ಅದೊಂದು ಸುಂದರ ತಾಣ. ಪ್ರಕೃತಿ ಸೌಂದರ್ಯ ವರ್ಣಿಸಲು ಪುಟಗಳೇ ಸಾಲವು. ವನ್ಯಜೀವಿಗಳ ಜೀವತಾಣ. ಮಂಜಿನ ಕಿರೀಟ ಹೊತ್ತ ಘಟ್ಟಗಳು. ಸ್ಥಳದ ಹೆಸರೇಳಬೇಕೇ..? ಕೇಳಿ. ಆ ರಾತ್ರಿ ಚೂರಾಲಮಲ ಮತ್ತು ಮುಂಡಕ್ಕಯ್ ಗ್ರಾಮಗಳ ಜನರು ಮುಂಗಾರಿನ ಮಳೆಯ ತಂಪು ವಾತಾವರಣಕ್ಕೆ ಹಿತ ನಿದ್ರೆಗೆ ಜಾರಿದ್ದರು. ಯಾರ್ಯಾರು ಏನೇನು ಕನಸನ್ನು ನಿರೀಕ್ಷಿಸಿ ಮಲಗಿದ್ದರೋ? ಆದರೆ ಅಲ್ಲಿ ನಡೆದಿದ್ದು ಊಹಿಸದ ಘಟನೆ. ಪ್ರಕೃತಿ ಮಾತೆಯ ಕೋಪವೋ, ಗ್ರಾಮವಾಸಿಗಳ ಹಣೆಬರಹವೋ ಗೊತ್ತಿಲ್ಲ.
ಕಣ್ಣು ನಿದ್ರೆಗೆ ಜಾರಿದ್ದ ಜನರೆಲ್ಲ ಮುಂದೆಂದೂ ಕಣ್ಣು ತೆರೆಯದ ರೀತಿಯಲ್ಲಿ ಬಂದಪ್ಪಳಿಸಿತು ಭಯಾನಕ ಮಣ್ಣಿನ ರಾಶಿ, ಜತೆಗೆ ಬಂಡೆಗಳು. ಉಳಿದವರು ಬೆಳಗೆದ್ದು ಬಂದು ನೋಡಿದಾಗ ಕಣ್ಣಿಗೆ ಸಿಕ್ಕಿದ್ದು ದೊಡ್ಡ ದೊಡ್ಡ ಮರದ ದಿಮ್ಮಿ, ಬಂಡೆಗಳ ರಾಶಿ. ಕಂಡಲೆಲ್ಲ ಹೆಣಗಳ ರಾಶಿ, ತುಂಡು ತುಂಡಾದ ಭಾಗಗಳು. ರಕ್ಷಣ ಕಾರ್ಯಾಚರಣೆಗೆ ಓಡೋಡಿ ಬಂದ ಸ್ಥಳೀಯ ಜನರಿಗೆ ದೇವರು, ಭಗವಂತ, ಸೃಷ್ಟಿಕರ್ತ ಎನ್ನುವವನು ಇದ್ದಾನೆಯೇ ಎಂಬ ಸಂದೇಹ ಮೂಡಿಸಿತು. ಯಾವುದೇ ವಯಸ್ಸು, ಜಾತಿ – ಮತ, ಐಶ್ವರ್ಯದ ಭೇದವಿಲ್ಲದೆ ಎಲ್ಲವೂ ಕೊಚ್ಚಿಕೊಂಡು ಹೋಗಿತ್ತು. ಜಗತ್ತನ್ನು ಕಣ್ಣು ಬಿಟ್ಟು ನೋಡಿ ಒಂದು ವರ್ಷವೂ ಆಗಿರದ ಮುದ್ದಾದ ಮಗುವಿನ ಜರ್ಜರಿತ ಶರೀರ ಪೊದೆಗಳ ನಡುವೆ ಸಿಲುಕಿದ್ದ ದೃಶ್ಯ ಯಾವ ಕಟುಕನ ಮನಸ್ಸನ್ನೂ ಕರಗಿಸುವಂತಿತ್ತು.
