Advertisement

ಪ್ರಕೃತಿ ವಿಕೋಪ: ಕೇಂದ್ರದಿಂದ ಸಿಕ್ಕಿಲ್ಲ ಪರಿಹಾರ

09:50 AM Oct 06, 2018 | |

ಬೆಂಗಳೂರು: ರಾಜ್ಯದ ಅರ್ಧಕ್ಕೂ ಹೆಚ್ಚು ಪ್ರದೇಶ ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದು, ಕೇಂದ್ರದಿಂದ ಇನ್ನೂ ಪರಿಹಾರ ಲಭ್ಯವಾಗದ ಕಾರಣ ರಾಜ್ಯ ಸರ್ಕಾರದ ಮೇಲೆ ಹೊರೆ ಹೆಚ್ಚಾಗುತ್ತಿದೆ. ಇದು ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೂ ಪರಿಣಾಮ ಬೀರುವ ಆತಂಕ ಕಾಣಿಸಿಕೊಂಡಿದೆ.

Advertisement

ರಾಜ್ಯದಲ್ಲಿರುವ 226 ತಾಲೂಕುಗಳ ಪೈಕಿ 86 ತಾಲೂಕುಗಳನ್ನು ಬರಪೀಡಿತ ಮತ್ತು 45 ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಲಾಗಿದ್ದು, ಪರಿಹಾರ ಕೋರಿ ಕೇಂದ್ರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಆದರೆ, ಅಗತ್ಯ ಪ್ರಕ್ರಿಯೆಗಳು ಸಕಾಲದಲ್ಲಿ ಮುಗಿಯದ ಕಾರಣ ಕೇಂದ್ರದಿಂದ ಇನ್ನೂ ನಯಾ ಪೈಸೆ ಪರಿಹಾರ ಸಿಕ್ಕಿಲ್ಲ.

ಆದರೆ, ಪರಿಹಾರ ಕಾರ್ಯಗಳನ್ನು ಸ್ಥಗಿತಗೊಳಿಸಲು ಸಾಧ್ಯವಾಗದ ಕಾರಣ ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದಲೇ ಸುಮಾರು 300 ಕೋಟಿ ರೂ.ವೆಚ್ಚ ಮಾಡಿದೆ. ಸದ್ಯದಲ್ಲೇ ಕೇಂದ್ರದಿಂದ ಹಣ ಬಿಡುಗಡೆಯಾಗದಿದ್ದಲ್ಲಿ ಪರಿಹಾರ ಕಾರ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಕೇರಳದಲ್ಲಿ ಮಳೆಯಿಂದ ದುರಂತ ಸಂಭವಿಸಿದಾಗ ತಕ್ಷಣ 200 ಕೋಟಿ ರೂ. ಒದಗಿಸಿದ್ದ ಕೇಂದ್ರ ಸರ್ಕಾರ ರಾಜ್ಯದ ಕೊಡಗು ಸೇರಿ ಕರಾವಳಿ ಜಿಲ್ಲೆಗಳಲ್ಲಿ ಸಂಭವಿಸಿದ ದುರಂತದ ವಿಚಾರದಲ್ಲಿ ನಿಯಮಾನುಸಾರ ನಡೆಸಬೇಕಾದ ಪ್ರಕ್ರಿಯೆಗಳನ್ನು ಅನುಸರಿಸುತ್ತಿದೆ. ತುರ್ತು ಪರಿಹಾರ ಬಿಡುಗಡೆ ಮಾಡಿಲ್ಲ. ಇದರ ಪರಿಣಾಮ ರಾಜ್ಯ ಸರ್ಕಾರದ ಮೇಲೆ ಹೊರೆ ಹೆಚ್ಚುವಂತಾಗಿದೆ.

ಭಾರೀ ಮಳೆ ಮತ್ತು ಪ್ರವಾಹದಿಂದ ಕೊಡಗು ಸೇರಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸುಮಾರು 3435.80 ಕೋಟಿ ರೂ. ಹಾನಿಯಾಗಿದ್ದು, ತಕ್ಷಣದ ಪರಿಹಾರವಾಗಿ 2000 ಕೋಟಿ ರೂ. ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಕಳೆದ ಆಗಸ್ಟ್‌ 30ರಂದು ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ನಂತರ ಸೆ.10ರಂದು ಮುಖ್ಯಮಂತ್ರಿ ಕುಮಾರಸ್ವಾಮಿ,ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರನ್ನೊಳಗೊಂಡ ಸಚಿವರ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಈ ಬಗ್ಗೆ ಮತ್ತೂಮ್ಮೆ ಮನವರಿಕೆ ಮಾಡಿಕೊಟ್ಟಿತ್ತು.

Advertisement

ಅದರಂತೆ ಕೇಂದ್ರದಿಂದ ಅಧಿಕಾರಿಗಳ ತಂಡ ರಾಜ್ಯಕ್ಕೆ ಬಂದು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದ್ದಲ್ಲದೆ, ರಾಜ್ಯ ಸರ್ಕಾರದಿಂದಲೂ ನಷ್ಟದ ಬಗ್ಗೆ ಮಾಹಿತಿ ಪಡೆದು ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಆದರೆ, ಕೇಂದ್ರದಲ್ಲಿ ಗೃಹ ಸಚಿವರ
ನೇತೃತ್ವದ ಉನ್ನತ ಮಟ್ಟದ ಸಮಿತಿ ಸಭೆ ನಡೆಯದ ಕಾರಣ ಇನ್ನೂ ಹಣ ಬಿಡುಗಡೆಯಾಗಿಲ್ಲ.

