Advertisement
ನನಗೂ ಕಾಡಿಗು ಏನೋ ಒಂದು ವಿಶೇಷ ಸಂಬಂಧ, ನನ್ನ ತಂದೆಯ ಹುಟ್ಟೂರು ಒಂದು ಕುಗ್ರಾಮ, ಒಂದು ಬದಿಯಲ್ಲಿ ಕುದುರೆಮುಖ ಬೆಟ್ಟದ ಸಾಲುಗಳು ಹಾಗೂ ನೇತ್ರಾವತಿ ನದಿಯ ಉಗಮ ಸ್ಥಾನ. ಇನ್ನೊಂದು ಕಡೆ ಚಾರ್ಮಾಡಿ ಘಟ್ಟದ ವೈಭವ , NCC ದಿನಗಳಲ್ಲಿ ಶುರುವಾದ ನನ್ನ ಚಾರಣದ ಹವ್ಯಾಸ ನನನ್ನು ಪ್ರೇರೇಪಿಸಿದ್ದು ಮಿಂಚುಕಲ್ಲು ಗುಡ್ಡದ ಚಾರಣ.
Related Articles
Advertisement
ಸುಮಾರು 4-5km ನಡೆದ ನಾವು ತಂದಿದ್ದ ನೀರು ಮುಗಿಯಿತು. ನಮ್ಮ ಅದೃಷ್ಟಕ್ಕೆ ಸಣ್ಣದೊಂದು ನದಿಯ ಝರಿ ನಮ್ಮ ದಾಹ ತಣಿಸಲು ಅಲ್ಲೇ ಹತ್ತಿರದಲ್ಲಿ ಹರಿಯುತ್ತಿತ್ತು. ಅಲ್ಲೇ ಸ್ವಲ್ಪ ಕಾಲ ವಿಶ್ರಮಿಸಿ, ಕೂತಲ್ಲೇ ಕಾಣುತಿದ್ದ ಬೆಟ್ಟದ ಸಾಲುಗಳು, ಏಪ್ರಿಲ್ ತಿಂಗಳಲ್ಲೂ ಬೆಟ್ಟದ ಮೇಲೆ ಕಂಡ ನೀರಿನ ಒರತೆ ಎಲ್ಲವೂ ಪ್ರಕೃತಿ ವಿಸ್ಮಯವೇ ಸರಿ. ಅಲ್ಲಿಂದ ಸಣ್ಣ ಪುಟ್ಟ ಬೆಟ್ಟಗಳನ್ನು ಹತ್ತಿ ನಡೆಯುತ್ತ ಹೋದಂತೆ ಆನೆಗಳ ಲದ್ದಿ, ಕರಡಿಯ ಗುರುತುಗಳು ಕಾಣಿಸಿತು. ಇದೆಲ್ಲವನ್ನು ನೋಡಿ ಸ್ವಲ್ಪ ಭಯವಾದರು. ಕಾಡಿನ ಪರಿಚಯ ಇದ್ದ ಕಾರಣ ನಾವು ಸಲೀಸಾಗಿ ಮುಂದೆ ಸಾಗಿದೆವು. ಸುಮಾರು 8km ನಡೆದ ನಾವು, ಕೊನೆಗೂ ದೂರದಲ್ಲಿ ನಮ್ಮ ಕಣ್ಣಿಗೆ ಮಿಂಚುಕಲ್ಲು ಗುಡ್ಡ ಕಂಡಿತು.
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ನುಡಿಗಟ್ಟು ಸತ್ಯ ಎಂಬಂತೆ ಅನಿಸಿತು. ನಮ್ಮ ಚಾರಣ ಮುಂದೆ ಸಾಗುತ್ತ ಸಾಗುತ್ತ ಮತ್ತಷ್ಟು ಕಷ್ಟವಾಗತೊಡಗಿತು. ಕಡಿದಾದ ಬೆಟ್ಟವನ್ನು ಏರಬೇಕಾಗಿತ್ತು. ಸ್ವಲ್ಪ ತಪ್ಪಿದರೂ, ಪಾತಾಳಕ್ಕೆ ಬೀಳುವ ಭಯ. ಅದರೊಡನೆ ಸೂರ್ಯ ನಮ್ಮ ನೆತ್ತಿ ಮೇಲೆ ಬಂದಿದ್ದ. ಸಾಗುತ್ತಿದ್ದ ಬಂಡೆಗಳ ಮೇಲೆ ಕೈ ಇಡಲು ಸಾಧ್ಯವಿಲ್ಲದಷ್ಟು ಬಿಸಿ, ವಿಶ್ರಮಿಸಲು ಕೂಡ ಒಂದು ಸಣ್ಣ ನೆರಳಿಲ್ಲದ ಪ್ರದೇಶ , ಭುವನ್ ನಮ್ಮೊಡನೆ ಅವನ ಮೊದಲ ಚಾರಣವಾದರು ನಮ್ಮಿಂದ ಬಹಳ ಮುಂದೆ ಸಾಗುತ್ತಿದ್ದ. ಅವನೊಡನೆ ನಾವು ಕೂಡ ಮುಂದೆ ಸಾಗಿದೆವು. ಸುಮಾರು 13km ಚಾರಣದ ನಂತರ ನಾವು ಮಿಂಚುಕಲ್ಲು ಗುಡ್ಡದ ಮೇಲೆ ತಲುಪಿದೆವು, ಬೆಟ್ಟದ ತುದಿಯಿಂದ ಕಾಣುತಿದ್ದ ಮತ್ತಷ್ಟು ಬೆಟ್ಟದ ಸಾಲುಗಳು, ಮಧ್ಯಾಹ್ನದ ಬಿಸಿಲಿಗೂ ತಂಪಾಗಿ ಬಿಸುತಿದ್ದ ತಣ್ಣನೆ ಗಾಳಿ ಎಲ್ಲವೂ ಮನಸಿಗೆ , ದೇಹಕ್ಕೆ ಖುಷಿ ನೀಡಿತು.
