Advertisement
ಈ ಮಿರ್ಜಾನ್ ಕೋಟೆಯು ಉತ್ತರಕನ್ನಡದ (ಕಾರವಾರ) ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದಲ್ಲಿದೆ. ಗೋಕರ್ಣದಿಂದ ಸುಮಾರು 23 ಕಿಮಿ ದೂರದಲ್ಲಿರುವ ಮಿರ್ಜಾನ್ ಕೋಟೆ, ಕುಮಟಾ ಪಟ್ಟಣದಿಂದ 10.5 ಕಿಮಿ ದೂರದಲ್ಲಿದೆ. ನಾವು ಕಾಣಬಹುದಾದ ಉತ್ತಮ ಸ್ಥಿತಿಯಲ್ಲಿರುವ ಕೋಟೆಗಳಲ್ಲಿ ಇದು ಕೂಡಾ ಒಂದಾಗಿದೆ. ಇದು ಅಘನಾಶಿನಿ ನದಿಯ ತಟದಲ್ಲಿದ್ದು ಅದರಾಚೆಗೆ ಅರಬ್ಬೀ ಸಮುದ್ರವನ್ನು ಹೊಂದಿದೆ. ಈ ಕೋಟೆಯಲ್ಲಿ ಸುಮಾರು 11.5 ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಈ ಕೋಟೆಯಿದ್ದು ನೋಡಲು ತುಂಬಾ ಆಕರ್ಷಕವಾಗಿದೆ. ಈ ಕೋಟೆಯು ಕರಾವಳಿ ಪ್ರದೇಶದಲ್ಲಿ ಕಂಡುಬರುವ ಜಂಬಿಟ್ಟಿಗೆ ಕಲ್ಲಿನಿಂದ (ಲ್ಯಾಟರೈಟ್) ನಿರ್ಮಾಣವಾಗಿದ್ದು ಇಂದಿಗೂ ಅದರ ಗೋಡೆಗಳು ಗಟ್ಟಿಯಾಗಿವೆ. ಇದರಲ್ಲಿ ಒಂದು ಮುಖ್ಯ ದ್ವಾರಗಳಿದ್ದು ಮೂರು ಉಪ ದ್ವಾರಗಳು ಕಂಡುಬರುತ್ತವೆ. ಕೋಟೆಯ ಸುತ್ತ ತಗ್ಗು ಪ್ರದೇಶವಿದ್ದು ಹಲವಾರು ಗುಪ್ತದ್ವಾರಗಳನ್ನು ಹೊಂದಿದೆ. ಅದಲ್ಲದೇ ಇಲ್ಲಿ ಹಲವಾರು ಕಂದಕಗಳು, ದರ್ಬಾರ ಹಾಲ್, ರಾಣಿಯ ಸಿಂಹಾಸನ, ಪಾಕಶಾಲೆ, ಮಾರುಕಟ್ಟೆ ದೇವಸ್ಥಾನ, ಮಸಿದಿಯಂತಹ ಅವಶೇಷಗಳು ಮತ್ತು ಈ ಕೋಟೆಯಲ್ಲಿ 9 ಭಾವಿಗಳನ್ನು ನಾವು ಕಾಣಬಹುದಾಗಿದೆ. ಅದಲ್ಲದೇ ಕೋಟೆಯ ಧ್ವಜ ಸ್ತಂಭ, ಕಾವಲು ಗೋಪುರ ಅಲ್ಲಿಂದ ಕಾಣುವ ಅಘನಾಶಿನಿ ನದಿ ನೋಡುಗರ ಗಮನವನ್ನು ಸೆಳೆಯುತ್ತದೆ.
