ಚಾಮರಾಜನಗರ: ಶಾಲಾ ಮಕ್ಕಳಿಗೆ, ಪ್ರಕೃತಿ ಶಿಕ್ಷಣ ನೀಡುವ ಮುಖ್ಯ ಉದ್ದೇಶದೊಂದಿಗೆ ಅರಣ್ಯ ಇಲಾಖೆಯು ರಾಜ್ಯದ ವಿವಿಧ ಸಂರಕ್ಷಿತ ಪ್ರದೇಶಗಳಲ್ಲಿ ಪ್ರಕೃತಿ ಶಿಬಿರಗಳನ್ನು ನಿರ್ಮಿಸಿದೆ. ಕಾವೇರಿ ವನ್ಯಜೀವಿಧಾಮದಲ್ಲಿರುವ ಮಲೆ ಮಹದೇಶ್ವರ ಬೆಟ್ಟದ ಗೋಪಿನಾಥಂನಲ್ಲೂ ಪ್ರಕೃತಿ ಶಿಬಿರ ನಿರ್ಮಿಸಿದ್ದು ಅದನ್ನೀಗ ಜಂಗಲ್ ಲಾಡ್ಜಸ್ ರೆಸಾರ್ಟ್‌ಗೆ ಪ್ರವಾಸೋದ್ಯಮ ಉದ್ದೇಶಕ್ಕಾಗಿ ನೀಡಲಾಗುತ್ತಿದೆ. ಈ ಶಿಬಿರದ ಪರಿವರ್ತನೆ, ಕಾವೇರಿ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ವಲಯ ಅಧಿಸೂಚನೆಯ ಉಲ್ಲಂಘನೆಯಾಗಿದೆ.
ಗ್ರಾಮೀಣ ಭಾಗದ ಮಕ್ಕಳಿಗೆ ಪ್ರಕೃತಿ ಮತ್ತು ವನ್ಯಜೀವಿ ಸಂರಕ್ಷಣಾ ಶಿಕ್ಷಣವನ್ನು ನೀಡುವ ಗುರಿಯೊಂದಿಗೆ 2015-16ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಚಿಣ್ಣರ ವನದರ್ಶನ’ ಎಂಬ ಕಾರ್ಯಕ್ರಮವನ್ನು ಆರಂಭಿಸಲು ಸಹ ಆದೇಶ ಹೊರಡಿಸಿತು (ಆದೇಶ ಸಂ. ಅಪಜೀ88 ಎಫ್ಎಪಿ 2015 ದಿನಾಂಕ 15-07-2015). ಈ ಉಚಿತ ಕಾರ್ಯಕ್ರಮವನ್ನು, ಕಾಡಂಚಿನ ಮತ್ತು ಸಂರಕ್ಷಿತ ಪ್ರದೇಶಗಳ ಸುತ್ತಮುತ್ತ ವಾಸಿಸುವ ಗ್ರಾಮೀಣ ಮಕ್ಕಳನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿತ್ತು. ಈ ಚಟುವಟಿಕೆಗಳನ್ನು ಕೈಗೊಳ್ಳಲು ಮೂಕಾಂಬಿಕಾ ವನ್ಯಜೀವಿಧಾಮದ ಅನೆಝರಿ, ಸೋಮೇಶ್ವರ ವನ್ಯಜೀವಿಧಾಮದ ಸೀತಾನದಿ ಪ್ರಕೃತಿ ಶಿಬಿರ, ಭೀಮಘಡ ವನ್ಯಜೀವಿಧಾಮದ ಪ್ರಕೃತಿ ಶಿಬಿರ, ಕಾವೇರಿ ವನ್ಯಜೀವಿಧಾಮದ ಗೋಪಿನಾಥಂ, ಶೆಟ್ಟಿಹಳ್ಳಿ ವನ್ಯಜೀವಿಧಾಮದ ಸಕ್ರೆಬೈಲ್ ಮತ್ತಿತರ ಪ್ರಕೃತಿ ಶಿಬಿರಗಳನ್ನು ಗುರುತಿಸಲಾಗಿತ್ತು. ಈ ಪ್ರಕೃತಿ ಶಿಬಿರಗಳನ್ನು ಅಭಿವೃದ್ಧಿಪಡಿಸಲು ಬೇಕಾದ ಎಲ್ಲಾ ಹಣವನ್ನು ಕರ್ನಾಟಕ ಅರಣ್ಯ ಇಲಾಖೆ ಭರಿಸಿತ್ತು.
