Advertisement

“ಪ್ರಾಕೃತಿಕ ವಿಕೋಪ; ತಾಲೂಕು ಮಟ್ಟದಲ್ಲಿ ತಂಡ’

09:49 AM May 03, 2019 | Team Udayavani |

ಮಂಗಳೂರು: ಕಳೆದ ಮುಂಗಾರಿನಲ್ಲಿ ಜಿಲ್ಲೆಯ ಕೆಲವೆಡೆ ಪ್ರಾಕೃತಿಕ ವಿಕೋಪ ಸಂಭವಿಸಿದ ಹಿನ್ನೆಲೆಯಲ್ಲಿ, ಪ್ರಸಕ್ತ ಸಾಲಿನಲ್ಲಿ ಸಮಸ್ಯೆ ಎದುರಾಗದಂತೆ ತಾಲೂಕು ಮಟ್ಟದಲ್ಲಿ ತಹಶೀಲ್ದಾರರ ನೇತೃತ್ವದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಆದೇಶಿಸಿದ್ದಾರೆ.

Advertisement

ಗುರುವಾರ ನಡೆದ ವಿವಿಧ ಇಲಾಖೆ ಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಮಟ್ಟದಲ್ಲಿ ಸುಸಜ್ಜಿತ ಕಂಟ್ರೋಲ್‌ ರೂಂ ಈಗಾಗಲೇ ಇದೆ. ಕಳೆದ ವರ್ಷದ ವಿಕೋಪವನ್ನು ಗಮನದಲ್ಲಿರಿಸಿ ತಾಲೂಕು ಮಟ್ಟದಲ್ಲಿ ಒಳ್ಳೆಯ ಕೆಲಸಗಾರರನ್ನು ಗುರುತಿಸಿ ತಂಡ ರಚಿಸಿ, ಕಂಟ್ರೋಲ್‌ ರೂಂ ಮುಖಾಂತರ ಅಗತ್ಯ ಇರುವ ಕಡೆ ತಲುಪಲು ಸಾಧ್ಯವಾಗುವಂತೆ ನೆಟ್‌ವರ್ಕ್‌ ರಚಿಸುವಂತೆ ಸೂಚಿಸಿದರು.

ಅನಾಹುತ ಸಂಭವಿಸಿದಾಗ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು. ಅಗ್ನಿಶಾಮಕ, ಪೊಲೀಸ್‌ ಮತ್ತು ಸಂಬಂಧಪಟ್ಟ ಇತರ ರೊಂದಿಗೆ ತಾಲೂಕು ಮಟ್ಟದಲ್ಲಿ ತಂಡ ರಚಿಸಬೇಕು. ಈ ಹಿಂದೆ ಘಟಿಸಿದ್ದ ಪ್ರಕೃತಿ ವಿಕೋಪ ಮತ್ತು ಸದ್ಯದ ಪರಿಸ್ಥಿತಿ ಗಮನಿಸಿ ಕ್ರಮ ಕೈಗೊಳ್ಳಬೇಕು. ಕ್ರಮಗಳ ಬಗ್ಗೆ ಮೊದಲೇ ಪಟ್ಟಿ ಮಾಡಿ ರಬೇಕು. ಕಡಲ್ಕೊರೆತ ಕುರಿತಾಗಿಯೂ ಎಚ್ಚರಿಕೆ ವಹಿಸಬೇಕು ಎಂದರು.

ನಾಲೆ ತೆರವು ಮಾಡಿ
ಮನಪಾ ಮತ್ತು ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಮುಚ್ಚಿರುವ ನಾಲೆಗಳನ್ನು ತೆರವು ಗೊಳಿಸಬೇಕು. ಈ ಮಾದರಿಯ ಕೆಲಸಗಳಿಗೆ ಟೆಂಡರ್‌ ಕರೆಯಲು ನಿರ್ಬಂಧವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ಮಳೆಗಾಲದಲ್ಲಿ ಜೀವಹಾನಿ ಮತ್ತು ಹಾನಿ ಸಂಭವಿಸಿದರೆ 48 ಗಂಟೆಯೊಳಗೆ ಪರಿಹಾರ ನೀಡುವ ಅಧಿಕಾರವನ್ನು ತಹಶೀಲ್ದಾರ್‌ಗೆ ನೀಡಲಾಗಿದೆ, ವಿಳಂಬ ಸಲ್ಲದು ಎಂದರು.

