Advertisement

ಸಾರಿಗೆ ಮಾರ್ಗಗಳ ರಾಷ್ಟ್ರೀಕರಣ:ಆಕ್ಷೇಪಣೆ ಆಲಿಸಲು ಸೂಚನೆ

06:15 AM Nov 23, 2018 | |

ಬೆಂಗಳೂರು: ರಾಜ್ಯದಲ್ಲಿನ ಸಾರಿಗೆ ಮಾರ್ಗಗಳನ್ನು ರಾಷ್ಟ್ರೀಕರಣಗೊಳಿಸುವ ಕರಡು ಅಧಿಸೂಚನೆ ವಿಚಾರದಲ್ಲಿ ಅದಕ್ಕೆ ಸಂಬಂಧಪಟ್ಟವರು ಹಾಗೂ ಬಾಧಿತರ ಆಕ್ಷೇಪಣೆ ಮತ್ತು ಸಲಹೆಗಳನ್ನು ಮುಕ್ತವಾಗಿ ಪರಿಗಣಿಸಿ ಎಂದು ಸಾರಿಗೆ ಇಲಾಖೆಗೆ ಹೈಕೋರ್ಟ್‌ ಗುರುವಾರ ಸೂಚನೆ ನೀಡಿದೆ.

Advertisement

ಈ ಸಂಬಂಧ ಕರ್ನಾಟಕ ಖಾಸಗಿ ಬಸ್‌ ಮಾಲೀಕರ ಒಕ್ಕೂಟದ ಅಧ್ಯಕ್ಷ ಕೆ. ರಾಜವರ್ಮ ಬಲ್ಲಾಳ ಸೇರಿದಂತೆ ಐವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ರಾಜ್ಯದ್ಯಾಂತರ ಅನ್ವಯವಾಗುವಂತೆ ಸರ್ಕಾರ ಜಾರಿಗೆ ತರುತ್ತಿರುವ ಈ ಯೋಜನೆ ಖಾಸಗಿ ಬಸ್‌ ಸಂಚಾರಕ್ಕೆ ಧಕ್ಕೆ ತರಲಿದೆ. ಮೋಟಾರು ವಾಹನ ಕಾಯ್ದೆಯ ಕಲಂ 99 ಮತ್ತು 100ರ ಅಡಿಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ. ಆದರೆ ಇದು ಕಲಂ 102ರ ಅಡಿಯಲ್ಲಿ ಇರಬೇಕು, ಅಂತೆಯೇ ಈ ರೀತಿಯ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ವಾದಿಸಿದರು.

ಮೇಲಾಗಿ 2018ರ ಮಾರ್ಚ್‌ 24ರಂದು ಹೊರಡಿಸಲಾಗಿರುವ ಕರಡು ಅಧಿಸೂಚನೆ ಹಲವು ನ್ಯೂನ್ಯತೆಗಳಿಂದ ಕೂಡಿದೆ. ವಿಚಾರಣಾ ಪ್ರಾಧಿಕಾರವು ಸಾರಿಗೆ ಸಚಿವರ ನೇತೃತ್ವದಲ್ಲಿ ಇರಬೇಕು. ಆದರೆ, ಈ ಪ್ರಕರಣದಲ್ಲಿ ಸಹಕಾರ ಸಚಿವರು ವಿಚಾರಣಾ ಪ್ರಾಧಿಕಾರದ ಮುಖ್ಯಸ್ಥರಾಗಿದ್ದಾರೆ. ಹಾಗಾಗಿ, ಅಧಿಸೂಚನೆಗೆ ತಡೆ ನೀಡಬೇಕು ಎಂದು ಕೋರಿದರು.

ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್‌ ಜನರಲ್‌, ಈಗಾಗಲೇ ಸಂಚರಿಸುತ್ತಿರುವ ಮಾರ್ಗಗಳ ಪರವಾನಗಿಯನ್ನು ಕಾಲಕಾಲಕ್ಕೆ ನವೀಕರಣ ಮಾಡಿಸಿಕೊಳ್ಳಲು ಯಾವುದೇ ಅಭ್ಯಂತರ ಇಲ್ಲ. ಆದರೆ, ಇನ್ನು ಮುಂದೆ ಈಗಿರುವ ಮಾರ್ಗಗಳಲ್ಲಿ ಅಗತ್ಯ ಕಂಡು ಬಂದರೆ ಸರ್ಕಾರಿ ಬಸ್‌ಗಳನ್ನು ಓಡಿಸಲಾಗುವುದು ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next