ಇದನ್ನೂ ಓದಿ:ಕಬ್ಬನ್ ಉದ್ಯಾನದಲ್ಲಿ ವಾಹನ ಸಂಚಾರ ನಿಷೇಧ?
ಆದರೆ, ಕೆಲವು ವರ್ಷಗಳಿಂದ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ (ಜೆಎಲ್ಆರ್) ಸಂಸ್ಥೆ ಅಕ್ರಮವಾಗಿ ಈ ಪ್ರಕೃತಿ ಶಿಬಿರಗಳನ್ನು ಅಗತ್ಯ ಅನುಮತಿಗಳಿಲ್ಲದೆ ಪ್ರವಾಸೋದ್ಯಮ ರೆಸಾರ್ಟ್ ಳಾಗಿ ಪರಿವರ್ತಿಸುತ್ತಿದೆ. ರಾಜ್ಯದ ಹಲವು ವನ್ಯಜೀವಿಧಾಮಗಳಲ್ಲಿರುವ ಸೀತಾನದಿ, ಭೀಮಘಡ, ಸಕ್ರೆಬೈಲ್, ಅನೆಝರಿ ಮತ್ತು ಶಿಬಿರಗಳನ್ನುಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿರುವ ಭಗವತಿ ಪ್ರಕೃತಿ ಶಿಬಿರವನ್ನು ಈಗಾಗಲೇ ವಾಣಿಜ್ಯ ಪ್ರವಾಸೋದ್ಯಮ ಘಟಕಗಳಾಗಿ ಪರಿವರ್ತಿಸಲಾಗಿದೆ.
ಈ ಶಿಬಿರಗಳು ವನ್ಯಜೀವಿಧಾಮ ಅಥವಾ ರಾಷ್ಟ್ರೀಯ ಉದ್ಯಾನದೊಳಗೆ ಇರುವುದರಿಂದ ಇಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ ಪಡೆಯುವ ಅಗತ್ಯವಿದೆ. ಅಲ್ಲದೆ, ಗ್ರಾಮೀಣ ಮಕ್ಕಳಿಗೆ ಪ್ರಕೃತಿ ಶಿಕ್ಷಣವನ್ನು ನೀಡಲು, ಸಾರ್ವಜನಿಕ ಹಣವನ್ನು ಬಳಸಿಕೊಂಡು ಈ ಶಿಬಿರಗಳನ್ನು ನಿರ್ಮಿಸಲಾಗಿದೆ, ಮತ್ತು ಇವುಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಅಭಿವೃದ್ದಿಪಡಿಸುವುದರಿಂದ ಸ್ಥಳೀಯ ಮಕ್ಕಳು ತಮ್ಮ ಸನಿಹದಲ್ಲೇ ಇರುವ ಪ್ರಕೃತಿ ಮತ್ತು ವನ್ಯಜೀವಿಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶದಿಂದ ವಂಚಿಸಲಾಗುತ್ತಿದೆ.
