Advertisement

ಜೀವಜಲದ ಬವಣೆಗೆ ಝರಿ ನೀರು ಪರಿಹಾರ?

09:30 AM Apr 16, 2018 | Team Udayavani |

ಕಡಬ: ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನೇ ಆಶ್ರಯಿಸುವ ವ್ಯವಸ್ಥೆಗೆ ಕಡಬ ಪರಿಸರದ ಪಂಚಾಯತ್‌ಗಳೂ ಇದಕ್ಕೆ ಹೊರತಾಗಿಲ್ಲ. ಆದರೆ ಕೊಳವೆಬಾವಿಗಳು ಬತ್ತಿಹೋಗುತ್ತಿರುವುದು ಮತ್ತು ಹೊಸದಾಗಿ ಕೊರೆದ ಕೊಳವೆ ಬಾವಿಗಳು ನೀರಿಲ್ಲದೆ ವಿಫಲವಾಗುತ್ತಿರುವುದು ಎಲ್ಲರಿಗೂ ಸವಾಲಾಗಿ ಪರಿಣಮಿಸಿವೆ. ಈ ಸಂಕಷ್ಟ ಸ್ಥಿತಿಯಲ್ಲಿ ಕುಡಿಯುವ ನೀರಿಗಾಗಿ ಪರ್ಯಾಯ ವ್ಯವಸ್ಥೆ ಹುಡುಕುವುದು ಅನಿವಾರ್ಯವಾಗಿರುವಾಗ ಬಿಸಲೆ ಘಾಟಿಯ ಝರಿಯಲ್ಲಿ ಪ್ರಾಕೃತಿಕವಾಗಿ ಹರಿಯುವ ನೀರನ್ನು ಬಳಕೆ ಮಾಡುವ ಮಹತ್ವಾಕಾಂಕ್ಷಿ ಯೋಜನೆ ಆಶಾದಾಯಕವಾಗಿ ಗೋಚರಿಸುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದಿಂದ 13 ಕಿ.ಮೀ. ದೂರದಲ್ಲಿ ಸಮುದ್ರ ಮಟ್ಟದಿಂದ 360.54 ಮೀ. ಎತ್ತರದಲ್ಲಿರುವ ಝರಿ ನೀರಿನ ತೊರೆಯಲ್ಲಿ ಕಡು ಬೇಸಗೆಯಲ್ಲೂ ಸಮೃದ್ಧ ನೀರಿದೆ. ಇದೇ ನೀರನ್ನು ಪೈಪ್‌ಲೈನ್‌ ಮೂಲಕ ತಗ್ಗು ಪ್ರದೇಶಕ್ಕೆ ಹರಿಸಿ ಉಪಯೋಗಿಸಲು ಉದ್ದೇಶಿಸಿರುವುದೇ ಮರ್ದಾಳ ಝರಿ ನೀರು ಯೋಜನೆ.

Advertisement

ನೀರು ಪೂರೈಕೆ ಹೊರೆ
ಕಡಬ ತಾಲೂಕಿನ ವ್ಯಾಪ್ತಿಯಲ್ಲಿರುವ ಗ್ರಾ.ಪಂ.ಗಳು ಕುಡಿಯುವ ನೀರು ಪೂರೈಕೆಗಾಗಿ ಕೊಳವೆ ಬಾವಿಗಳನ್ನೇ ಆಶ್ರಯಿಸಿವೆ. ಇಲ್ಲಿನ 4 ಗ್ರಾ.ಪಂ.ಗಳ ಕುಡಿಯುವ ನೀರಿನ ವ್ಯವಸ್ಥೆಯ ಅಂಕಿ ಅಂಶಗಳನ್ನು ಪರಿಶೀಲಿಸಿದಾಗ 120 ಕೊಳವೆ ಬಾವಿಗಳಿಗೆ 600ಕ್ಕಿಂತ ಹೆಚ್ಚು ಅಶ್ವಶಕ್ತಿಯ ಪಂಪ್‌ ಗಳನ್ನು ಅಳವಡಿಸಿ, ನೀರು ಪೂರೈಸಲು ಗ್ರಾ.ಪಂ.ಗಳಿಗೆ ವಾರ್ಷಿಕ 30 ಲಕ್ಷ ರೂ.ಗಳಿಗೂ ಹೆಚ್ಚು ವೆಚ್ಚವಾಗುತ್ತಿದೆ. 12 ಲಕ್ಷ ರೂ. ಸಿಬಂದಿ ವೇತನ, 15 ಲಕ್ಷ ರೂ.ಗಳಿಗೂ ಮಿಕ್ಕಿ ದುರಸ್ತಿ ಖರ್ಚು ಮಾಡಿದರೂ 16ರಿಂದ 18 ಸಾವಿರ ಜನರಿಗಷ್ಟೇ ಕುಡಿಯುವ ನೀರು ಪೂರೈಸಲು ಸಾಧ್ಯವಾಗಿದೆ. 

