ರಾಣಿಬೆನ್ನೂರ: ಮಾಕನೂರು ಗ್ರಾಮದ ತುಂಗಭದ್ರಾ ನದಿ ದಡದಲ್ಲಿ ಚೆಕ್‌ಡ್ಯಾಂ ನಿರ್ಮಿಸಿ ದಾವಣಗೆರೆ ನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಸಲು ಸ್ಮಾರ್ಟ್ ಸಿಟಿ ಯೋಜನೆಯಡಿ ತುಂಗಭದ್ರಾ ನದಿಗೆ ಚೆಕ್‌ಡ್ಯಾಂ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಆಗಮಿಸಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಸ್ಥಳೀಯ ರೈತ ಸಂಘಟನೆ, ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ದಿಢೀರ್ ಪ್ರತಿಭಟನೆ ನಡೆಸಿ ಕಾರ್ಯಕ್ರಮಕ್ಕೆ ಅಡ್ಡಿಯಾದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಸಂಘಟನೆಯ ಜಿಲ್ಲಾ ಅಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ, ಮಾಕನೂರು ಗ್ರಾಮದ ತುಂಗಭದ್ರಾ ನದಿ ದಡದಲ್ಲಿ ಕೋಟ್ಯಾಂತರ ರೂ.ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಆಗಮಿಸುವ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಕಚೇರಿ ಅಧಿಕಾರಿಗಳಿಗೆ ಅಥವಾ ಗ್ರಾಮಸ್ಥರಿಗೂ ಯಾವುದೇ ಮಾಹಿತಿ ನೀಡಿಲ್ಲ. ದಿಢೀರ್‌ನೆ ಕಾಮಗಾರಿ ಆರಂಭಿಸುವುದು ಅಕ್ಷಮ್ಯ ಅಪರಾಧ. ಆದ್ದರಿಂದ ಸಾರ್ವಜನಿಕರ ಗಮನಕ್ಕೆ ಯೋಜನೆಯ ಸಾಧಕ ಬಾಧಕಗಳನ್ನು ಪ್ರಸ್ತುತಪಡಿಸಿ ಆಬಳಿಕ ಅವರ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಿ ಎಂದು ಒತ್ತಾಯಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಅಧಿಕಾರಿಗಳ ಆಡಳಿತ ವೈಖರಿಯಲ್ಲಿ ಅಲ್ಪದೋಷ ಕಂಡುಬಂದಿದೆ. ಮುಂಚಿತವಾಗಿಯೇ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರಿಗೆ ಯೋಜನಾ ಕಾಮಗಾರಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ ಜನರ ಅನುಮತಿ ಪಡೆಯಬೇಕಿತ್ತು. ಆದ್ದರಿಂದ ಹಿರಿಯ ನಾಯಕರು ಸ್ಥಳಕ್ಕೆ ಆಗಮಿಸಿದ್ದಾರೆ. ಇದೊಂದು ಬಾರಿ ಅವಕಾಶ ನೀಡಿ, ಮತ್ತೆ ಇಂಥ ಸಂದಿಗ್ಧ ಪರಿಸ್ಥಿತಿ ಬರದ ಹಾಗೆ ನಾನೇ ನೋಡಿಕೊಳ್ಳುವೆ ಎಂಬ ಭರವಸೆ ನೀಡಿದರು. ನಂತರ ಭೂಮಿಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು.
ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಮಾತನಾಡಿ, ನಮ್ಮ ಕೆಲ ಅ ಧಿಕಾರಿಗಳ ನಿಷ್ಕಾಳಜಿಯಿಂದ ತಮಗೆ ಮಾಹಿತಿ ತಲುಪಿಸುವಲ್ಲಿ ವ್ಯತ್ಯಯವಾಗಿದೆ. ನಮ್ಮನ್ನು ಕ್ಷಮಿಸಿ. ತಾವು ಅನುಮೋದನೆ ನೀಡಿದರೆ 98 ಕೋಟಿ ರೂ. ವೆಚ್ಚದ, 0.20 ಟಿಎಂಸಿ ನೀರು ಸಾಮರ್ಥ್ಯದ ಕಾಮಗಾರಿಗೆ ಚಾಲನೆ ನೀಡುತ್ತೇವೆ ಎಂದು ಗ್ರಾಮಸ್ಥರೆದುರು ಹೇಳಿದರು.
ಸಂಸದ ಜಿ.ಎಂ ಸಿದ್ದೇಶ್ವರ, ದಾವಣಗೆರೆ ಶಾಸಕ ಶಾಮನೂರು ಶಿವಶಂಕ್ರಪ್ಪ, ಎಸ್.ಎ. ರವೀಂದ್ರನಾಥ, ಗ್ರಾಪಂ ಅಧ್ಯಕ್ಷ ಸದಾಶಿವನಗೌಡ ಮಲ್ಲನಗೌಡ್ರ, ಗುತ್ತಿಗೆದಾರ ಕೆ.ದೊಡ್ಡಹನುಮಂತಪ್ಪ, ಸುರೇಶ ಮಲ್ಲಾಪುರ, ಹನುಮಂತಪ್ಪ ಕುಂಬಳೂರ, ಮಲ್ಲಿಕಾರ್ಜುನ ಹಲಗೇರಿ, ಪಿಡಿಒ ಗಾಯಿತ್ರಾ ಹೊಸಂಗಡಿ, ಸತೀಶಗೌಡ ಮಲ್ಲನಗೌಡ್ರ ಸೇರಿದಂತೆ ಗ್ರಾಮಸ್ಥರು ಇದ್ದರು.