ಧಾರವಾಡ: ಅಭಿವೃದ್ಧಿಯ ಪ್ರವಾಹದಲ್ಲೂ ನಿಸರ್ಗ ಮತ್ತು ವನ್ಯಜೀವಿ ಸಂರಕ್ಷಣೆ ಸಾಧ್ಯವಿದೆ ಎಂದು ಪರಿಸರ ಹೋರಾಟಗಾರ ಮತ್ತು ವನ್ಯಜೀವಿ ತಜ್ಞ ಡಾ|ಉಲ್ಲಾಸ ಕಾರಂತ್ ಹೇಳಿದರು.
ಕವಿವಿಯಲ್ಲಿ ನಡೆಯುತ್ತಿರುವ ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಶನಿವಾರ ಅಭಿವೃದ್ಧಿ ಪ್ರವಾಹದಲ್ಲಿ ನಿಸರ್ಗ ಸಂರಕ್ಷಣೆಯ ದ್ವೀಪ ಎಂಬ 8ನೇ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೊಡ್ಡ ದೊಡ್ಡ ಅಭಿವೃದ್ಧಿ ಯೋಜನೆಗಳಿಗಾಗಿ ವನ್ಯಜೀವಿಗಳ ಮನೆಯಾಗಿರುವ ದಟ್ಟ ಕಾಡುಗಳನ್ನು ನಾಶ ಮಾಡುತ್ತಿದ್ದೇವೆ. ಅದೇ ವೇಳೆಗೆ ವನ್ಯಜೀವಿಗಳ ಸಂರಕ್ಷಣೆ ಬಗ್ಗೆಯೂ ನಾವು ಮಾತನಾಡುತ್ತಿದ್ದೇವೆ. ಆದರೆ, ಈ ಎರಡನ್ನೂ ಒಟ್ಟಿಗೆ ಸಾಧಿಸುವುದು ಕಷ್ಟವಾದರೂ ಸಂಘ ಸಂಸ್ಥೆಗಳ ಸಹಕಾರ, ಜನಜಾಗೃತಿ, ಅಗತ್ಯ ಪುನರ್ವಸತಿ ಮಾಡಿ, ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಿ ಅದಕ್ಕೆ ಬೇಕಾದ ಕ್ರಮ ಕೈಗೊಂಡರೆ ಖಂಡಿತಾ ನಿಸರ್ಗದ ಉಳಿವು ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಒಟ್ಟಿಗೆ ಮಾಡಬಹುದು ಎಂದರು.
ಅಭಿವೃದ್ಧಿ ಕಾರ್ಯಗಳು ನಿಸರ್ಗದ ಮೇಲೆ ಭೀಕರ ಪರಿಣಾಮ ಬೀರುತ್ತಿವೆ. ಹಾಗಂತ ಎಲ್ಲವೂ ಮುಗಿದೇ ಹೋಯ್ತು ಎನ್ನಲಾಗದು. ಸೂಕ್ತ ಮುಂದಾಲೋಚನೆ ಕ್ರಮಗಳು ಮತ್ತು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡು ವನ್ಯಜೀವಿಗಳು ಮತ್ತು ನಿಸರ್ಗವನ್ನು ಸಂರಕ್ಷಿಸಲು ಸಾಧ್ಯವಿದೆ. ಇದಕ್ಕೆ ಉದಾಹರಣೆ ಎಂಬಂತೆ ಪಶ್ಚಿಮ ಘಟ್ಟದಲ್ಲಿ ಎಷ್ಟೋ ಕಾಡಿನ ಮಧ್ಯದ ಹಳ್ಳಿಗಳನ್ನು ಸ್ಥಳಾಂತರಿಸಿ ಅಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿಸಲು ನಾವು 20 ವರ್ಷಗಳ ಹಿಂದೆ ಪ್ರಯತ್ನಿಸಿದ್ದೆವು. ಅದು ಫಲ ಕೊಟ್ಟಿದ್ದು, ಇದೀಗ ಹುಲಿಗಳ ಸಂಖ್ಯೆ ಅಲ್ಲಿ 50ರಿಂದ 400 ಕ್ಕೆ ಹೆಚ್ಚಿಗೆಯಾಗಿದೆ ಎಂದರು.
ಹುಬ್ಬಳ್ಳಿ-ಅಂಕೋಲಾ ರೈಲು ಸಲ್ಲದು: ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪರಿಸರಕ್ಕೆ ಹಾನಿಯಾಗುವ ಯಾವುದೇ ಯೋಜನೆಗಳು ಇಂದು ಅಗತ್ಯವೇ ಇಲ್ಲ. ಸಂಚಾರ ದಟ್ಟಣೆ ಕಡಿಮೆ ಇರುವ ಪ್ರದೇಶಗಳಲ್ಲಿ ಈಗಲೂ ಅನಗತ್ಯವಾಗಿ ದೊಡ್ಡ ಹೈವೇಗಳು ಕಾರಿಡಾರ್ ನಿರ್ಮಿಸುತ್ತಿದ್ದಾರೆ ಎಂದರು.