ಬೆಟ್ಟದ ತುದಿಯಲ್ಲಿಯೆ ನಾವು ಕಟ್ಟಿ ತಂದ ತಿಂಡಿ ತಿಂದು, ಸ್ವಲ್ಪ ಕಾಲ ವಿಶ್ರಮಿಸಿದೆವು. ಬೆಟ್ಟದಲ್ಲಿ ಸುತ್ತಾಡಿ ಫೋಟೋ ತೆಗೆದುಕೊಂಡೆವು. ಬೆಟ್ಟದ ತುದಿಯಿಂದ ಕಾಣುತಿದ್ದ ಕೆಲವೊಂದು ಬೆಟ್ಟವನ್ನು ನಾನು ಹಾಗೂ ಹರ್ಷ ಆದಾಗಲೇ ನೋಡಿದ್ದೆವು. ಅದರ ಖುಶಿ ಒಂದೆಡೆ ಆದರೆ, ಕೆಳಗಡೆ ನೋಡಿದರೆ ಭೂ ಕುಸಿತದ ಕುರುಹು ಕಾಣುತಿತ್ತು. ಆ ಕಡಿದಾದ ಬೆಟ್ಟದ ಮೇಲೂ ಅರಣ್ಯ ಇಲಾಖೆಯ ಫೈರ್ ಪ್ರಿವೆನ್ಷನ್ ಲೈನ್ ನೋಡಿ ಸಂತಸವಾದರು ಕೆಲವೊಂದು ಕಡೆ ಅರಣ್ಯ ಒತ್ತುವರಿ ಹಾಗೂ ಅರಣ್ಯ ನಾಶದ ಕುರುಹು ಬೇಸರ ತಂದಿತು. ಹಾಗೆಯೇ ಮತೊಮ್ಮೆ ಬೆಟ್ಟದ ಸುತ್ತ ನೋಡಿ ಕಣ್ಣು ತುಂಬಿಕೊಂಡೆವು.
ಮಧ್ಯಾಹ್ನ 3 ಗಂಟೆಗೆ ನಾವು ಬೆಟ್ಟದಿಂದ ಇಳಿಯಲು ಆರಂಭಿಸಿದೆವು. ಆದರೆ ಕಡಿದಾದ ಬೆಟ್ಟವನ್ನು ಇಳಿಯುವುದು ಹತ್ತುವ ಕೆಲಸಕ್ಕಿಂತ ಕಷ್ಟಕರವಾದದ್ದು ದೇಹದ ಸಮತೋಲನ ಕಾಯ್ದುಕೊಳ್ಳುವುದು. ಸ್ವಲ್ಪ ನಿಧಾನವಾಗಿ ನಡೆಯುತ್ತಾ, ನೀರಿನ ಝರಿಯ ಬಳಿಗೆ ಬಂದೆವು. ನೀರು ಕುಡಿದು ಬಾಟಲಿಗಳಲ್ಲಿ ತುಂಬಿಕೊಂಡು ತಡಮಾಡದೆ ಅಲ್ಲಿಂದ ಹೊರಟೆವು. ಮತ್ತೆ ಅದೇ ಕಾಡಿನ ಒಳಗಡೆ ತಲುಪಿದೆವು. ಸುಮಾರು 7ಗಂಟೆಗೆ ನಾವು ಇಟ್ಟ ಗಾಡಿಯ ಬಳಿಗೆ ಬಂದೆವು. ನಮ್ಮೊಡನೆ ಬಂದಿದ್ದ ಎಸ್ಟೇಟ್ ಕೆಲಸಗಾರ ಒಳ್ಳೆಯ ಮಾರ್ಗದರ್ಶನ ನೀಡುತ್ತ ಬಂದಿದ್ದರಿಂದ ಅವನಿಗೆ ಸ್ವಲ್ಪ ಹಣ್ಣವನ್ನು ಕೊಟ್ಟು ಎಸ್ಟೇಟ್ ಸೆಕ್ಯೂರಿಟಿಗೆ ಧನ್ಯವಾದ ತಿಳಿಸಿದೆವು. ಅಲ್ಲಿಂದ ನಮ್ಮ ಮನೆಗೆ ಹೊರಡಲು ಶುರುಮಾಡಿದೆವು. ರಾತ್ರಿ 9 ಗಂಟೆಗೆ ಮನೆ ತಲುಪಿದೆವು. 26km ಚಾರಣ ಆದ್ದರಿಂದ ನಮ್ಮ ಕಾಲು 4-5 ದಿನಗಳ ಕಾಲ ನೋವಿನಲ್ಲಿ ಒದ್ದಾಡುತ್ತಿತ್ತು.
-ಶಿವರಾಮ ಕಿರಣ, ಉಜಿರೆ