ಚಿಂಚೋಳಿ: ರಾಜ್ಯದಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ರೈತರ ಖಾತೆಗೆ ಪರಿಹಾರ ಹಣ ಜಮೆ ಮಾಡಿದ ಬಗ್ಗೆ ಎಲ್ಲ ಗ್ರಾಪಂಗಳಲ್ಲಿ ಪ್ರಕಟಿಸಿ ರೈತರಿಗೆ ಮಾಹಿತಿ ನೀಡಬೇಕು ಎಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಸರಕಾರಕ್ಕೆ ಒತ್ತಾಯಿಸಿದರು.
ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಹೊಸದಾಗಿ ಪೆಟ್ರೋಲ್ ಪಂಪ್ ಉದ್ಘಾಟಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರೈತರ ಬೆಳೆ ಎಷ್ಟು ಎಕರೆ ಪ್ರದೇಶದಲ್ಲಿ ಹಾನಿಯಾಗಿದೆ, ರೈತರ ಖಾತೆಗೆ ಎಷ್ಟು ಪರಿಹಾರ ಹಣ ಜಮೆ ಮಾಡಲಾಗಿದೆ ಎಂಬುದರ ಬಗ್ಗೆ ರೈತರ ಗಮನಕ್ಕೆ ತರುವುದು ಕಂದಾಯ ಇಲಾಖೆ ಅಧಿಕಾರಿಗಳ ಕರ್ತವ್ಯವಾಗಿದೆ. ಕಲಬುರಗಿ ಜಿಲ್ಲಾಧಿಕಾರಿಗಳು ಬೆಳೆಹಾನಿ ಮತ್ತು ಪರಿಹಾರ ಹಣವನ್ನು ಗ್ರಾಪಂ ಕಚೇರಿಗಳಲ್ಲಿ ಪ್ರಕಟಿಸಬೇಕು. ರೈತರ ಬೆಳೆಹಾನಿಯಾದರು ಬೆಳೆ ಪರಿಹಾರ ಬಂದಿಲ್ಲ. ಕೆಲವರಿಗೆ ಸ್ವಲ್ಪ ಪರಿಹಾರ ಬಂದಿದೆ. ಹೀಗಾಗಿ ಕಂದಾಯ ಅಧಿಕಾರಿಗಳು ಗ್ರಾಪಂ ಕಚೇರಿಗಳಲ್ಲಿ ಪರಿಹಾರ ಪಟ್ಟಿ ಲಗತ್ತಿಸಿ ಮಾಹಿತಿ ನೀಡಬೇಕೆಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ಸುಭಾಷ ರಾಠೊಡ, ರೇವಣಸಿದ್ದಪ್ಪ ಅಣಕಲ, ಭೀಮರಾವ ತೇಗಲತಿಪ್ಪಿ, ರವಿರಾಜ ಕೊರವಿ, ಬಸವರಾಜ ಪಾಟೀಲ ಊಡಗಿ, ಮಹಾದೇವಪ್ಪ ಪಾಟೀಲ, ಸಂತೋಷ ಗುತ್ತೆದಾರ, ಮೇಘರಾಜ ರಾಠೊಡ, ವೀರೇಶ ರೆಮ್ಮಣಿ, ಅಶ್ಪಾಕ ಹುಸೇನ, ಶಿವಶರಣರೆಡ್ಡಿ ಪಾಟೀಲ, ಧನಂಜಯ ಇನ್ನಿತರಿದ್ದರು.