ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಸಾಕಷ್ಟು ನಷ್ಟ ಉಂಟಾಗಿತ್ತು, ಆದ್ದರಿಂದ ಈ ಬಾರಿಯೂ ಅತೀವೃಷ್ಟಿ ಸಂಭವಿಸಿದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದ್ದು, ಅಂತಹ ಸಂದರ್ಭದಲ್ಲಿ ಪರಿಹಾರ ಕೇಂದ್ರಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ಸ್ವಯಂ ಸೇವಕರು ಅಗತ್ಯ ಸಹಕಾರ ನೀಡಲಿದ್ದಾರೆ ಎಂದು ರಾಜ್ಯ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತರು ಹಾಗೂ ಮಾಜಿ ಸಚಿವರಾದ ಪಿ.ಜಿ.ಆರ್.ಸಿಂಧ್ಯಾ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜೂನ್ ತಿಂಗಳಿನಿಂದ ಆರಂಭವಾಗುವ ಮಳೆಗಾಲದ ಸಂದರ್ಭದಲ್ಲಿ ಕೊಡಗು ಜಿಲ್ಲೆಯಲ್ಲಿ ಯಾವುದೇ ರೀತಿಯ ಭೂ ಕುಸಿತ, ಪ್ರವಾಹ ಉಂಟಾದಲ್ಲಿ ಜನರ ರಕ್ಷಣೆಗೆ ಹಾಗೂ ಪುನರ್ ವಸತಿ ಕೇಂದ್ರಗಳ ಸ್ಥಾಪನೆ ಹಾಗೂ ನಿರ್ವಹಣೆಗೆ ಈಗಾಗಲೇ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಸ್ಕೌಟ್ಸ್ ಮತ್ತು ಗೈಡ್ಸ್ ತಂಡವು ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.
ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯ ಅವರು ಮಾತನಾಡಿ ಪುನರ್ ವಸತಿ ಕೇಂದ್ರ ನಿರ್ವಹಣೆಗೆ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ಸೇವೆಯನ್ನು ಪಡೆಯಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಅತೀವೃಷ್ಟಿ ಉಂಟಾದ ಸಂದರ್ಭದಲ್ಲಿ ಜನರನ್ನು ಪುನರ್ ವಸತಿ ಕೇಂದ್ರಗಳಿಗೆ ಸ್ಥಳಾಂತರ ಗೊಳಿಸಲಾಗುವುದು. ಪುನರ್ ವಸತಿ ಕೇಂದ್ರಗಳ ನಿರ್ವಹಣೆಗೆ ಸ್ವಯಂ ಸೇವಕರ ಆವಶ್ಯಕತೆ ಇದ್ದು, ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ ಆ್ಯಂಡ್ ರೇಂಜರ್ ಇವರ ಸೇವೆ ಪಡೆಯಲಾಗುತ್ತದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಮತ್ತು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತರಾದ ಕಾಳಪ್ಪ ಅವರು ಮಾತನಾಡಿ ದರು. ಯುನಿಸೆಫ್ ಜಿಲ್ಲಾ ಸಮಾಲೋ ಚಕರಾದ ಎಂ.ಪ್ರಭಾತ್ ಅವರು ಸಭೆಗೆ ಹಲವು ಮಾಹಿತಿ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಚ್ಚಾಡೋ ಅವರು ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳ ದಿನಚರಿಯನ್ನು ಪರಿಹಾರ ಕೇಂದ್ರದಲ್ಲಿ ಬರುವಂತಹ ಜನರ ದಿನಚರಿಯಲ್ಲಿ ಅಳವಡಿಸುವಂತೆ ಅವರು ಸಲಹೆ ನೀಡಿದರು.
ಸಭೆಯಲ್ಲಿ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಕಾರ್ಯದರ್ಶಿ ಗಂಗಪ್ಪ ಗೌಡ, ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಸಂಘಟನಾ ಆಯುಕ್ತರಾದ ಪ್ರಭಾಕರ ಭಟ್, ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಆಯುಕ್ತರಾದ ಜಿಮ್ಮಿ ಸಿಕ್ವೇರಾ, ಜಿಲ್ಲಾ ಸಂಘಟಕರಾದ ದಮಯಂತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಕೆಂಚಪ್ಪ, ಉಪಸ್ಥಿತರಿದ್ದರು.