ದೇಶದಲ್ಲಿ ಪೂರೈಕೆಯಾಗುವ ನೈಸರ್ಗಿಕ ಅನಿಲ ಬೆಲೆಯ ನಿಗದಿಗೆ ರೂಪಿಸಲಾಗಿರುವ ಹೊಸ ಮಾನದಂಡಕ್ಕೆ ಕೇಂದ್ರ ಸಚಿವ ಸಂಪುಟ ತನ್ನ ಒಪ್ಪಿಗೆ ನೀಡಿದೆ. ಈ ಹೊಸ ವ್ಯವಸ್ಥೆಯಂತೆ ನೈಸರ್ಗಿಕ ಅನಿಲ ಬೆಲೆ ಪರಿಷ್ಕರಣೆಯು ಶನಿವಾರ ಜಾರಿಗೆ ಬರಲಿದೆ. ಇದರಿಂದಾಗಿ ದೇಶದಲ್ಲಿ ವಾಹನಗಳಿಗೆ ಬಳಸಲಾಗುತ್ತಿರುವ ಸಿಎನ್‌ಜಿ(ಕಂಪ್ರಸ್ಡ್ ನ್ಯಾಚುರಲ್ ಗ್ಯಾಸ್)ಬೆಲೆಯಲ್ಲಿ ಶೇ. 6-9ರಷ್ಟು ಮತ್ತು ಗೃಹ ಬಳಕೆಯ ಪಿಎನ್‌ಜಿ(ಪೈಪ್ಡ್ ನ್ಯಾಚುರಲ್ ಗ್ಯಾಸ್) ಬೆಲೆಯಲ್ಲಿ ಶೇ. 10ರಷ್ಟು ಇಳಿಕೆಯಾಗಲಿದೆ. ನೈಸರ್ಗಿಕ ಅನಿಲದ ಬೆಲೆಯನ್ನು ಕಚ್ಚಾ ತೈಲದ ಬೆಲೆಯೊಂದಿಗೆ ಸಂಯೋಜಿಸಲಾಗಿದ್ದು ಇನ್ನು ಮುಂದೆ ಈ ಹಿಂದಿನಂತೆ ಆರು ತಿಂಗಳ ಬದಲಾಗಿ ತಿಂಗಳಿಗೊಮ್ಮೆ ಕಚ್ಚಾತೈಲದ ಬೆಲೆಯನ್ನಾಧರಿಸಿ ನೈಸರ್ಗಿಕ ಅನಿಲದ ಬೆಲೆಯೂ ಪರಿಷ್ಕರಣೆಗೊಳ್ಳಲಿದೆ.
ಈ ಮೂಲಕ ನೈಸರ್ಗಿಕ ಅನಿಲ ಉತ್ಪಾದಿಸಿ, ಪೂರೈಸುವ ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಮತ್ತು ಗ್ರಾಹಕರ ಬಹುದಿನಗಳ ಬೇಡಿಕೆಗೆ ಕೇಂದ್ರ ಸರಕಾರ ಕೊನೆಗೂ ಸ್ಪಂದಿಸಿದೆ.
ಸದ್ಯ ದೇಶದಲ್ಲಿ ಉತ್ಪಾದನೆ ಮಾಡಲಾಗುವ ನೈಸರ್ಗಿಕ ಅನಿಲದ ಬೆಲೆಯನ್ನು ಅಮೆರಿಕ, ಕೆನಡಾ ಮತ್ತು ರಷ್ಯಾದಲ್ಲಿನ ಕಂಪನಿಗಳು ನಿಗದಿಪಡಿಸುವ ನೈಸರ್ಗಿಕ ಅನಿಲದ ಬೆಲೆಯ ಸರಾಸರಿಗನುಗುಣವಾಗಿ ಪ್ರತೀ ಆರು ತಿಂಗಳುಗಳಿಗೊಮ್ಮೆ ನಿಗದಿಪಡಿಸಲಾಗುತ್ತಿತ್ತು. ಇದರಿಂದಾಗಿ ದೇಶೀಯವಾಗಿ ಉತ್ಪಾದಿಸಲಾಗುವ ನೈಸರ್ಗಿಕ ಅನಿಲಕ್ಕೂ ಹೆಚ್ಚಿನ ಪ್ರಮಾಣದ ಬೆಲೆಯನ್ನು ಗ್ರಾಹಕರು ತೆರಬೇಕಾಗುತ್ತಿತ್ತು.
