Advertisement

ನೈಸರ್ಗಿಕ ಜಲ ಸಂರಕ್ಷಣೆ ಮೊದಲ ಆದ್ಯತೆ

02:20 PM May 14, 2019 | Team Udayavani |

ಹಾವೇರಿ: ಜಿಲ್ಲೆಯಲ್ಲಿ ಈ ವರ್ಷ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಬಳಸಿಕೊಂಡು ನೈಸರ್ಗಿಕ ಜಲ ಸಂರಕ್ಷಣೆ ಕಾಮಗಾರಿಗಳನ್ನು ಕೈಗೊಳ್ಳಲು ಆದ್ಯತೆ ನೀಡಲಾಗುವುದು. ತನ್ಮೂಲಕ ಕೆರೆ-ಕಟ್ಟೆಗಳ ಅಭಿವೃದ್ಧಿಗೆ ಜಿಪಂ ಮುಂದಾಗಿದೆ ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಲೀಲಾವತಿ ಹೇಳಿದರು.

Advertisement

ಹೊಸಕಿತ್ತೂರು ಗ್ರಾಮ ಪಂಚಾಯಿತಿಯ ಬೈಲಮಾದಪುರ ರಸ್ತೆಯಲ್ಲಿರುವ ಹೊಸಕಿತ್ತೂರು ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿ ಅವರು ಕೂಲಿಕಾರರನ್ನುದ್ದೇಶಿಸಿ ಮಾತನಾಡಿದರು.

ಜಿಲ್ಲೆಯು ಪದೇ ಪದೇ ಬರ ಪರಿಸ್ಥಿತಿ ಎದುರಿಸುತ್ತಿದ್ದು ಜನ, ಜಾನಾವಾರುಗಳು ವರ್ಷದಿಂದ ವರ್ಷಕ್ಕೆ ಸಂಕಷ್ಟಕ್ಕೆ ಸಿಲುಕುತ್ತಿವೆ. ಜಲ ಮೂಲಗಳು ಕಡಿಮೆಯಾಗುತ್ತಿದ್ದು ಕೆರೆ, ಕಟ್ಟೆಗಳಿಗೆ ಹರಿದು ಬರುವ ನೀರಿನ ಮಾರ್ಗಗಳು, ಕಾಲುವೆಗಳು ಹೂಳು ಹಾಗೂ ಗಿಡ ಗಂಟಿಗಳಿಂದ ಮುಚ್ಚಿ ಹೋಗಿವೆ. ಇದರಿಂದಾಗಿ ಕೆರೆ- ಕಟ್ಟೆಗಳಲ್ಲಿ ನೀರು ಕಾಣದಾಗಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುತ್ತಿದೆ. ಇದರ ಜೊತೆಗೆ ಗ್ರಾಮೀಣ ಪ್ರದೇಶದ ಕೂಲಿಕಾರರು ಉದ್ಯೋಗ ಅರಸಿಕೊಂಡು ನಗರ, ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಸಂಕಷ್ಟದ ಪರಿಸ್ಥಿತಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಳ್ಳಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಕೂಲಿಕಾರರೊಂದಿಗೆ ರೋಜಗಾರ್‌ ದಿನ ಆಚರಿಸಿ, ಕಾರ್ಮಿಕರಿಗೆ ಉದ್ಯೋಗ ಚೀಟಿ ವಿತರಿಸಲಾಯಿತು.

ತಾಪಂ ಕಾರ್ಯ ನಿರ್ವಹಣಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವಲಸೆ ತಪ್ಪಿಸಿಲು ತಾಲೂಕಿನಲ್ಲಿ ನೀರಿನ ಮೂಲಗಳನ್ನು ಉಳಿಸಿಕೊಳ್ಳುವುದು, ಕೆರೆ-ಕಟ್ಟೆಗಳನ್ನು ಅಭಿವೃದ್ಧಿಪಡಿಸಿ ನೀರು ನಿಲ್ಲುವಂತೆ ಮಾಡುವುದು ಅತೀ ಅವಶ್ಯಕವಾಗಿದೆ. ಹೀಗಾಗಿ ಈ ವರ್ಷ ತಾಲೂಕಿನಲ್ಲಿ ನೈಸರ್ಗಿಕ ಜಲ ಸಂರಕ್ಷಣೆ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಲು ನಿರ್ಧರಿಸಿದ್ದು, ಇದರಿಂದ ಎರಡು ಬಗೆಯ ಪ್ರಯೋಜನ ಆಗಲಿದೆ. ಜಲಮೂಲಗಳನ್ನು ಅಭಿವೃದ್ಧಿಪಡಿಸುವುದು ಒಂದಡೆಯಾದರೆ ಮತ್ತೂಂದಡೆ ಹೆಚ್ಚು ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಕೊಟ್ಟಂತಾಗಲಿದೆ. ಕೂಲಿಕಾರರು ಉದ್ಯೋಗಕ್ಕಾಗಿ ಬೇರೆಡೆ ವಲಸೆ ಹೋಗುವುದನ್ನು ತಪ್ಪಿಸಿದಂತಾಗುತ್ತದೆ ಎಂದರು.

Advertisement

ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಸ್ಥಳೀಯವಾಗಿ ಉದ್ಯೋಗ ದೊರೆಯುವಂತೆ ಮಾಡಲು ತಾಪಂ ಬದ್ಧವಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಸಾಮೂಹಿಕವಾಗಿ ಹೆಚ್ಚು ಕೂಲಿಕಾರರು ಪಾಲ್ಗೊಳ್ಳುವಂಥ ಕಾಮಗಾರಿಗಳನ್ನು ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ಈಗಾಗಲೇ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೆರೆಗಳ ಹೂಳೆತ್ತುವುದು, ಗೋ ಕಟ್ಟೆಗಳ ಅಭಿವೃದ್ಧಿ, ಕೃಷಿ ಹೊಂಡ, ಬದು ನಿರ್ಮಾಣ, ಕಲ್ಯಾಣಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು ಟಿ.ಆರ್‌. ಮಲ್ಲಾಡದ, ಜಿಲ್ಲಾ ಪಂಚಾಯಿತಿ ಅಧಿಕಾರಿ ಮಹಾಂತೇಶ ನರೇಗಲ್ಲ, ದೀಪಕ್‌ ನಾಯ್ಕ, ತಾಲೂಕು ಸಂಯೋಜಕ ಗಿರೀಶ ಬೆನ್ನೂರು ಹಾಗೂ ಪಂಚಾಯಿತಿ ಸಿಬ್ಬಂದಿ ವರ್ಗದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next