Advertisement
ಮೆಕಿನ್ಯಾಕ್ ದ್ವೀಪ ಒಂದು ಪ್ರವಾಸಿ ತಾಣ. ಅಲ್ಲಿ ಪ್ರಾಚೀನ ಕಾಲದ ಕೋಟೆಗಳನ್ನು ಸಂರಕ್ಷಿಸಿ ಇಡಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಗರ ಗಮನ ಸೆಳೆಯುವುದು ತನ್ನ ವಾಹನ ನಿರ್ಬಂಧಿತ ರಸ್ತೆಗಳಿಂದ. 1898ರಿಂದಲೇ ಇಲ್ಲಿ ವಾಹನಗಳಿಗೆ ನಿಷೇಧ ಹೇರಲಾಗಿದೆ. ಹಾಗಾದರೆ ಇಲ್ಲಿನ ನಿವಾಸಿಗಳು ಹೇಗೆ ಪ್ರಯಾಣಿಸುತ್ತಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಅವರೆಲ್ಲರೂ ಸೈಕಲ್‌ಗಳನ್ನು ನೆಚ್ಚಿಕೊಂಡಿದ್ದಾರೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರೂ ಅಷ್ಟೇ, ಸೈಕಲ್‌ಗಳನ್ನೇ ಬಾಡಿಗೆಗೆ ಪಡೆದು ಚಲಾಯಿಸುತ್ತಾರೆ. ಅನೇಕ ವೇಳೆ ಕಾಲ್ನಡಿಗೆಯಲ್ಲೇ ಕ್ರಮಿಸುವುದೂ ಉಂಟು. ಮಜವೆಂದರೆ ಅಲ್ಲಿನ ಪೊಲೀಸರು ಕೂಡಾ ಸೈಕಲ್‌ನಲ್ಲಿ ಪ್ರಯಾಣಿಸುತ್ತಾರೆ.
ಮೈಸೂರಿಗೆ ಭೇಟಿ ಕೊಟ್ಟವರು ಅಲ್ಲಿನ ರಸ್ತೆಗಳಲ್ಲಿ ಕುದುರೆ ಗಾಡಿಗಳಲ್ಲಿ ಪ್ರಯಾಣಿಕರು, ಪ್ರವಾಸಿಗರು ಸಂಚರಿಸುವುದನ್ನು ನೋಡಿರುತ್ತೀರಾ. ಅಲ್ಲಿ ಟ್ರಾಫಿಕ್‌ನಲ್ಲಿ ಹೊಗೆಯುಗುಳುವ ವಾಹನಗಳ ಮಧ್ಯೆ ಕುದುರೆ ಗಾಡಿ ಠಾಕು ಠೀಕಾಗಿ ಹೋಗುತ್ತದೆ. ಆದರೆ ಮೆಕಿನ್ಯಾಕ್‌ನಲ್ಲಿ ರಸ್ತೆಗಳ ಮೇಲೆ ಕುದುರೆ ಗಾಡಿಗಳು ಯಾವುದೇ ಹಾರ್ನ್ಗಳ ಕಿರಿಕಿರಿಯಿಲ್ಲದೆ ರಾಜಾರೋಷವಾಗಿ ಪ್ರಯಾಣಿಸುವುದನ್ನು ಕಾಣಬಹುದು. ಸೈಕಲ್ ಬಿಟ್ಟರೆ ಅಲ್ಲಿನ ಪ್ರಮುಖ ಸಾರಿಗೆ ವ್ಯವಸ್ಥೆ ಎಂದರೆ ಕುದುರೆ ಗಾಡಿಗಳೇ. ಚಳಿಗಾಲದಲ್ಲಿ ಹೊಸ ವಾಹನ