ಅಷ್ಟು ಮಾತ್ರವಲ್ಲದೆ ದೇಶದಲ್ಲಿ ಪೂರೈಕೆ ಮಾಡಲಾಗುವ ನೈಸರ್ಗಿಕ ಅನಿಲ ಬೆಲೆ ನಿಗದಿಯ ಅಧಿಕಾರವನ್ನು ಕೇಂದ್ರ ಸರಕಾರ ತನ್ನ ಸುಪರ್ದಿಯಲ್ಲಿ ಇರಿಸಿಕೊಂಡಿತ್ತು. ಇದರಿಂದಾಗಿ ಇಡೀ ಪ್ರಕ್ರಿಯೆ ಬಲು ಪ್ರಯಾಸಕಾರಿಯಾಗಿತ್ತಲ್ಲದೆ ತೈಲ ಕಂಪನಿಗಳು ಮತ್ತು ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳುವಂತಾಗಿತ್ತು. ಇದೀಗ ಸರಕಾರ ನೈಸರ್ಗಿಕ ಅನಿಲದ ಬೆಲೆ ನಿಗದಿಗೆ ಹೊಸ ವ್ಯವಸ್ಥೆಯನ್ನು ಪರಿಚಯಿಸುವ ಮೂಲಕ ತೈಲ ಕಂಪನಿಗಳು ಮತ್ತು ಗ್ರಾಹಕರಿಗೆ ಶುಭ ಸುದ್ದಿಯನ್ನು ನೀಡಿದೆ.
ದೇಶೀಯ ನೈಸರ್ಗಿಕ ತೈಲ ಮಾರುಕಟ್ಟೆಯಲ್ಲಿ ಸುಧಾರಣ ಕ್ರಮಗಳನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರಕಾರ ಈ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡಲು ದಿಟ್ಟ ಹೆಜ್ಜೆ ಇರಿಸಿದೆ. ಇನ್ನು ಮುಂದೆ ಪ್ರತೀ ತಿಂಗಳಿಗೊಮ್ಮೆ ಬೆಲೆ ನಿಗದಿ ಪ್ರಕ್ರಿಯೆ ನಡೆಯಲಿರುವುದರಿಂದ ಬೆಲೆ ನಿಗದಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿನ ಬೆಲೆ ಏರಿಳಿತಗಳಿಂದ ದೇಶದ ನೈಸರ್ಗಿಕ ಅನಿಲ ಗ್ರಾಹಕರಿಗೆ ರಕ್ಷಣೆ ಲಭಿಸಲಿದೆಯಲ್ಲದೆ ಉತ್ಪಾದಕ ಕಂಪನಿಗಳು ಎದುರಿಸುತ್ತಿದ್ದ ಸಮಸ್ಯೆಗೂ ಪರಿಹಾರ ಲಭಿಸಲಿದೆ. ಈ ಮಾನದಂಡದ ಮಾದರಿಯಲ್ಲಿಯೇ ವಿಶ್ವದ ಹಲವು ದೇಶಗಳಲ್ಲಿ ನೈಸರ್ಗಿಕ ಅನಿಲ ಬೆಲೆಯನ್ನು ನಿಗದಿಪಡಿಸಲಾಗುತ್ತಿದೆ. ಈ ಮಾದರಿಯ ಬೆಲೆ ಪರಿಷ್ಕರಣೆಯಿಂದ ಬಳಕೆದಾರರಿಗೆ ಮತ್ತು ಜಾಗತಿಕ ವಹಿವಾಟಿಗೂ ಅನುಕೂಲವಾಗಲಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ಇದೇ ವೇಳೆ ಕೇಂದ್ರ ಸರಕಾರ ಪ್ರಾಥಮಿಕ ಹಂತದ ಇಂಧನ ಮಿಶ್ರಣದಲ್ಲಿ ಹಾಲಿ ಇರುವ ಶೇ. 