ಸ್ವಂತ ರೆಸಾರ್ಟ್, ಟೀ ಎಸ್ಟೇಟ್ ಕೋಟಿಗಟ್ಟಲೆ ಆಸ್ತಿಯಿದ್ದ ವ್ಯಕ್ತಿ ಒಮ್ಮೆಗೆ ಸಂತ್ರಸ್ತನಾಗಿಬಿಟ್ಟ. ಕಾಳಜಿ ಕೇಂದ್ರವೇ ಅವನಿಗೆ ಆಸರೆಯಾಯಿತು. ನಂತರ ಸುದ್ದಿ ಕೇರಳ ರಾಜ್ಯ, ದೇಶ, ವಿದೇಶಕ್ಕೂ ಹರಡಿ ಎನ್.ಡಿ.ಆರ್.ಎಫ್, ಎಸ್. ಡಿ.ಆರ್. ಎಫ್, ಅಗ್ನಿಶಾಮಕ ದಳ, ಪೊಲೀಸ್, ಅರೋಗ್ಯ ಸಿಬಂದಿ, ಕೇರಳ ರಾಜ್ಯ ಮತ್ತು ದೇಶದ ಮೂಲೆ ಮೂಲೆಯಿಂದ ಬಂದ ಸ್ವಯಂ ಸೇವಕರು ಹಾಗೂ ಭಾರತೀಯ ಸೇನೆ ರಕ್ಷಣಾ ಕಾರ್ಯಚಾರಣೆ ತ್ವರಿತ ಗತಿಯಲ್ಲಿ ಸಾಗುವಂತೆ ಮಾಡಿತು. ಇವರೆಲ್ಲರೂ ರಾತ್ರಿ ಹಗಲೆನ್ನದೇ ಯಾವುದೇ ಜೀವಿಯಾದರೂ ಸರಿ ರಕ್ಷಣೆಯೇ ನಮ್ಮ ಮೊದಲ ಗುರಿ ಎಂದು ಕಾರ್ಯಾಚರಣೆಯಲ್ಲಿ ತೊಡಗಿದರು.
ಸೈನಿಕರು ಕೇವಲ 36 ಗಂಟೆಗಳಲ್ಲಿ 80 ಅಡಿ ಉದ್ದದ ಸೇತುವೆಯನ್ನು ನಿರ್ಮಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ದೇಶದ ಜನತೆ ಸರ್ಕಾರಕ್ಕೆ ಆರ್ಥಿಕ ನೆರವು ನೀಡುವುದಲ್ಲದೇ, ಜನರು ಭಾಷೆ, ರಾಜ್ಯ, ಜಾತಿ, ಮತ, ವರ್ಣ ಭೇದ ಮಾಡದೇ ಅಲ್ಲಿಯ ಪ್ರತಿಯೊಂದು ಜೀವದ ನೋವನ್ನೂ ಅರ್ಥೈಸಿಕೊಂಡು ನಿರಾಶ್ರಿತರ ಕೇಂದ್ರಗಳಿಗೆ ಬೇಕಾಗುವ ದಿನಸಿ ವಸ್ತು, ಬಟ್ಟೆ – ಬರೆ ಸೇರಿದಂತೆ ಅಗತ್ಯ ವಸ್ತುಗಳ ದಾನ ಮಾಡುತ್ತಿದ್ದಾರೆ. ಪ್ರತಿಯೊಬ್ಬನೂ ತನ್ನ ಕೈಲಾದಷ್ಟು ನೆರವು ನೀಡಿ ಸಾರ್ಥಕತೆ ಮೆರೆಯುತ್ತಿದ್ದಾರೆ.
ದೀಪಕ್ ಸುವರ್ಣ
ಪುತ್ತೂರು