Advertisement
ದಾರಿ ತಪ್ಪಿ ಹೆಜ್ಜೆ ಹಾಕುತ್ತಿದ್ದ ಕಾರಂತರು ಅಪರಿಚಿತರನ್ನನುಸರಿಸಿ ಊಹಿಸಿರದ ತಾಣಕ್ಕೆ ಕಾಲಿಡುತ್ತಾರೆ. ಮಾನವರ ಇರುವಿಕೆಯನ್ನೇ ಸಂದೇಹಿಸುವಂತಹ ಹಾದಿಯಲ್ಲಿ ಮುಂದುವರೆದವರಿಗೆ, ಹಿರಿಯ ದಂಪತಿಯಿಂದ ಆತ್ಮೀಯ ಸ್ವಾಗತ ಸಿಗುತ್ತದೆ. ಹಿಂದಿನ ರಾತ್ರಿ ಅತಿಥಿಯಾಗಿ ಬಂದಿದ್ದವರು, ಮರುದಿನ ಮುಂಜಾನೆ ಮನೆಯವರಲ್ಲೊಬ್ಬರಂತೆ ಬೆರೆತುಬಿಡುತ್ತಾರೆ.
Related Articles
Advertisement
ನಾರಾಯಣನ ಮೇಲೆ ಅವರಿಬ್ಬರಿಗಿದ್ದ ಪ್ರೀತಿಯನ್ನು ನೋಡುತ್ತ, ಅವರ ಮಗ ಶಂಭು ಜೊತೆಗಿದ್ದಿದ್ದರೆ ಹೇಗಿರುತ್ತಿತ್ತೆಂದು ನೆನೆಯುತ್ತ, ಅವನನ್ನೆಲ್ಲೋ ಕಂಡ ಹಾಗೆನಿಸುತ್ತಿದ್ದುದರಿಂದ ನೆನಪಿಸಿಕೊಳ್ಳಲು ಪ್ರಯತ್ನಿಸುತ್ತ ಅಲ್ಲಿದ್ದಷ್ಟು ದಿನ ಆ ಜನರ ಅಕ್ಕರೆಯಲ್ಲಿ ಮಿಂದೆದ್ದರು. ತನಗಾಶ್ರಯವಿತ್ತವರ ಮನದಾಳದ ತೊಳಲಾಟವನ್ನು ಗ್ರಹಿಸಿ, ಅರ್ಥೈಸಿಕೊಂಡು ಅವುಗಳಿಗೆ ಪದಗಳ ರೂಪವನ್ನಿತ್ತು ಕಾರಂತರು ಓದುಗರಿಗೆ ಉಣಬಡಿಸಿದ್ದಾರೆ.
ಕಣ್ಣು ಹಾಯಿಸಿದಲ್ಲೆಲ್ಲಾ ಹಸುರು, ಸುತ್ತ ಮಲೆಗಳ ಮಾಲೆ, ಹೆಬ್ಟಾವಿನಂತೆ ಹರಿಯುವ ಕೊರೆಯುವ ತಂಪಾದ ನದಿ, ನಡುವೆ ಮಲಗಿದ ಹಾದಿ, ಮನೆ ತಲುಪಿದ ಮೇಲೆ ಎಣ್ಣೆ ಮಜ್ಜನ, ಭೋಜನಾನಂತರದ ತಾಂಬೂಲ ಸೇವನೆ ಹಾಗೂ ಹರಟೆಗಳ ಮೂಲಕ ಅಲ್ಲಿನವರ ಜೀವನಶೈಲಿಯನ್ನು ಬಣ್ಣಿಸುವ ಕಾರಂತರು, ಕಾಡಿದ್ದ ಜಾಗದಲ್ಲಿ ತಲೆಯೆತ್ತಿದ ತೋಟ, ಬೇಲಿಯ ಪರಿವೆಯಿಲ್ಲದೆ ವಿಸ್ತರಿಸಿದ ಗದ್ದೆ, ಕಾಡುಪ್ರಾಣಿಗಳ ಉಪದ್ರ, ಹೆಜ್ಜೆ ಹೆಜ್ಜೆಗೂ ಹುಲಿಯ ಹೆದರಿಕೆ, ಶಾದೂìಲನ ಬೇಟೆಗಳಂತಹ ಪ್ರಸಂಗಗಳನ್ನು ಸೇರಿಸಿ ಸ್ವಾರಸ್ಯಮಯಗೊಳಿಸಿದ್ದಾರೆ.
ಇದೆಲ್ಲ ಕಣ್ಣಿಗೆ ಕಾಣುವ ವಿಚಾರಗಳಾದರೆ, ಕಥೆಯಲ್ಲಿ ಬರುವ ಪ್ರತಿ ಪಾತ್ರದ ಆಂತರ್ಯವನ್ನರಿತು, ಅನ್ಯರಿಗೆ ಅರ್ಥೈಸುವ ಪ್ರಾವೀಣ್ಯತೆ ಶಿವರಾಮ ಕಾರಂತರದ್ದು. ಬಿಟ್ಟುಹೋದವರು ಮತ್ತೆ ಬೇಡವೆನ್ನುವ ಮೆದುಳು ಮತ್ತು ಮಗನ ಮೇಲಿನ ಮಮತೆಯ ಒರತೆಯನ್ನು ತನ್ನೊಳಗಡಗಿಸಿಕೊಂಡ ಮನಸ್ಸಿನ ಕಾದಾಟ, ಮಗನನ್ನು ಕಾಣಬಯಸಿದರೂ ಕಾಣಲಾಗದ ತಾಯಿಯ ತೊಳಲಾಟ, ತನ್ನನ್ನು ಸಾಕಿದವರನ್ನು ತಂದೆತಾಯಿಗಳ ಸ್ಥಾನದಲ್ಲಿಟ್ಟು ಆರಾಧಿಸುವವನ ಭವಿಷ್ಯದ ಕುರಿತಾದ ಚಿಂತೆ ಮತ್ತು ಚಿಂತನೆಗಳು. ಕೆಲಕಾಲ ಎಲ್ಲವನ್ನೂ ಮರೆಸಿ ಮನಸ್ಸನ್ನು ಮುದಗೊಳಿಸುವ ಮಕ್ಕಳ ತುಂಟಾಟ, ಹೀಗೆ ಕಥೆಗೆ ಜೀವ ತುಂಬುವ ಭಾವನೆಗಳಿಗೆ ಕೊರತೆಯಾಗದಂತೆ ಅವರು ಕಾಳಜಿವಹಿಸಿದ್ದಾರೆ.
ಕೊನೆಗಾಲದಲ್ಲಿ ಭಟ್ಟರಿಗೆ ಅವರ ಮಗ ಆಸರೆಯಾದನೋ ಇಲ್ಲವೋ, ಆದರೆ ಕಥೆಯ ಕೊನೆಯಲ್ಲಿ ಅದು ಓದುಗರ ಮನಸ್ಸಿನಲ್ಲಿ ಬಿಟ್ಟುಹೋಗುವ ಗುರುತು ಮರೆಯುವಂಥದ್ದಲ್ಲ.
–ಮೈತ್ರಿ ಎಸ್. ಅಶ್ವತ್ಥಪುರ
ಸಂತ ಅಲೋಶಿಯಸ್ ಕಾಲೇಜು, ಮಂಗಳೂರು