6.5ರಷ್ಟು ನೈಸರ್ಗಿಕ ಇಂಧನದ ಪ್ರಮಾಣವನ್ನು ಮುಂದಿನ ಏಳು ವರ್ಷಗಳ ಅವಧಿಯಲ್ಲಿ ಶೇ. 15ರಷ್ಟು ಹೆಚ್ಚಿಸುವ ಗುರಿಯನ್ನು ಹಾಕಿಕೊಂಡಿದೆ. ಇದರಿಂದ ನೈಸರ್ಗಿಕ ಅನಿಲ ಬಳಕೆಯನ್ನು ಮತ್ತಷ್ಟು ವಿಸ್ತರಿಸುವ ಮತ್ತು ಆ ಮೂಲಕ ಮಾಲಿನ್ಯದ ಪ್ರಮಾಣವನ್ನು ಸಾಧ್ಯವಾದಷ್ಟು ಕನಿಷ್ಠ ಮಟ್ಟಕ್ಕೆ ತಗ್ಗಿಸುವ ಇರಾದೆಯನ್ನು ಹೊಂದಿದೆ. ಕೇಂದ್ರದ ಹಾಲಿ ನಿರ್ಧಾರದಿಂದ ದೇಶದಲ್ಲಿ ನೈಸರ್ಗಿಕ ಅನಿಲ ಬಳಕೆಗೆ ಇನ್ನಷ್ಟು ಹೆಚ್ಚಿನ ಉತ್ತೇಜನ ಲಭಿಸಲಿದ್ದು ನಿಗದಿತ ಗುರಿಯನ್ನು ಸಾಧಿಸಲು ಸಹಾಯಕವಾಗಲಿದೆ.
ಸರಕಾರದ ಈ ನಿರ್ಧಾರ ಅತ್ಯಂತ ಸಕಾಲಿಕವಾಗಿದ್ದು ದೂರದೃಷ್ಟಿಯಿಂದ ಕೂಡಿದ್ದಾಗಿದೆ. ಆದರೆ ಸರಕಾರ ನೈಸರ್ಗಿಕ ಅನಿಲ ಬೆಲೆ ನಿಗದಿಯ ಸಂಪೂರ್ಣ ಅಧಿಕಾರವನ್ನು ಈಗ ಸರಕಾರಿ ಸ್ವಾಮ್ಯದ ತೈಲ ಉತ್ಪಾದಕ ಕಂಪನಿಗಳಿಗೆ ಬಿಟ್ಟುಕೊಟ್ಟಿರುವುದರಿಂದ ಅದು ದುರುಪಯೋಗವಾಗದಂತೆ ಎಚ್ಚರ ವಹಿಸಬೇಕಿದೆ. ಇಲ್ಲವಾದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ನೆಪವೊಡ್ಡಿ ನೈಸರ್ಗಿಕ ಅನಿಲದ ಬೆಲೆಯನ್ನೂ ಪದೇ ಪದೆ ಹೆಚ್ಚಿಸುವ ಮೂಲಕ ಈ ನಿರ್ಧಾರದ ಮೂಲೋದ್ದೇಶವನ್ನೇ ಕಂಪನಿಗಳು ಬುಡಮೇಲು ಮಾಡುವ ಸಾಧ್ಯತೆ ಇದೆ. ಈ ವಿಚಾರದಲ್ಲಿ ಸರಕಾರ ತೈಲ ಕಂಪನಿಗಳ ಮೇಲೆ ಒಂದಿಷ್ಟು ನಿಗಾ ಇರಿಸಲೇಬೇಕು.