Advertisement

ಪ್ರಕೃತಿ ವಿಕೋಪ ಪರಿಹಾರ ಮೊತ್ತ ಏರಿಕೆಗೆ ಮನಪಾ ಚಿಂತನೆ

09:17 PM Jun 29, 2017 | Team Udayavani |

ಮಹಾನಗರ: ನಗರದಲ್ಲಿ ಪ್ರಕೃತಿ ವಿಕೋಪದಿಂದ ಸೊತ್ತುಗಳಿಗೆ ಹಾನಿಯುಂಟಾದಲ್ಲಿ ಪಾಲಿಕೆ ವತಿಯಿಂದ ನೀಡಲಾಗುವ ಪರಿಹಾರದ ಮೊತ್ತವನ್ನು ಏರಿಸಲು ಮಹಾನಗರ ಪಾಲಿಕೆ ಸಿದ್ಧತೆ ನಡೆಸಿದೆ. ಈ ಸಂಬಂಧ ಜೂ.29ರಂದು ನಡೆಯಲಿರುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವಕ್ಕೆ ಅನುಮೋದನೆ ಪಡೆಯುವ ಸಾಧ್ಯತೆ ಇದೆ. ಪಾಲಿಕೆ ವ್ಯಾಪ್ತಿಯ ನಾಗರಿಕರ ಮನೆಗಳು ಪ್ರಕೃತಿ ವಿಕೋಪದಡಿ ಹಾನಿಯುಂಟಾದ ಸಂದರ್ಭದಲ್ಲಿ 5 ಸಾವಿರ ರೂ.ವನ್ನು ಪರಿಹಾರಧನವಾಗಿ ನೀಡಲಾಗುತ್ತಿತ್ತು. ಈ ಮೊತ್ತ ಯಾವುದಕ್ಕೂ ಸಾಲದು ಎನ್ನುವ ದೃಷ್ಟಿಯಿಂದ ಪರಿಹಾರ ಮೊತ್ತವನ್ನು ಹತ್ತು ಸಾವಿರ ರೂ. ಗಳಿಗೆ  ಏರಿಸುವ ಸಾಧ್ಯತೆ ಇದೆ. 

Advertisement

ಓಡಾಟಕ್ಕೆ ವ್ಯರ್ಥವಾಗುತ್ತಿತ್ತು ಪರಿಹಾರ ಧನ!
ಪ್ರಕೃತಿ ವಿಕೋಪ ಆರ್ಥಿಕವಾಗಿ ಹಿಂದುಳಿದವರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಅವರು ಪರಿಹಾರಕ್ಕೆ ಅರ್ಜಿ ಸಲ್ಲಿಸಿ, ಹತ್ತಾರು ಬಾರಿ ಸರಕಾರಿ ಕಚೇರಿಗಳಿಗೆ ಅಲೆದಾಡಬೇಕು. ಆಗ ಪರಿಹಾರ ಧನ ಈ ಓಡಾಟದ ಖರ್ಚಿಗೂ ಸಾಕಾಗುತ್ತಿರಲಿಲ್ಲ ಎಂಬುದು ಫ‌ಲಾನುಭವಿಗಳ ಅಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಹಾರ ಧನ ಪರಿಷ್ಕರಿಸಲು ನಿರ್ಧರಿಸಲಾಗಿದೆ.

ನಲವತ್ತಾರು ಅರ್ಜಿ
2016ರಲ್ಲಿ ಪ್ರಾಕೃತಿಕ ವಿಕೋಪದಿಂದ ಸೊತ್ತುಗಳಿಗೆ ಹಾನಿಯಾಗಿದೆ ಎಂದು ಪಾಲಿಕೆಯ ಕಂದಾಯ ವಿಭಾಗಕ್ಕೆ 46 ಅರ್ಜಿಗಳು ಬಂದಿದ್ದು, ಅರ್ಹ ಫಲಾನುಭವಿಗಳಿಗೆ ವಿವಿಧ ವಿಭಾಗಗಳಲ್ಲಿ ಹಣ ಬಿಡುಗಡೆಮಾಡಲಾಗಿತ್ತು. 2017 ಜೂನ್‌ ವರೆಗೆ 10 ಅರ್ಜಿಗಳು ಬಂದಿದ್ದು, ಹಣ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಇಲಾಖೆ ಅಧಿಕಾರಿಗಳು ಉದಯವಾಣಿ ಸುದಿನಕ್ಕೆ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸುವುದು ಹೇಗೆ?
ಮಳೆ ಅಥವಾ ವಿವಿಧ ಪ್ರಾಕೃತಿಕ ವಿಕೋಪದಿಂದ ಮನೆಗೆ ಹಾನಿ ಸಂಭವಿಸಿದರೆ ಅಂತಹವರು ಧನ ಸಹಾಯಕ್ಕಾಗಿ ಇಲಾಖೆಗೆ ಅರ್ಜಿ ಸಲ್ಲಿಸಬಹುದು. ಘಟನೆಯ ಫೋಟೋ, ಗುರುತು ಪತ್ರ, ತೆರಿಗೆ ಪಾವತಿ  ರಶೀದಿ ಪ್ರತಿ ಹಾಗೂ ಕೈಯಲ್ಲಿ ಬರೆದ ಅರ್ಜಿ ನಮೂನೆಯನ್ನು ಕಂದಾಯ ವಿಭಾಗಕ್ಕೆ ನೀಡಿದರೆ ಅಧಿಕಾರಿಗಳು ಅರ್ಜಿ ಪರಿಶೀಲಿಸಿ, ಘಟನಾ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರವನ್ನು ನೀಡುತ್ತಾರೆ. 

ಪರಿಹಾರದ ಮೊತ್ತ ಏರಿಕೆಗೆ ಮನವಿ
ಫಲಾನುಭವಿಗಳು ಪರಿಹಾರದ ಮೊತ್ತ ಏರಿಸುವಂತೆ ಪಾಲಿಕೆಯನ್ನು ಹಲವು ಬಾರಿ ಆಗ್ರಹಿಸಿದ್ದರು. ಆದರೆ ತಾಂತ್ರಿಕ ಸಮಸ್ಯೆಗಳಿಂದ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಇದೀಗ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಲಿದೆ ಎನ್ನುವುದು ಅಧಿಕಾರಿಗಳ ಸ್ಪಷ್ಟನೆ.

Advertisement

ಸಭೆಯಲ್ಲಿ ಚರ್ಚಿಸಿ ತೀರ್ಮಾನ
ಮಳೆಯ ಪರಿಣಾಮ ಹಂಚಿನ ಮನೆ ಬಿದ್ದರೆ, ಹಾನಿಯಾದರೆ  ಕನಿಷ್ಠ ಪರಿಹಾರಧನ ನೀಡಲಾಗುತ್ತಿತ್ತು. ಇದನ್ನು ಏರಿಸುವ‌  ಸಂಬಂಧ ಪಾಲಿಕೆ ಸಾಮಾನ್ಯ ಸಭೆಯಲ್ಲಿ  ಚರ್ಚೆ ನಡೆಸಿ ಕ್ರಮ ಜರಗಿಸಲಾಗುವುದು.
-ಕವಿತಾ ಸನಿಲ್‌, ಮೇಯರ್‌

– ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next