುದು. ಈಗ ಕನ್ನಡದಲ್ಲೂ “ಮಿಸ್ಟರ್ ನಟ್ವರ್‌ಲಾಲ್’ ಎಂಬ ಚಿತ್ರ ತಯಾರಾಗುತ್ತಿದೆ.
ಹೌದು, “ಮಡಮಕ್ಕಿ’ ಮೂಲಕ ಗುರುತಿಸಿಕೊಂಡ ಯುವ ನಟ ತನುಷ್ ಈ ಚಿತ್ರದ ನಾಯಕ. ಲವ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಅವರದೇ ಇನ್ನು, ಶ್ರೀ ರಾಮ ಟಾಕೀಸ್ ಬ್ಯಾನರ್‌ನಲ್ಲಿ “ಮಿಸ್ಟರ್ ನಟ್ವರ್‌ಲಾಲ್’ ನಿರ್ಮಾಣವಾಗುತ್ತಿದೆ. ಇಲ್ಲಿ ನಟ್ವರ್‌ಲಾಲ್ ಅಂದರೆ, ಥಟ್ಟನೆ ಈ ಹಿಂದೆ ಇದ್ದಂತಹ ನಟೋರಿಯಸ್ ನೆನಪಾಗುತ್ತೆ. ಅವನೊಬ್ಬ ದೊಡ್ಡ ಮೋಸಗಾರ.
ಆ ದಿನಗಳಲ್ಲೇ “ತಾಜ್‌ಮಹಲ್’ ಮಾರಲು ಹೊರಟು ಸುದ್ದಿಯಾಗಿದ್ದ ಭೂಪ. ಆದರೆ, ಅವನಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಚಿತ್ರದ ಕಥೆ ಮತ್ತು ನಾಯಕನ ಪಾತ್ರಕ್ಕೆ “ನಟ್ವರ್‌ಲಾಲ್’ ಶೀರ್ಷಿಕೆ ಸೂಕ್ತವೆನಿಸಿದ್ದರಿಂದ ಚಿತ್ರತಂಡ ನಾಮಕರಣ ಮಾಡಿದೆ. ಇದೊಂದು ಥ್ರಿಲ್ಲರ್ ಕಮ್ ಆ್ಯಕ್ಷನ್ ಚಿತ್ರವಾಗಿದ್ದು, ಚಿತ್ರದಲ್ಲಿ ನಾಯಕ ಕೂಡ ಒಂದಷ್ಟು ಜನರಿಗೆ ಮೋಸ ಮಾಡುತ್ತಲೇ ಬದುಕು ಸವೆಸುತ್ತಿರುತ್ತಾನೆ.
ಆದರೆ, ಅವನು ಜನರಿಗೆ ಮೋಸ ಮಾಡಿ ಅದರಿಂದ ಬಂದ ಹಣವನ್ನು ಏನು ಮಾಡುತ್ತಾನೆ ಎಂಬುದು ಕಥೆ. ಒಂದಷ್ಟು ಹಾಸ್ಯ ಸನ್ನಿವೇಶಗಳ ಮೂಲಕ ಸಾಗುವ ಚಿತ್ರ, ಗಂಭೀರತೆಗೂ ಕರೆದೊಯ್ಯುವ ಪ್ರಸಂಗಗಳು ಹೆಚ್ಚಾಗಿವೆ. ಯಾತಕ್ಕಾಗಿ ಹೀರೋ ಇಲ್ಲಿ ಮೋಸ ಮಾಡುತ್ತಾನೆ ಎಂಬುದು ಹೈಲೆಟ್. ಇಲ್ಲಿ ಅವನು ಮೋಸ ಮಾಡಿದರೂ, ಒಂದಷ್ಟು ಒಳ್ಳೆಯ ಕೆಲಸ ಮಾಡುತ್ತಾನೆ.
ಆ ಮೂಲಕ ಕೊನೆಗೊಂದು ಸಂದೇಶ ರವಾನಿಸುತ್ತಾನೆ. ಆ ಒಳ್ಳೆಯ ಕೆಲಸ ಏನೆಂಬುದು ಸಸ್ಪೆನ್ಸ್ ಎಂಬುದು ಚಿತ್ರತಂಡದ ಮಾತು. ಇಲ್ಲಿ ತಾಯಿ ಸೆಂಟಿಮೆಂಟ್ ಕೂಡ ಇದೆ. ತಾಯಿ ಜೊತೆಗೆ ವಾಸ ಮಾಡುವ ನಾಯಕನ ಕೆಲಸದಿಂದ ಬೇಸತ್ತು ಆ ಊರ ಜನ ಅವನೊಂದಿಗೆ ತಾಯಿಯನ್ನೂ ಊರು ಬಿಟ್ಟು ಕಳಿಸುತ್ತಾರೆ. ಅಲ್ಲಿಂದ ಬೆಂಗಳೂರಿಗೆ ಬರುವ ನಾಯಕ ಅಲ್ಲೂ ಚೀಟ್ ಮಾಡ್ತಾನೆ.
ಮುಂದೆ ಏನೆಲ್ಲಾ ಆಗುತ್ತೆ ಅನ್ನುವುದು ವಿಶೇಷವಂತೆ. ಈ ಚಿತ್ರದ ಪಾತ್ರಕ್ಕಾಗಿ ನಾಯಕ ತನುಷ್ 95 ಕೆಜಿಯಷ್ಟು ದಪ್ಪ ಆಗುತ್ತಿದ್ದಾರಂತೆ. ಅವರಿಗಿನ್ನೂ ನಾಯಕಿ ಸಿಕ್ಕಿಲ್ಲ. ಇಷ್ಟರಲ್ಲೇ ನಾಯಕಿಯ ಆಯ್ಕೆ ಮಾಡಿಕೊಂಡು ಚಿತ್ರೀಕರಣಕ್ಕೆ ಹೊರಡಲು ಚಿತ್ರತಂಡ ಸಜ್ಜಾಗಿದೆ. ಗಣೇಶ ಹಬ್ಬದ ಬಳಿಕ “ಮಿಸ್ಟರ್ ನಟ್ವರ್‌ಲಾಲ್’ಗೆ ಚಾಲನೆ ಸಿಗಲಿದೆ.
ಚಿತ್ರಕ್ಕೆ ಎ.ಆರ್. ರೆಹಮಾನ್ ಬಳಿ ಸಂಗೀತ ಕಲಿಯುತ್ತಿದ್ದ ನಿಕ್ಕಿ ಎರಡು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಛಾಯಾಗ್ರಾಹಕರ ಆಯ್ಕೆ ಈಗಷ್ಟೇ ಆಗಬೇಕಿದೆ. ಉಳಿದ ತಾರಾಗಣದ ಆಯ್ಕೆ ಪ್ರಕ್ರಿಯೆ ಕೂಡ ಶುರುವಾಗಿದೆ. ಬಹುತೇಕ ಬೆಂಗಳೂರು, ಕುಣಿಗಲ್ ಇತರೆಡೆ ಸುಮಾರು 40 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಐದು ಭರ್ಜರಿ ಫೈಟ್ಸ್‌ಗಳಿವೆ.