Advertisement

ಏಡ್ಸ್‌-ಕ್ಯಾನ್ಸರ್‌ಗಿಂತಲೂ ಜಾತೀಯತೆ ಮಾರಕ

09:19 AM Aug 05, 2019 | Team Udayavani |

ಬೆಳಗಾವಿ: ಜಾತೀಯತೆ ಎನ್ನುವುದು ಪ್ರತಿಯೊಬ್ಬರ ಮನುಷ್ಯನ ರಕ್ತದ ಕಣಗಳಲ್ಲಿ ಹಾಗೂ ನರ ನಾಡಿಗಳಲ್ಲಿ ಹರಡಿಕೊಂಡಿದ್ದು, ಇದು ಏಡ್ಸ್‌-ಕ್ಯಾನ್ಸರ್‌ಗಿಂತಲೂ ಮಾರಕವಾಗಿದೆ ಎಂದು ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದರು.

Advertisement

ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಾಗ ಪಂಚಮಿ ಹಬ್ಬದಂದು ಮಾನವ ಬಂಧುತ್ವ ವೇದಿಕೆ ಹಾಗೂ ವಿವಿಧ ಬಸವಪರ ಸಂಘಟನೆಗಳ ಆಶ್ರಯದಲ್ಲಿ ರವಿವಾರ ನಡೆದ ಬಸವ ಪಂಚಮಿ ಚಿಂತನಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಶ್ನೆಗಳಿಲ್ಲದ ಸಮಾಜ ಸತ್ತು ಹೋಗಿದೆ. ಸಮಾಜ ಪ್ರಶ್ನೆ ಮಾಡುವುದನ್ನೇ ಮರೆತಿರುವುದರಿಂದ ಜಾತೀಯತೆಯ ಬೀಜ ಮೊಳಕೆ ಒಡೆದು ಎಲ್ಲ ಕಡೆಯೂ ಜಾತಿ ಭ್ರಮೆ ಪಸರಿಸಿದೆ. ಇದರಿಂದ ವ್ಯಕ್ತಿತ್ವ ವಿಕಸನ ನಾಶವಾಗುತ್ತಿದೆ. ಸಮಾಜ ಸುಧಾರಣೆಯತ್ತ ಸಾಗಬೇಕಾದರೆ ಪ್ರಶ್ನೆ ಮಾಡುವುದನ್ನು ಕಲಿಯಬೇಕು ಎಂದರು.

ಸುಳ್ಳು ಹೇಳುವ ಮೂಲಕ ನಮ್ಮನ್ನು ನಾವು ವಂಚನೆ ಮಾಡಿಕೊಳ್ಳುತ್ತಿದ್ದೇವೆ. ಮನಸ್ಸಿನ ಮಾತು ಕೇಳುತ್ತಿಲ್ಲ. ವಚನ, ಸಂವಿಧಾನ, ಒಳ್ಳೆಯ ವ್ಯಕ್ತಿಗಳಿಂದ ಬದುಕು ಸುಧಾರಣೆ ಮಾಡಿಕೊಳ್ಳಬೇಕು. ದೇವರಿಗೆ ಹಾಲು ಎರೆಯುವುದು ಅವಶ್ಯಕತೆ ಇಲ್ಲ. ಪುರೋಹಿತಶಾಹಿಗಳು ಬೆಣ್ಣೆ, ಹಾಲು, ತುಪ್ಪ ತಿನ್ನುತ್ತಿದ್ದರೆ, ನಮಗೆ ಗೋ ಮೂತ್ರದ ಕುಡಿಸುತ್ತಿದ್ದಾರೆ. ಹುಲಿಯ ಕ್ರೌರ್ಯಕ್ಕಿಂತ ನರಿ ಕ್ರೌರ್ಯ ಬಹಳ ಕೆಟ್ಟದ್ದಾಗಿರುತ್ತದೆ ಎಂದರು.

ಮಂದಿರ, ದೇವಸ್ಥಾನಗಳನ್ನು ಕೆಳ ಸಮುದಾಯದ ಜನರೇ ದೇವಸ್ಥಾನಗಳನ್ನು ಕಟ್ಟಿದ್ದಾರೆ. ಆದರೆ ಪ್ರಾಣ ಪ್ರತಿಷ್ಠಾಪಣೆ ಹೆಸರಲ್ಲಿ ತಳ ಸಮಾಜವನ್ನು ತುಳಿಯುತ್ತಿದ್ದಾರೆ. ವೇದ, ಪುರಾಣ, ಶಾಸ್ತ್ರ ಓದಿಕೊಂಡವರು ಮನುಷ್ಯತ್ವ ತಿಳಿದುಕೊಂಡಿಲ್ಲ. ಮನಸ್ಸಿನ ಮೈಲಿಗೆ ತೊಳೆದುಕೊಳ್ಳದೇ ಕೇವಲ ಬಾಯಲ್ಲಿ ಜ್ಞಾನ ಇಟ್ಟುಕೊಂಡು ಆಚರಣೆಯಲ್ಲಿ ಅಜ್ಞಾನ ತುಂಬಿಕೊಂಡಿದ್ದಾರೆ. ಇತಿಹಾಸವನ್ನು ಕಣ್ತೆರೆದು ನೋಡಬೇಕು, ಮನಸ್ಸು ಬಿಚ್ಚಿ ಓದಬೇಕು ಎಂದರು.

ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಪುರೋಹಿತಶಾಹಿಗಳು ನಂಬಿಕೆಗಳನ್ನು ಮೂಢನಂಬಿಕೆಗಳನ್ನಾಗಿ ಬದಲಾವಣೆ ಮಾಡಿದ್ದಾರೆ. ಕೆಲಸದ ಆಧಾರದ ಮೇಲೆ ಜಾತಿಗಳನ್ನಾಗಿ ವಿಭಜನೆ ಮಾಡಲಾಯಿತು. ಸ್ವಾತಂತ್ರ್ಯಕ್ಕಿಂತ ಮುಂಚೆ ಜನಸಂಖ್ಯೆಗಿಂತಲೂ ದೇವರ ಸಂಖ್ಯೆಯೇ ಹೆಚ್ಚಿತ್ತು. ಸಮಾಜವನ್ನು ಬದಲಾಯಿಸಬೇಕಾಗಿದ್ದು, ಮೌಡ್ಯದಿಂದ ಹೊರಬರಬೇಕಾಗಿದೆ. ಮೌಡ್ಯದ ಹೆಸರಲ್ಲಿ ಶೋಷಣೆ ಮಾಡುತ್ತಿರುವುದನ್ನು ಇತಿಹಾಸ, ಪುಸ್ತಕ ಓದುವುದರಿಂದ ಮಟ್ಟ ಹಾಕಬೇಕು ಎಂದರು.

Advertisement

ಕಳೆದ ನಾಲ್ಕು ವರ್ಷಗಳಿಂದ ಬಸವ ಪಂಚಮಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.ಸಾಮಾಜಿಕ ಹೋರಾಟಗಳಲ್ಲಿ ಸೋತರೂ ನಾವು ಇದನ್ನು ನಿರಂತರವಾಗಿ ಮುಂದುವರಿಸುತ್ತೇವೆ. ಪುರೋಹಿತಶಾಹಿಗಳು ಬುದ್ಧನನ್ನು ದೇಶ ಬಿಟ್ಟು ಓಡಿಸಿದ್ದಾರೆ. ಬಸವಣ್ಣನನ್ನು ಹತ್ಯೆ ಮಾಡಿದ್ದಾರೆ. ಇವರ ವಿಚಾರಗಳನ್ನು ವಿರೋಧಿಸುವವರು ಮುಂಚೂಣಿಯಲ್ಲಿದ್ದು, ಭಾರತ ಮಾತಾ ಕೀ ಜೈ ಘೋಷಣೆ ಕೂಗುತ್ತಿದ್ದಾರೆ ಎಂದು ಟೀಕಿಸಿದರು.

ವಿಶ್ವಗುರು ಬಸವ ಮಂಟಪ ಸಂಚಾಲಕ ಶ್ರೀ ಪ್ರಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯ ಮನುಷ್ಯರನ್ನು ಪ್ರೀತಿಸುವುದನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಕಲ್ಯಾಣ ಕ್ರಾಂತಿ ಮಾಡಲು ಎಲ್ಲ ಶರಣರ ಶ್ರಮ ವಹಿಸಿದ್ದಾರೆ. ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಶರಣರಿಂದಾಗಿದೆ. ಇಂದಿನ ಸಮಾಜಕ್ಕೆ ಇದು ಮಾದರಿಯಾಗಿದೆ ಎಂದರು.

ನಾಗರ ಪಂಚಮಿಯ ದಿನ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಬಸವ ಪಂಚಮಿ ಆಚರಿಸಲಾಯಿತು. ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ ಮಾತನಾಡಿದರು. ಶಂಕರ ಗುಡಸ, ಅರವಿಂದ ಪರುಶೆಟ್ಟಿ, ಆರ್‌.ಎಸ್‌. ದರ್ಗೆ ಇದ್ದರು. ಮಹಾಂತೇಶ ತೋರಣಗಟ್ಟಿ ಸ್ವಾಗತಿಸಿದರು. ರಾಮಕೃಷ್ಣ ಪಾನಬುಡೆ ನಿರೂಪಿಸಿದರು. ಮಂಜುನಾಥ ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next