ಇತ್ತೀಚೆಗೆ ಬಹುತೇಕ ಕೊಳವೆಬಾವಿಗಳು ವಿಫಲವಾಗುತ್ತಿವೆ. ಹೀಗಾಗಿ, ನೈಸರ್ಗಿಕವಾಗಿ ದೊರೆಯುವ ಬಿಸಲೆ ಘಾಟ್‌ನ ಝರಿ ನೀರನ್ನು ಬಳಸುವ ಯೋಜನೆಯನ್ನು 25 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಸರಕಾರ ಮುಂದಾಗಬೇಕು. ಕಳೆದ 8 ವರ್ಷಗಳಿಂದ ಬಿಸಲೆ ಘಾಟ್‌ನ ಝರಿ ನೀರಿನ ಲಭ್ಯತೆಯನ್ನು ಅಧ್ಯಯನ ಮಾಡಿ 3 ವರ್ಷಗಳ ಹಿಂದೆ ಡಾ| ವಿಜಯಪ್ರಕಾಶ್‌ ಅವರು ದ.ಕ. ಜಿ.ಪಂ. ಸಿಇಒ ಆಗಿದ್ದ ವೇಳೆ ಅವರಿಗೆ ವರದಿ ಸಲ್ಲಿಸಲಾಗಿತ್ತು. ಬಳಿಕ ಸಿಇಒ ಆಗಿ ಬಂದ ತುಳಸಿ ಮದ್ದಿನೇನಿ ವಿಶೇಷ ಆಸಕ್ತಿ ವಹಿಸಿ ಸಹಕಾರಿ ನೆಲೆಯಲ್ಲಿ ಯೋಜನೆಯನ್ನು ಜಾರಿಗೊಳಿಸಲು ಕರಡು ಸರ್ವೆ ನಡೆಸಿ ಅಂದಾಜುಪಟ್ಟಿ ತಯಾರಿಸಲು ವ್ಯವಸ್ಥೆ ಮಾಡಿದ್ದರು. ಆದರೆ, ಸರಕಾರದ ಮಟ್ಟದಲ್ಲಿ ಯಾವುದೇ ಉತ್ತೇಜನ ದೊರೆಯದೆ ಯೋಜನೆ ನನೆಗುದಿಗೆ ಬಿದ್ದಿದೆ.

ಸಹಕಾರಿ ನೆಲೆಯಲ್ಲಿ ಪ್ರಯತ್ನ
ಯೋಜನೆಯ ಅನುಷ್ಠಾನ ಸಮಿತಿಯ ಸಂಚಾಲಕ ಎ.ಪಿ. ಚೆರಿಯನ್‌ ಅವರ ನೇತೃತ್ವದಲ್ಲಿ ಯೋಜನೆಗೆ ಚಾಲನೆ ನೀಡುವುದಾಗಿ ನಿರ್ಧರಿಸಿ ಕಡಬದ ದುರ್ಗಾಂಬಿಕಾ ದೇವಸ್ಥಾನದ ಸಭಾಂಗಣ ದಲ್ಲಿ ಸಾರ್ವಜನಿಕರ ಸಭೆಯನ್ನು ಆಯೋಜಿಸಲಾಗಿತ್ತು. ಆ ಸಭೆಯಲ್ಲಿ ಪರ ವಿರೋಧ ವ್ಯಕ್ತವಾಗಿ ಕೊನೆಗೆ ಸಹಕಾರಿ ನೆಲೆಯಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳುವ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಸಹಕಾರಿ ಸಂಸ್ಥೆಗೆ ಪಾಲು ಬಂಡವಾಳ ಸಂಗ್ರಹದ ವಿಚಾರ ಬಂದಾಗ ನಿರೀಕ್ಷಿತ ಸಹಕಾರ ವ್ಯಕ್ತವಾಗಲಿಲ್ಲ. ಅಲ್ಲಿಗೆ ಯೋಜನೆ ಕೈಗೂಡುವ ಕನಸು ಮಂಕಾಯಿತು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೂ ಆಸಕ್ತಿ ತೋರದೆ ಯೋಜನೆ ನೆನೆಗುದಿಗೆ ಬಿದ್ದಿದೆ.