ಈಗ ಗೋಪಿನಾಥಂ ಶಿಬಿರಕ್ಕೂ ಕುತ್ತು: ಈ ವಾಣಿಜ್ಯ ಚಟುವಟಿಕೆಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಶಿಬಿರವೆಂದರೆ, ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿಧಾಮದಲ್ಲಿರುವ ಗೋಪಿನಾಥಂ ಪ್ರಕೃತಿ ಶಿಬಿರ. ಇದು ಹಿಂದುಳಿದ ಪ್ರದೇಶವಾಗಿದ್ದು, ಜನರು, ವಿಶೇಷವಾಗಿ ಮಕ್ಕಳು, ಕಾಡುಗಳ ಮಧ್ಯೆ ಹೆಚ್ಚು ವಾಸಿಸುತ್ತಿರುವುದರಿಂದ ಮೂಲಭೂತ ಶಿಕ್ಷಣ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಅವಕಾಶಗಳು ಬಹಳ ಕಡಿಮೆ. ಕಾವೇರಿ ಮತ್ತು ಮಲೈ ಮಹದೇಶ್ವರ ವನ್ಯಜೀವಿಧಾಮಗಳಲ್ಲಿ ಮತ್ತು ಸುತ್ತಮುತ್ತ ವಾಸಿಸುವ ಮಕ್ಕಳು ಚಿಣ್ಣರ ವನದರ್ಶನ’ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೋಗಬಹುದಾದ ಏಕೈಕ ಸ್ಥಳ ಎಂದರೆ ಗೋಪಿನಾಥಂ ಶಿಬಿರ.
ಇದನ್ನೂ ಓದಿ:ದೇರೆಬೈಲು ಬಳಿಯ ವಸತಿ ಸಮುಚ್ಛಯವೊಂದರ ತಡೆಗೋಡೆ ಕುಸಿತ: ವಾಹನಗಳಿಗೆ ಹಾನಿ
ಈ ಶಿಬಿರವನ್ನು ಪ್ರವಾಸೋದ್ಯಮಕ್ಕಾಗಿ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್‌ಗೆ ಕೊಟ್ಟರೆ ಅದು ಆ ಪ್ರದೇಶದ ವನ್ಯಜೀವಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಈಗಾಗಲೇ ಕಾವೇರಿ ಮತ್ತು ಮಲೈ ಮಹದೇಶ್ವರ ವನ್ಯಜೀವಿಧಾಮಗಳು ಕಳ್ಳ ಬೇಟೆಯನ್ನು ಸೇರಿ ಹಲವು ಒತ್ತಡಗಳಿಂದ ನಲುಗುತ್ತಿವೆ. ಕಳ್ಳಬೇಟೆ ಮತ್ತು ವನ್ಯಜೀವಿಗಳಿಗಿರುವ ಇತರ ಅಪಾಯಗಳ ಬಗ್ಗೆ ಯುವ ಪೀಳಿಗೆಗೆ ಶಿಕ್ಷಣ ನೀಡಲು ಗೋಪಿನಾಥಂ ಪ್ರಕೃತಿ ಶಿಬಿರವನ್ನು ಅತ್ಯುತ್ತಮವಾಗಿ ಉಪಯೋಗಿಸಿ ಕೊಳ್ಳಬಹುದು ಎಂಬುದು ಪರಿಸರ ತಜ್ಞರ ಅಭಿಮತ.
