ಹುಬ್ಬಳ್ಳಿ: ನೀರಿನಲ್ಲಿ ಮುಳುಗಿದವರ ರಕ್ಷಣೆ, ಪ್ರವಾಹ ಸಂದರ್ಭದಲ್ಲಿ ಮನೆಯಲ್ಲಿನ ವಸ್ತುಗಳನ್ನು ಬಳಸಿ ಪಾರಾಗುವುದರ ಕುರಿತು ಎನ್‌ಡಿಆರ್‌ಎಫ್ ಸಿಬ್ಬಂದಿ ಅಣಕು ಪ್ರದರ್ಶನ ಮೂಲಕ ಅಗತ್ಯ ಮಾಹಿತಿ ನೀಡಿದರು.
ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಹಾಗೂ ಅಪಾಯದಿಂದ ಪಾರಾಗುವ ಕುರಿತು ಆಂಧ್ರಪ್ರದೇಶದ ಗುಂಟೂರಿನಿಂದ ಆಗಮಿಸಿದ್ದ ಎನ್‌ಡಿಆರ್‌ಎಫ್ 10ನೇ ಬಟಾಲಿಯನ್ 28 ಸಿಬ್ಬಂದಿ ಶನಿವಾರ ಇಲ್ಲಿನ ಉಣಕಲ್ಲ ಕೆರೆಯಲ್ಲಿ ಅಣಕು ಪ್ರದರ್ಶನ ನೀಡಿದರು.
ನೀರಿನಲ್ಲಿ ಮುಳುಗಿದವರನ್ನು ರಕ್ಷಿಸುವುದು, ನೆರೆ ಸಮಯದಲ್ಲಿ ಮನೆಯಲ್ಲಿರುವ ಖಾಲಿ ಪ್ಲಾಸ್ಟಿಕ್ ಡಬ್ಬಿ, ಟ್ಯೂಬ್, ಥರ್ಮಾಕೂಲ್, ಪ್ಲಾಸ್ಟಿಕ್ ನೀರಿನ ಬಾಟಲ್ಗಳಿಂದ ಜೀವ ರಕ್ಷಕ ಸಾಧನಗಳನ್ನಾಗಿ ಮಾಡಿಕೊಂಡು ಪಾರಾಗುವುದರ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ-ಜಾಗೃತಿ ಮೂಡಿಸಿದರು.
ಎನ್‌ಡಿಆರ್‌ಎಫ್ ಇನ್‌ಸ್ಪೆಕ್ಟರ್ ಸುಭಾಶ ಮಹಲಾ ಸುದ್ದಿಗಾರರೊಂದಿಗೆ ಮಾತನಾಡಿ, ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿಕೊಂಡು ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ರಕ್ಷಣಾ ಚಟುವಟಿಕೆ ಕುರಿತು ಮಾಹಿತಿ ನೀಡಲಾಗುತ್ತಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಈ ಅಣಕು ಪ್ರದರ್ಶನ ನೀಡಲಾಗುತ್ತಿದೆ. ಯಾವುದಾದರೂ ಅವಘಡ ಸಂಭವಿಸಿದಾಗ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕೆನ್ನುವುದು ಇಂತಹ ಅಣಕು ಪ್ರದರ್ಶನಗಳು ಅನುಕೂಲವಾಗಲಿದೆ ಎಂದರು.
ಗ್ರಾಮೀಣ ತಹಶೀಲ್ದಾರ್ ಸಂಗಪ್ಪ ಬಾಡಗಿ, ಅಪರ ತಹಶೀಲ್ದಾರ ಪ್ರಕಾಶ್ ನಾಸಿ, ಅಗ್ನಿಶಾಮಕ, ಅರಣ್ಯ ಇಲಾಖೆ, ಕಿಮ್ಸ್‌ನ ವೈದ್ಯರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಎನ್‌ಡಿಆರ್‌ಎಫ್, ಜಿಲ್ಲಾಡಳಿತ, ತಾಲೂಕು ಆಡಳಿತ, ಪೊಲೀಸ್,ಅಗ್ನಿಶಾಮಕ, ಆರೋಗ್ಯ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.