ಯೋಜನೆಯಿಂದಾಗುವ ಲಾಭ
ನಿರಂತರವಾಗಿ 24 ಗಂಟೆ ನೀರು ಪೂರೈಕೆ ಮಾಡಬಹುದು. ವಿದ್ಯುತ್‌ನ ಅಗತ್ಯವೂ ಇಲ್ಲ. ಇನ್ನಷ್ಟು ಕುಟುಂಬಗಳಿಗೆ ಖನಿಜಯುಕ್ತ ನೈಸರ್ಗಿಕ ಶುದ್ಧ ನೀರನ್ನು ನೀಡಬಹುದು. ಅಂತರ್ಜಲ ಮಟ್ಟ ಏರಿಕೆಯಾಗಲು ಪೂರಕ. ಅನಗತ್ಯ ಕೊಳವೆ ಬಾವಿಗಳ ಕೊರೆತಕ್ಕೂ ಕಡಿವಾಣ ಬೀಳುತ್ತದೆ. ಯೋಜನೆಗೆ ಸಂಬಂಧಿಸಿದ ಪೈಪ್‌ ಲೈನನ್ನು ಬಿಸಲೆ ಘಾಟ್‌ ನಿಂದ ಹಾದು ಬರುವ ಮುಖ್ಯರಸ್ತೆಯ ಪಕ್ಕದಲ್ಲೇ ಅಳವಡಿಸಿದರೆ ಪರಿಸರ ನಾಶವೂ ಆಗವುದಿಲ್ಲ.

Advertisement

ವಿದ್ಯುತ್‌ ಅಗತ್ಯವಿಲ್ಲದ ಯೋಜನೆ
ಅಡ್ಡಹೊಳೆ ಪ್ರದೇಶ ಸಮುದ್ರಮಟ್ಟದಿಂದ 360.54 ಮೀ. ಎತ್ತರದಲ್ಲಿದೆ. ಬಿಸಿಲೆ ಗಡಿ ಪ್ರದೇಶ 124.16 ಮೀ., ಕುಲ್ಕುಂದ 106.50 ಮೀ., ಕೈಕಂಬ 96.61 ಮೀ., ಬಿಳಿನೆಲೆ 98.86 ಮೀ., ನೆಟ್ಟಣ 84.14 ಮೀ., ಐತ್ತೂರು 101.48 ಮೀ., ಮರ್ದಾಳ 100.15 ಮೀ., ಕಡಬ 96.37 ಮೀ., ಹೊಸಮಠ ಸೇತುವೆ 58.24 ಮೀ., ಇಚ್ಲಂಪಾಡಿ ಸೇತುವೆ 99.85 ಮೀ. ಹಾಗೂ ಬೆಳಂದೂರು, ರಾಮಕುಂಜ, ನೆಲ್ಯಾಡಿ, ಗೋಳಿತೊಟ್ಟು ಪ್ರದೇಶಗಳು ತೊರೆಯ ಭಾಗದಿಂದ ಸರಾಸರಿ 200 ಮೀ. ಕೆಳಗೆ ಇವೆ. ವಿದ್ಯುತ್‌ನ ಅಗತ್ಯವಿಲ್ಲದೆ, ಯಾವ ಅಡೆತ ಡೆಯೂ ಇಲ್ಲದೆ ನೀರು ಸರಾಗವಾಗಿ ಹಾದು ಬರುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಆಸಕ್ತಿ ವಹಿಸಲಿ
ಸಹಕಾರಿ ನೆಲೆಯಲ್ಲಿ ಮಾದರಿ ಯೋಜನೆಯಾಗಿ ಜಾರಿ ಮಾಡಲು ಸಾಧ್ಯವಿದೆ. ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ. ಪರ್ಯಾಯ ವ್ಯವಸ್ಥೆ ಅನಿವಾರ್ಯ. ವಿದ್ಯುತ್‌ನ ಅಗತ್ಯವಿಲ್ಲದೆ ಪ್ರಾಕೃತಿಕವಾಗಿ ಲಭಿಸುವ ನೀರನ್ನು ಬಳಕೆ ಮಾಡುವುದು ಜಾಣತನ. ಅದಕ್ಕೆ ಇಚ್ಛಾಶಕ್ತಿ ಬೇಕು. ಯೋಜನೆಯ ಕುರಿತು ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಸಿಇಒ ಆಸಕ್ತಿ ವಹಿಸಿ ಕ್ರಮ ಕೈಗೊಳ್ಳಬೇಕಿದೆ.
– ಎ.ಪಿ. ಚೆರಿಯನ್‌ ಮರ್ದಾಳ, ಯೋಜನೆಯ ಅನುಷ್ಠಾನ ಸಮಿತಿಯ ಸಂಚಾಲಕ

— ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next