ಪ್ರವಾಹ ಪರಿಹಾರಕ್ಕೆ 250 ಕೋಟಿ: ಪ್ರವಾಹದಿಂದ ಹಾನಿಗೊಳಗಾದ ಜಿಲ್ಲೆಗಳಲ್ಲಿ ಪರಿಹಾರ ಕಾಮಗಾರಿಗಳಿಗಾಗಿ ರಾಜ್ಯ ಸರ್ಕಾರ ಈಗಾಗಲೇ 250 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಪೈಕಿ ತೀವ್ರ ಹಾನಿಗೊಳಗಾಗಿರುವ ಕೊಡಗು ಜಿಲ್ಲೆಯೊಂದಕ್ಕೇ 100 ಕೋಟಿ ರೂ. ನೀಡಲಾಗಿದೆ. ಇನ್ನುಳಿದ 150 ಕೋಟಿ ರೂ. ಇತರೆ ಜಿಲ್ಲೆಗಳಿಗೆ ಹಂಚಿಕೆಯಾಗಿದೆ. ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ 250 ಕೋಟಿ ರೂ.ನಲ್ಲಿ ಸಂತ್ರಸ್ತರಿಗೆ ತುರ್ತು ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆಯಾದರೂ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಿ ಸಮರ್ಪಕ ವಸತಿ ಸೇರಿ ಮೂಲ ಸೌಕರ್ಯ ಕಲ್ಪಿಸಿ ಕೊಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕನಿಷ್ಠ 2000 ಕೋಟಿ ರೂ. ಅಗತ್ಯವಿದ್ದು, ರಾಜ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಅಷ್ಟೊಂದು ಮೊತ್ತ ಭರಿಸಲು ಸಾಧ್ಯವಿಲ್ಲ. ಹೀಗಾಗಿ ಕೇಂದ್ರದ ಅನುದಾನಕ್ಕಾಗಿ ಎದುರು ನೋಡುವ ಪರಿಸ್ಥಿತಿ ಉದ್ಭವಿಸಿದೆ.

ಕೇಂದ್ರಕ್ಕೆ ಪ್ರಸ್ತಾವನೆಯನ್ನೇ ಸಲ್ಲಿಸಿಲ್ಲ
ಈ ಮಧ್ಯೆ, ರಾಜ್ಯದ 86 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಸೆ. 11ರಂದೇ ಘೋಷಿಸಿತ್ತಾದರೂ ಇನ್ನೂ ಈ ಕುರಿತು ಕೇಂದ್ರಕ್ಕೆ ವಿವರವಾದ ಪ್ರಸ್ತಾವನೆ ಸಲ್ಲಿಸಿಲ್ಲ. ಈ ಕಾರಣದಿಂದ ಕೇಂದ್ರದಿಂದ ಅಧಿಕಾರಿಗಳ ತಂಡ ಪರಿಶೀಲನೆಗೆ ಬಂದಿಲ್ಲ ಮತ್ತು ಕೇಂದ್ರ ಸರ್ಕಾರ ಪರಿಹಾರ ಕಾಮಗಾರಿಗಳಿಗೆ ಹಣವನ್ನೂ ಬಿಡುಗಡೆ ಮಾಡಿಲ್ಲ.ಕೇಂದ್ರಕ್ಕೆ ವರದಿ ಸಲ್ಲಿಸದ ಕುರಿತು ಪ್ರತಿಕ್ರಿಯಿಸಿರುವ ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು,ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ ಮೇಲೆ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ನಷ್ಟದ ಕುರಿತು ವರದಿ ಸಿದ್ಧಪಡಿಸಲಾಗುತ್ತಿದೆ. ವರದಿ ಸಲ್ಲಿಸಿದ ಬಳಿಕ ಕೇಂದ್ರದ ಅಧಿಕಾರಿಗಳು ಬಂದು ಪರಿಶೀಲನೆ ಮಾಡುತ್ತಾರೆ. ಈ ವೇಳೆ ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವನೆ ಮತ್ತು ಅಧಿಕಾರಿಗಳ ಸಮೀಕ್ಷೆಯಲ್ಲಿ ವ್ಯತ್ಯಯ ಕಂಡುಬಂದರೆ ಸಮಸ್ಯೆಯಾಗುತ್ತದೆ. ಈ ಕಾರಣಕ್ಕಾಗಿ ಪರಿಸ್ಥಿತಿಯನ್ನು ಸಂಪೂರ್ಣ ಅವಲೋಕಿಸಿ ವಿವರವಾದ ಪ್ರಸ್ತಾವನೆ ಸಿದ್ಧಪಡಿ ಸಬೇಕಾಗುತ್ತದೆ. ಹೀಗಾಗಿ ಪ್ರಸ್ತಾವನೆ ಸಲ್ಲಿಸುವುದು ವಿಳಂಬವಾಗಿದ್ದು, ಇನ್ನು 15 ದಿನಗಳಲ್ಲಿ ಪ್ರಸ್ತಾವನೆ ಸಿದಟಛಿಗೊಳ್ಳಲಿದೆ. ನಂತರ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಹೇಳಿದ್ದಾರೆ.

ಪ್ರದೀಪ್‌ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next