Advertisement

ತತ್‌ಕ್ಷಣ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಅಂಗಾರ

11:22 PM May 30, 2020 | Sriram |

ಸುಳ್ಯ: ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಾಲೂಕು ಮತ್ತು ಸ್ಥಳೀಯಾಡಳಿತ ಅಧಿಕಾರಿಗಳು ತತ್‌ಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದು ಶಾಸಕ ಎಸ್‌.ಅಂಗಾರ ಸೂಚಿಸಿದರು.

Advertisement

ತಾ.ಪಂ.ಸಭಾಂಗಣದಲ್ಲಿ ಮೇ 29ರಂದು ತನ್ನ ಅಧ್ಯಕ್ಷತೆಯಲ್ಲಿ ಜರಗಿದ ತಾಲೂಕು ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

ರಸ್ತೆ ಬದಿಯ ಅಪಾಯಕಾರಿ ಮರ, ಗೆಲ್ಲು ತೆರವು, ಚರಂಡಿ ದುರಸ್ತಿ ಸಹಿತ ಪೂರ್ವಭಾವಿ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮರ ತೆರವು ಸಂಬಂಧಿಸಿ 11 ದೂರುಗಳು ಬಂದಿದ್ದು, ಆ ಬಗ್ಗೆ ಕ್ರಮ ಜರಗಿಸಲು ಅರಣ್ಯ ಇಲಾಖೆಗೆ ನಿರ್ದೇಶಿಸಲಾಯಿತು. ಮಳೆ ಹಾನಿ ಪರಿಹಾರ ಕಾಮಗಾರಿ ಪ್ರಗತಿ ಬಗ್ಗೆ ಎಂಜಿನಿಯರ್‌ ಮಾಹಿತಿ ನೀಡಿದರು.

ಭಾಗಶಃ ಉಲ್ಲೇಖ ಬೇಡ
ಪ್ರಾಕೃತಿಕ ವಿಕೋಪದಿಂದ ಮನೆಗೆ ಭಾಗಶಃ ಹಾನಿ ಎಂದು ಅಧಿಕಾರಿಗಳು ವರದಿ ಸಲ್ಲಿಸಿದರೆ ಫಲಾನುಭವಿಗೆ ಅಲ್ಪ ಪರಿಹಾರ ಮಾತ್ರ ಸಿಗುತ್ತದೆ. ಗೋಡೆ, ಅಡಿಪಾಯ ಹಾನಿ ಉಂಟಾದರೆ ಹೊಸ ಮನೆಯೇ ಕಟ್ಟಬೇಕಾಗುತ್ತದೆ. ಹಾಗಾಗಿ ಭಾಗಶಃ ಎಂದು ವರದಿ ಸಲ್ಲಿಸದೆ ಪೂರ್ಣ ಹಾನಿ ಎಂದು ನಮೂದಿಸಿ ಎಂದು ಶಾಸಕರು ಸೂಚಿಸಿದರು. ಬೆಳೆ ನಷ್ಟ ಪರಿಹಾರ ಕೂಡ ಸಮರ್ಪಕವಾಗಿಲ್ಲದ ಕಾರಣ ಅದನ್ನು ಪುನರ್‌ರೂಪಿಸುವಂತೆ ಸಂಬಂಧಿಸಿದ ಸಚಿವರ ಗಮನಕ್ಕೆ ತರಲಾಗಿದೆ ಎಂದರು.

Advertisement

ಮನೆ ನಿರ್ಮಾಣಕ್ಕೆ ಅರಣ್ಯ ಅಡ್ಡಿ
ಕಲ್ಮಕಾರಿನಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿ ಉಂಟಾದ 9 ಮನೆಗಳಿಗೆ ಸೂರು ಒದಗಿಸಲು ಅರಣ್ಯ ಭೂಮಿ ಅಡ್ಡಿ ಉಂಟಾಗಿದೆ ಎಂದು ತಹಶೀಲ್ದಾರ್‌ ಹೇಳಿದರು. ಈ ಬಗ್ಗೆ ಅರಣ್ಯ ಅಧಿಕಾರಿ ಗಳಿಂದ ಮಾಹಿತಿ ಪಡೆದ ಶಾಸಕರು, ಉನ್ನತ ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಹೇಳಿದರು.

ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಸ್ಥಾಯೀ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು, ತಹಶೀಲ್ದಾರ್‌ ಅನಂತಶಂಕರ, ಇಒ ಭವಾನಿಶಂಕರ ಉಪಸ್ಥಿತರಿದ್ದರು.

ಸಣ್ಣಪುಟ್ಟ ಸಮಸ್ಯೆಗಳನ್ನು ಸ್ವಯಂ ನಿಭಾಯಿಸೋಣ
ಸೇತುವೆ, ಕಿಂಡಿ ಅಣೆಕಟ್ಟಿನಲ್ಲಿ ಮರ, ಕಸ ಕಡ್ಡಿ ತುಂಬಿದ್ದರೆ ಅದನ್ನು ತೆರವುಗೊಳಿಸಿ ಮಳೆ ನೀರು ಹರಿಯಲು ವ್ಯವಸ್ಥೆ ಕಲ್ಪಿಸಬೇಕು. ಕಿಂಡಿ ಅಣೆಕಟ್ಟಿಗೆ ಸಂಬಂಧಿಸಿ ಅದರ ಫಲಾನುಭವಿಗಳು ಆ ಕೆಲಸ ನಿರ್ವಹಿಸಬೇಕು. ಪರಿಹಾರ ಸಾಧ್ಯತೆ ಇರುವ ಸಮಸ್ಯೆಗಳಿಗೆ ಜನರೇ ಸ್ಪಂದಿಸುವ ಮನಃಸ್ಥಿತಿ ರೂಢಿಸಿಕೊಳ್ಳಬೇಕು ಎಂದು ಶಾಸಕ ಎಸ್‌. ಅಂಗಾರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next