ಅಗ್ನಿಶಾಮಕ ದಳ ಅಗತ್ಯ ಸಲಕರಣೆ ಗಳೊಂದಿಗೆ ಮಳೆಗಾಲ ಎದುರಿಸಲು ಸಜ್ಜಾಗಿದೆ ಎಂದು ಅಗ್ನಿಶಮನ ಅಧಿಕಾರಿಗಳು ವಿವರಿಸಿದರು. ರೆಡ್‌ ಕ್ರಾಸ್‌ ಸಂಸ್ಥೆಯು ನೂರು ಸ್ವಯಂಸೇವಕರೊಂದಿಗೆ ಜಿಲ್ಲಾಡಳಿತಕ್ಕೆ ಸಕಲ ನೆರವನ್ನು ನೀಡಲು ಸನ್ನದ್ಧವಾಗಿದೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ ಶರ್ಮಾ ಹೇಳಿದರು.

Advertisement

ಅಪರ ಜಿಲ್ಲಾಧಿಕಾರಿ ವೆಂಕಟಾಚಲ ಪತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್‌, ಪೊಲೀಸ್‌ ಉಪ ಆಯುಕ್ತ ಶ್ರೀನಿವಾಸ ಗೌಡ, ಸಹಾಯಕ ಆಯುಕ್ತರಾದ ರವಿಚಂದ್ರ ನಾಯಕ್‌, ಕೃಷ್ಣಮೂರ್ತಿ, ಅಗ್ನಿಶಾಮಕ ಆಯುಕ್ತ ಟಿ.ಎನ್‌. ಶಿವಶಂಕರ್‌ ಉಪಸ್ಥಿತರಿದ್ದರು.

ಶಾಲೆಗೆ ರಜೆ; ತಹಶೀಲ್ದಾರ್‌ಗೆ ಜವಾಬ್ದಾರಿ
ಮಳೆಗಾಲದಲ್ಲಿ ಸ್ಥಳೀಯವಾಗಿ ಮಕ್ಕಳ ಸುರಕ್ಷೆಯನ್ನು ಗಮನದಲ್ಲಿರಿಸಿ ತಹಶೀಲ್ದಾರ್‌ ಅವರು ಡಿಡಿಪಿಐ ಅಥವಾ ಬಿಇಒಗಳೊಂದಿಗೆ ಸಮಾಲೋಚಿಸಿ ಶಾಲೆಗಳಿಗೆ ರಜೆ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.  ಶಿರಾಡಿ, ಚಾರ್ಮಾಡಿಯಲ್ಲಿ ಗುಡ್ಡ ಕುಸಿತ ಮತ್ತಿತರ ಸಮಸ್ಯೆ ಎದುರಿಸಲು ಗಸ್ತು ವಾಹನವೊಂದನ್ನು ನಿಯೋಜಿಸಲು ಸೂಚಿಸಲಾಯಿತು. ಗುಡ್ಡ ಕುಸಿತಗಳು ಸಂಭವಿಸಿದರೆ ತುರ್ತು ನೆರವಿಗೆ ಸಜ್ಜಾಗಿ ಎಂದು ಪುತ್ತೂರು, ಬೆಳ್ತಂಗಡಿ ತಹಶೀಲ್ದಾರ್‌ ಮತ್ತು ಸಹಾಯಕ ಆಯುಕ್ತ ಕೃಷ್ಣಮೂರ್ತಿ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next