Related Articles
Advertisement
ಇನ್ನು ಈ ಕೋಟೆಯ ಬಗ್ಗೆ ಹಲವಾರು ಇತಿಹಾಸಗಳಿವೆ ಕರ್ನಾಟಕದ ಇತಿಹಾಸದಲ್ಲಿ ಕಾಳುಮೆಣಸಿನ ರಾಣಿ ಎಂದೇ ಪ್ರಖ್ಯಾತಿಗೊಂಡಿದ್ದ ಸಾಳುವ ವಂಶದ ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿ ಈ ಕೋಟೆಯನ್ನು 16 ನೇ ಶತಮಾನದಲ್ಲಿ ನಿರ್ಮಿಸಿದ್ದಾಳೆ ಎಂದು ಇತಿಹಾಸದ ಪುಟಗಳಲ್ಲಿ ಉಲ್ಲೇಖಿಸಲಾಗಿದೆ. ಈ ಕೋಟೆಯನ್ನು ಕಟ್ಟಿರುವವರ ಕುರಿತು ಹಲವಾರು ಭಿನ್ನಾಭಿಪ್ರಾಯಗಳಿದ್ದು, ಇಬ್ನಬಟೂಟ ಎಂಬ ನವಾಯತ ರಾಜ 1200 ರಲ್ಲಿ ಕಟ್ಟಿರುವುದಾಗಿ ಹೇಳುತ್ತಾರೆ. ಮತ್ತೊಂದು ವಾದದ ಪ್ರಕಾರ ಈ ಕೋಟೆಯನ್ನು ಬಿಜಾಪುರದ ಸುಲ್ತಾನ ಶರೀಫ್ ಉಲ್ ಮುಲ್ಕ್ ಇದನ್ನು 1608-1640 ರ ಕಾಲದಲ್ಲಿ ಕುಮಟಾ ಪಟ್ಟಣ ರಕ್ಷಣೆ ದೃಷ್ಟಿಯಿಂದ ಕಟ್ಟಿದನೆಂದು ಹೇಳುತ್ತಾರೆ. ಹೆಚ್ಚಿನವರ ಪ್ರಕಾರ ಇದು ಗೇರುಸೊಪ್ಪೆಯ ರಾಣಿ ಕಟ್ಟಿರುವುದು ಎಂಬ ಮಾತು ಸ್ಥಳೀಯವಲಯದಲ್ಲಿದೆ. ರಾಣಿ ಚೆನ್ನಭೈರಾದೇವಿಯು ವಿಜಯನಗರ ಅರಸರ ಸಾಮಂತ ರಾಣಿಯಾಗಿದ್ದು ಸುಮಾರು 54 ವರ್ಷಗಳ ಕಾಲ ಈ ಪ್ರಾಂತ್ಯವನು ರಾಜ್ಯಭಾರ ಮಾಡಿರುವುದು ವಿಶೇಷವಾಗಿದೆ.
ಈ ರಾಣಿಯ ಆಳ್ವಿಕೆಯ ಅವಧಿಯಲ್ಲಿ ವ್ಯಾಪಾರ ವಹಿವಾಟು ಜೋರಾಗಿಯೇ ಇತ್ತು. ಈ ಪ್ರದೇಶವು ಅಕ್ಕಿ ಮತ್ತು ಕಾಳುಮೆಣಸಿನ ವ್ಯಾಪಾರದ ಪ್ರಮುಖ ಕೇಂದ್ರವಾಗಿತ್ತು ಎಂದೆನ್ನಬಹುದು. ಈ ಕೋಟೆಗೆ ಪ್ರತಿವರ್ಷವು ಕೂಡಾ ಹಲವಾರು ಪ್ರವಾಸಿಗರು ಬಂದು ಹೋಗುತ್ತಾರೆ ಎಂದರೇ ಅಷ್ಟು ಸುಂದರತೇ ಮತ್ತು ಆಕರ್ಷಣೆ ಈ ಕೋಟೆಗೆ ಇದೆ ಅಂದು ಹೇಳಬಹುದು.
ಹೀಗೆ ನಾವು ನಮ್ಮ ಪ್ರವಾಸವನ್ನ ಈ ಅದ್ಭುತವಾದ ಮಿರ್ಜಾನ್ ಕೋಟೆ ಯನ್ನು ನೋಡಿ ಮನಸ್ಸು ಮತ್ತು ಕಣ್ಣಿಗೆ ಆನಂದವನ್ನ ತಂದುಕೊಂಡೇವು.