ಅಮೆರಿಕದಲ್ಲಿ ಚಳಿ ಎಂದರೆ ನಮ್ಮ ಊರುಗಳಂತಲ್ಲ. ಮನೆಗಳೇ ಮುಚ್ಚಿಹೋಗುವಷ್ಟು ಹಿಮಸುರಿಯುತ್ತದೆ. ಆ ವಾತಾವರಣದಲ್ಲಿ ಕುದುರೆಗಾಡಿ, ಸೈಕಲ್ ಯಾವುವೂ ಉಪಯೋಗಕ್ಕೆ ಬಾರದು. ಹೀಗಾಗಿ ಚಳಿಗಾಲದಲ್ಲಿ ಮಾತ್ರ ಅಲ್ಲಿನ ಆಡಳಿತ ಹೊಸದೊಂದು ವಾಹನಕ್ಕೆ ಅನುಮತಿ ನೀಡುತ್ತದೆ. ಅದರ ಹೆಸರು “ಸ್ನೋ ಮೊಬಿಲ್’. ಅದು ಹಿಮದ ಮೇಲೆ ಜಾರುವ ಇಂಧನ ಆಧಾರಿತ ಪುಟ್ಟ ವಾಹನ. ಅದರಲ್ಲಿ ಒಬ್ಬರು ಆರಾಮಾಗಿ ಕುಳಿತುಕೊಳ್ಳಬಹುದು. ಅದನ್ನು ಬೈಕಿನಂತೆ ಚಲಾಯಿಸಲಾಗುತ್ತದೆ.
Related Articles
ಕೆಲ ವರ್ಷಗಳ ಹಿಂದೆ ಅಮೆರಿಕದ ಉಪಾಧ್ಯಕ್ಷರು ನಗರಕ್ಕೆ ಭೇಟಿ ನೀಡಿದ್ದರು. ಅಮೆರಿಕದ ರಾಜಕಾರಣಿಗಳಿಗೆ, ಮಂತ್ರಿಗಳಿಗೆ ನೀಡುವ ಭದ್ರತಾ ವ್ಯವಸ್ಥೆ ತುಂಬಾ ಕಟ್ಟುನಿಟ್ಟಾಗಿರುತ್ತದೆ. ಹೀಗಾಗಿ ಉಪಾಧ್ಯಕ್ಷರು ಸ್ಥಳೀಯ ನಿಯಮವನ್ನು ಪಾಲಿಸುವರೇ ಇಲ್ಲವೇ ಎಂಬುದರ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಭದ್ರತಾ ಕಾರಣಗಳಿಂದಾಗಿ ಅವರು ಸೈಕಲ್ ಅಥವಾ ಕುದುರೆಗಾಡಿಗಳನ್ನು ಬಳಸಲಿಲ್ಲ. ಅವರು ಎಂದಿನಂತೆ ಬುಲೆಟ್‌ಪ್ರೂಫ್ ಕಾರಿನಲ್ಲಿಯೇ ಪ್ರಯಾಣಿಸಿದರು. ಆ ಸಮಯದಲ್ಲಿ ಎಲ್ಲೆಡೆ ವಾದ ಪ್ರತಿವಾದಗಳು ಕೇಳಿ ಬಂದಿದ್ದವು. ಅದೇನೇ ಇರಲಿ. ಈ ರಸ್ತೆಗಳಲ್ಲಿ ಇನ್ನೊಂದು ಬಾರಿ ವಾಹನ ಚಲಾಯಿಸಲು ಅನುಮತಿ ನೀಡಲಾಗಿತ್ತು. ಸೂಪರ್ ಮ್ಯಾನ್ ಸಿನಿಮಾ ಖ್ಯಾತಿಯ ಕ್ರಿಸ್ಟೋಫರ್ ರೀವ್ ಅಬಿನಯದ ಸಿನಿಮಾ ಶೂಟಿಂಗಿಗೆಂದು ಅನುಮತಿ ನೀಡಲಾಗಿತ್ತು. ಅದು ಬಿಟ್ಟರೆ ಯಾರಿಗೂ ವಾಹನ ಚಲಾಯಿಸಲು ಅನುಮತಿ ನೀಡಿಲ್ಲ.
Advertisement
ಹರ್ಷವರ್ಧನ್ ಸುಳ್ಯ