ಪರಿಸರ ಸೂಕ್ಷ್ಮ ವಲಯದ ಉಲ್ಲಂಘನೆ
ಈ ಶಿಬಿರದ ಪರಿವರ್ತನೆ, ಕಾವೇರಿ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ವಲಯ ಅಧಿಸೂಚನೆಯ ಉಲ್ಲಂಘನೆಯಾಗಿದೆ. ಪರಿಸರ-ಸೂಕ್ಷ್ಮ ವಲಯ ಅಧಿಸೂಚನೆಯಲ್ಲಿ ನಿಷೇಧಿತ / ನಿಯಂತ್ರಿಸಲಾದ ಚಟುವಟಿಕೆಗಳ ಪಟ್ಟಿಯ 11 ನೇ ಅಂಶ ಹೀಗೆ ತಿಳಿಸಿದೆ ಸಂರಕ್ಷಿತ ಪ್ರದೇಶದ ಗಡಿಯ ಒಂದು ಕಿಲೋಮೀಟರ್ ಒಳಗೆ ಅಥವಾ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ (ಯಾವುದು ಹತ್ತಿರವೊ ಅದು) ಪರಿಸರ-ಪ್ರವಾಸೋದ್ಯಮ ಚಟುವಟಿಕೆಗಳಿಗಾಗಿ ಸಣ್ಣ ತಾತ್ಕಾಲಿಕ ರಚನೆಗಳನ್ನು ಹೊರತುಪಡಿಸಿ ಯಾವುದೇ ಹೊಸ ವಾಣಿಜ್ಯ ಹೋಟೆಲ್ಗಳು ಮತ್ತು ರೆಸಾರ್ಟ್ಗಳನ್ನು ನಿರ್ಮಿಸಲು ಅನುಮತಿ ನೀಡುವಂತಿಲ್ಲ ಜೆಎಲ್ಆರ್ ಸ್ಪಷ್ಟವಾಗಿ ವಾಣಿಜ್ಯ ರೆಸಾರ್ಟ್ ಚಟುವಟಿಕೆಯಾಗಿದ್ದು, ಪರಿಸರ-ಪ್ರವಾಸೋದ್ಯಮ ಚಟುವಟಿಕೆಯಲ್ಲ. ಅಲ್ಲದೆ, ಗೋಪಿನಾಥಂನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಬೇಕಾಗಿದ್ದರೂ ಸಹ ಪರಿಸರ ಸೂಕ್ಷ್ಮ ವಲಯ ಸಮಿತಿಯಿಂದ ಅನುಮತಿ ಪಡೆಯಬೇಕು.
ಇದನ್ನೂ ಓದಿ: ದಸರಾ ಗಜಪಡೆ ಆಯ್ಕೆ ಪ್ರಕ್ರಿಯೆ ಶುರು
ಇದೇ ಆವರಣದಲ್ಲಿ ಎರಡು ಅರಣ್ಯ ವಿಶ್ರಾಂತಿ ಗೃಹಗಳಿವೆ. ಈ ಅರಣ್ಯ ವಿಶ್ರಾಂತಿ ಗೃಹಗಳನ್ನು ಜೆಎಲ್ಆರ್ಗೆ ನೀಡುವುದು, ಡಬ್ಲ್ಯೂಪಿ 202ರ ಐಎ 2354-2355ರಲ್ಲಿ ಸುಪ್ರಿಂ ಕೋರ್ಟ್ ದಿನಾಂಕ 05-07-2018ರಂದು ನೀಡಿದ ಆದೇಶದ ಉಲ್ಲಂಘನೆಯಾಗಿದೆ.
ಗೋಪಿನಾಥಂ ಶಿಬಿರವನ್ನು ಹಸ್ತಾಂತರಿಸಲು ಜೆಎಲ್ಆರ್ ಜೊತೆಗಿನ ಯಾವುದೇ ಒಪ್ಪಂದವನ್ನು ಅರಣ್ಯ ಇಲಾಖೆ ತಕ್ಷಣವೇ ರದ್ದುಗೊಳಿಸಬೇಕು. ಮತ್ತು ಕೂಡಲೇ ಜೆಎಲ್ಆರ್ಗೆ ನೀಡಲಾದ ಎಲ್ಲಾ ಪ್ರಕೃತಿ ಶಿಬಿರಗಳನ್ನು ಹಿಂದಕ್ಕೆ ಪಡೆದು ಪ್ರಕೃತಿ ಶಿಕ್ಷಣ ಉದ್ದೇಶಗಳಿಗಾಗಿ, ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಮಾತ್ರ ಬಳಸಬೇಕು ಎನ್ನುತ್ತಾರೆ ಪರಿಸರವಾದಿ ಪ್ರಮೋದ್.
ಕೆ.ಎಸ್. ಬನಶಂಕರ ಆರಾಧ್ಯ